ಮುಂಬೈ: ಎಷ್ಟೋ ಸಂದರ್ಭಗಳಲ್ಲಿ ನಮ್ಮ ಶಿಕ್ಷಣಕ್ಕೂ, ಮಾಡುವ ಕೆಲಸಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ಕೆಲಸ ಮಾಡುವ ಅನಿವಾರ್ಯತೆಯಿದ್ದಾಗ ಎಂತಹ ಕೆಲಸವನ್ನಾದರೂ ಮಾಡಲೇಬೇಕಾಗುತ್ತದೆ. ಮಹಾರಾಷ್ಟ್ರದ ನಿವಾಸಿಯಾದ ಗಣೇಶ್ ದುಧನಾಲೆ ಅವರು ಗುಜರಾತ್‌ನ ವಾಪಿಯಲ್ಲಿರುವ ಖಾಸಗಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿದ್ದರು. ಪ್ರತಿಯೊಬ್ಬರಿಗೂ ದುಡಿದು, ತಮ್ಮ ಕನಸುಗಳೆಲ್ಲವನ್ನೂ ಈಡೇರಿಸಿಕೊಳ್ಳಬೇಕೆಂಬ ಆಸೆ ಇರುತ್ತದೆ. ಇಂಜಿನಿಯರಿಂಗ್ ಓದುತ್ತಿರುವವರು ಕ್ಯಾಂಪಸ್ ಸೆಲೆಕ್ಷನ್ ಆದರೆ ಸಾಕಪ್ಪಾ ಎಂದು ದೇವರಲ್ಲಿ ಬೇಡಿಕೊಳ್ಳುತ್ತಿರುತ್ತಾರೆ. ವಿಚಿತ್ರವೆಂದರೆ ಇಂಜಿನಿಯರಿಂಗ್ ಪದವಿ ಪಡೆದ ಶೇ. 30ರಷ್ಟು ವಿದ್ಯಾರ್ಥಿಗಳು ತಾವು ಓದಿದ ಕ್ಷೇತ್ರವನ್ನು ಬಿಟ್ಟು ಬೇರೆ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಇಂಜಿನಿಯರಿಂಗ್ ಓದಿ, ಚಹಾ ಅಂಗಡಿಯಿಟ್ಟು ತಿಂಗಳಿಗೆ ಲಕ್ಷ-ಲಕ್ಷ ರೂ. ಎಣಿಸುತ್ತಿರುವ ಯುವಕನ ಕತೆಯಿದು.
ಮೂರು ವರ್ಷಗಳ ಹಿಂದೆ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗೆ ಕುಳಿತಾಗ ಕಂಗಾಲಾಗಿದ್ದೆ ಎಂದು ನೆನಪಿಸಿಕೊಳ್ಳುತ್ತಾರೆ ಗಣೇಶ್ ಎಂಬ ಮಹಾರಾಷ್ಟ್ರದ ಯುವಕ. ಅವರು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ ಕಂಪನಿಗಳು ಅವರಿಗೆ ತಿಂಗಳಿಗೆ 12,000 ರೂ.ಗಿಂತ ಹೆಚ್ಚು ಸಂಬಳ ನೀಡಲು ಒಪ್ಪಲಿಲ್ಲ. ನಾನು ಜೂನ್ 2019ರಲ್ಲಿ ಪದವಿ ಪಡೆದಿದ್ದೆ. ಜುಲೈನಲ್ಲಿ ಉದ್ಯೋಗದ ಆಫರ್ಗಳು ಬರತೊಡಗಿದವು. ಆದರೆ ನನ್ನ ಕೌಶಲ್ಯ ಮತ್ತು ಜ್ಞಾನಕ್ಕೆ ಸರಿಯಾದ ಪ್ಯಾಕೇಜ್ ಸಿಗಲಿಲ್ಲ ಎಂದು ಅವರು ದಿ ಬೆಟರ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಚಹಾ ವ್ಯಾಪಾರವು ಯಾವಾಗಲೂ ನನ್ನ ಮನಸ್ಸಿನಲ್ಲಿತ್ತು ಎಂದು ಅವರು ಹೇಳಿದ್ದಾರೆ. ನಾನು ಕೂಡ ಭಾರತದ ಅತ್ಯಂತ ಜನಪ್ರಿಯ ಪಾನೀಯವಾದ ಚಹಾದ ಅಭಿಮಾನಿ. ಹಾಗಾಗಿ ನನ್ನ ಕೊನೆಯ ಸೆಮಿಸ್ಟರ್ ಸಮಯದಲ್ಲಿ ನಾನು ಬ್ಯಾಕಪ್ ಯೋಜನೆಯಾಗಿ ಚಹಾ ವ್ಯಾಪಾರದ ಬಗ್ಗೆ ಸಂಶೋಧನೆ ಮಾಡಲು ಪ್ರಾರಂಭಿಸಿದೆ. ಇದೀಗ ಚಾಯ್ ಮೇಕರ್ಸ್ – ಬೈ ಇಂಜಿನಿಯರ್ಸ್ ಎಂಬ ಚಹಾ ಶಾಪ್ ಪ್ರಸಿದ್ಧಿ ಪಡೆದಿದ್ದು, 7 ಬ್ರಾಂಚ್ಗಳನ್ನು ಕೂಡ ತೆರೆದಿದ್ದೇವೆ ”ಎಂದು ಅವರು ವಿವರಿಸುತ್ತಾರೆ.
