ಸೈಕಲ್​​ನಲ್ಲಿ ಫುಡ್​ ಡೆಲಿವರಿ ಕೊಡುತ್ತಿದ್ದ ಬಡ ಯುವಕನಿಗೆ ಬೈಕ್​ ಖರೀದಿಸಿಕೊಟ್ಟ ಮಧ್ಯಪ್ರದೇಶ ಪೊಲೀಸರು; ಹುಡುಗನೀಗ ಫುಲ್​ ಖುಷ್​ !

ಆತ 22 ವರ್ಷದ ಯುವಕ. ನಾವು ರಾತ್ರಿ ಪಾಳಿಯ ಗಸ್ತು ತಿರುಗುತ್ತಿದ್ದಾಗಲೂ ಇವನ ಶ್ರಮ ನೋಡಿದ್ದೇವೆ. ಬೆವರುತ್ತ ಸೈಕಲ್​ ಹೊಡೆದುಕೊಂಡು ಹೋಗುತ್ತಿದ್ದ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಸೈಕಲ್​​ನಲ್ಲಿ ಫುಡ್​ ಡೆಲಿವರಿ ಕೊಡುತ್ತಿದ್ದ ಬಡ ಯುವಕನಿಗೆ ಬೈಕ್​ ಖರೀದಿಸಿಕೊಟ್ಟ ಮಧ್ಯಪ್ರದೇಶ ಪೊಲೀಸರು; ಹುಡುಗನೀಗ ಫುಲ್​ ಖುಷ್​ !
ಯುವಕನಿಗೆ ಬೈಕ್​ ಕೊಟ್ಟ ಪೊಲೀಸರು
Edited By:

Updated on: May 03, 2022 | 7:12 PM

ಆನ್​ಲೈನ್​ ಫುಡ್​ ಡೆಲಿವರಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ 22 ವರ್ಷದ ಯುವಕನಿಗೆ ಪೊಲೀಸರು ಒಂದು ಬೈಕ್​ ಖರೀದಿಸಿಕೊಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆಹಾರವನ್ನು ಮನೆಬಾಗಿಲಿಗೆ ತಲುಪಿಸುವ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವಕ, ಫುಡ್​ ಡೆಲಿವರಿ ಕೊಡಲು ಸೈಕಲ್ ಬಳಸುತ್ತಿದ್ದ. ಇದರಿಂದ ಅವನಿಗೆ ತುಂಬ ಕಷ್ಟವೂ ಆಗುತ್ತಿತ್ತು. ಅದನ್ನು ನೋಡಿದ ಇಂಧೋರ್​ನ ಕೆಲವರು ಪೊಲೀಸರು ಮಾನವೀಯತೆ ದೃಷ್ಟಿಯಿಂದ ಆತನಿಗೆ ಬೈಕ್​ ಕೊಟ್ಟಿದ್ದಾರೆ.  

ವಿಜಯನಗರ ಪೊಲೀಸ್ ಠಾಣೆಯ ಉಸ್ತುವಾರಿ ತೆಹಜೀಬ್ ಖಾಜಿ ಈ ಬಗ್ಗೆ ಮಾಹಿತಿ ನೀಡಿದ್ದು, ಆತ 22 ವರ್ಷದ ಯುವಕ. ನಾವು ರಾತ್ರಿ ಪಾಳಿಯ ಗಸ್ತು ತಿರುಗುತ್ತಿದ್ದಾಗಲೂ ಇವನ ಶ್ರಮ ನೋಡಿದ್ದೇವೆ. ಬೆವರುತ್ತ ಸೈಕಲ್​ ಹೊಡೆದುಕೊಂಡು ಹೋಗುತ್ತಿದ್ದ. ಒಂದು ದಿನ ಹೆಸರು ಕೇಳಿದಾಗ ಜೈ ಹಾಲ್ಡೆ ಎಂದು ಹೇಳಿದ್ದಾನೆ.  ಸೈಕಲ್ ಮೇಲೆ ಆಹಾರದ ಬ್ಯಾಗ್ ಇಟ್ಟುಕೊಂಡು ಆತ ಪಡುತ್ತಿದ್ದ ಶ್ರಮವನ್ನು ನೋಡಿ ನಮಗೇ ಬೇಸರವಾಗುತ್ತಿತ್ತು. ಹೀಗೆ ವಿಚಾರಿಸಿದಾಗ, ಆತ ತಾವು ತುಂಬ