ನಾನು ಮಹಾರಾಷ್ಟ್ರದ ಲಾತೂರ್‌ಗೆ ಸೇರಿದವನು, ಅಲ್ಲಿ ನನ್ನ ತಂದೆ ಕಿರಾಣಿ ಅಂಗಡಿಯನ್ನು ನಡೆಸುತ್ತಿದ್ದಾರೆ. ಚಹಾ ವ್ಯಾಪಾರದ ಕಲ್ಪನೆಯು ಅವರಿಗೆ ಇಷ್ಟವಾಗಲಿಲ್ಲ. ಹಾಗಾಗಿ ನಾನು ಅವರಿಗೆ ಕ್ಯೂಎಸ್‌ಆರ್ ಪರಿಕಲ್ಪನೆ ಮತ್ತು ಆಧುನಿಕ ಸ್ಪರ್ಶದೊಂದಿಗೆ ಆರೋಗ್ಯಕರ ಚಹಾವನ್ನು ಹೇಗೆ ಜನಸಾಮಾನ್ಯರಿಗೆ ನೀಡಬಹುದು ಎಂದು ವಿವರಿಸಿದೆ ಎಂದು ಅವರು ಹೇಳುತ್ತಾರೆ. ಬಳಿಕ, ನಾನು ನನಗೆ ಸಿಕ್ಕಿದ್ದ ಇಂಜಿನಿಯರಿಂಗ್ ಕೆಲಸ ಬಿಟ್ಟು ಅಪ್ಪನಿಂದ 6 ಲಕ್ಷ ರೂ. ಪಡೆದು ಚಹಾದ ಅಂಗಡಿ ಶುರು ಮಾಡಿದೆ ಎಂದು ಗಣೇಶ್ ಹೇಳುತ್ತಾರೆ.
2019ರಲ್ಲಿ ಗಣೇಶ್ ಚೈಮೇಕರ್ ಬ್ರ್ಯಾಂಡ್ ಅಡಿಯಲ್ಲಿ ವಿಶಿಷ್ಟವಾದ ಚಹಾಗಳನ್ನು ನೀಡುವ ವಾಪಿ ರೈಲ್ವೆ ನಿಲ್ದಾಣದಲ್ಲಿ ಸಣ್ಣ ಕಿಯೋಸ್ಕ್ ಅನ್ನು ಸ್ಥಾಪಿಸಲು ಹಣವನ್ನು ಹೂಡಿಕೆ ಮಾಡಿದರು. ಮಸಾಲೆ ಟೀ, ಶುಂಠಿ, ಏಲಕ್ಕಿ ಮುಂತಾದ ಸಾಂಪ್ರದಾಯಿಕ ಸುವಾಸನೆಗಳೊಂದಿಗೆ ಇತರ ಟೀಗಳನ್ನು ನೀಡುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಚಹಾದ ಉತ್ಪನ್ನದ ಸಂಶೋಧನೆ ಮತ್ತು ಅಭಿವೃದ್ಧಿಗೆ ಸ್ವಲ್ಪ ಹಣವನ್ನು ಖರ್ಚು ಮಾಡಿದೆ. ಬೇರೆಯವರಿಗಿಂತ ಭಿನ್ನವಾಗಿರಬೇಕೆಂದು ನಾನು ಮಾವು, ಸ್ಟ್ರಾಬೆರಿ, ಗುಲಾಬಿ, ಬಾಳೆಹಣ್ಣು, ಹಾಟ್ ಚಾಕೊಲೇಟ್ ಮತ್ತು ಇತರ ಹಣ್ಣಿನ ಸುವಾಸನೆಗಳನ್ನು ಒಳಗೊಂಡಂತೆ ಎಂಟು ವಿಧದ ಚಹಾಗಳನ್ನು ಪರಿಚಯಿಸಿದೆ. ನನ್ನ ಚಹಾವನ್ನು ಸಿರಪ್ ಅಥವಾ ದ್ರವ ರೂಪದಲ್ಲಿ ನೀಡುವುದಿಲ್ಲ. ಚಹಾವನ್ನು ಪ್ರೀಮಿಕ್ಸ್ ಪುಡಿಯಾಗಿ ಪರಿಚಯಿಸಿದೆ. ಇದರಿಂದ ಜನರು ಆ ಚಹಾದ ಬ್ಯಾಗ್ ಅನ್ನು ಬಿಸಿ ನೀರಿನಲ್ಲಿ ಮುಳುಗಿಸಿ, ಎಲ್ಲಿ ಬೇಕಾದರೂ ತಮಗೆ ಬೇಕಾದ ಫ್ಲೇವರ್ನ ಚಹಾ ತಯಾರಿಸಿಕೊಂಡು ಕುಡಿಯಬಹುದು. ಇದೇ ಕಾರಣಕ್ಕೆ ನಮ್ಮ ಚಹಾ ಪ್ರಸಿದ್ಧಿಯಾಯಿತು ಎನ್ನುತ್ತಾರೆ ಗಣೇಶ್.
ಇನ್ನಷ್ಟು ಯಶಸ್ವಿ ಕತೆಗಳ ಕುರಿತು ಓದಲು ಇಲ್ಲಿ ಕ್ಲಿಕ್ ಮಾಡಿ
ಚಹಾ ಶಾಪ್ನ ಎರಡನೇ ಔಟ್‌ಲೆಟ್ 2020ರಲ್ಲಿ ಸೂರತ್‌ನಲ್ಲಿ ಪ್ರಾರಂಭವಾಯಿತು. ಹಣ್ಣಿನ ಸುವಾಸನೆಯ ಹೊರತಾಗಿ, ಬಟರ್‌ಸ್ಕಾಚ್, ವೆನಿಲ್ಲಾ ಮತ್ತು ಕ್ಯಾರಮೆಲ್‌ನಂತಹ ರುಚಿಯ ಐಸ್ ಕ್ರೀಮ್‌ನ ಫ್ಲೇವರ್ನ ಚಹಾವನ್ನು ಕೂಡ ಪರಿಚಯಿಸಿದರು. ಅವರ ಔಟ್ಲೆಟ್ಗಳಲ್ಲಿ ಈಗ 20 ವಿಧದ ಚಹಾ ಮತ್ತು 15 ವಿಧದ ಕಾಫಿಗಳಿವೆ. ನಾವು ನಮ್ಮ ಗ್ರಾಹಕರಿಗೆ ಶೇಕ್ಸ್ ಮತ್ತು ತಿಂಡಿಗಳಂತಹ ತಂಪು ಪಾನೀಯಗಳನ್ನು ಸಹ ನೀಡುತ್ತೇವೆ ಎಂದು ಅವರು ವಿವರಿಸಿದ್ದಾರೆ. ಗಣೇಶ್ ಅವರ ಚಹಾದ ಅಂಗಡಿಯಲ್ಲಿ ಬನಾರಸಿ ಪಾನ್ ಪರಿಮಳವನ್ನು ಹೊಂದಿರುವ ಚಹಾ ಕೂಡ ಇದೆ. ಅಲ್ಲಿ ದೊರೆಯುವ ಎಲ್ಲಾ ಸುವಾಸನೆಗಳು ನೈಸರ್ಗಿಕವಾಗಿರುತ್ತವೆ ಮತ್ತು ಯಾವುದೇ ಕೃತಕ ಪದಾರ್ಥಗಳನ್ನು ಹೊಂದಿರುವುದಿಲ್ಲ.
ಅಂದಿನಿಂದ ಗಣೇಶ್ ಹಿಂತಿರುಗಿ ನೋಡಲೇ ಇಲ್ಲ. ಇದೀಗ ಅವರು ಏಳು ಔಟ್‌ಲೆಟ್‌ಗಳನ್ನು ಹೊಂದಿದ್ದಾರೆ, ಪ್ರತಿಯೊಂದೂ ದಿನಕ್ಕೆ ಅಂದಾಜು 8,000 ರೂ.ಗಳನ್ನು ಗಳಿಸುತ್ತಿದೆ. ಅಂದರೆ, ಗಣೇಶ್ ತಿಂಗಳಿಗೆ 3 ಲಕ್ಷ ರೂ.ಗಳ ಮಾಸಿಕ ಆದಾಯವನ್ನು ಗಳಿಸುತ್ತಿದ್ದಾರೆ. ಗಣೇಶ್ ಈಗ ಗುಜರಾತ್‌ನಲ್ಲಿ 100 ಮತ್ತು ಭಾರತದ ನಗರಗಳಲ್ಲಿ ಸುಮಾರು 1,000 ಔಟ್‌ಲೆಟ್‌ಗಳನ್ನು ತೆರೆಯಲು ಪ್ಲಾನ್ ಮಾಡಿದ್ದಾರೆ.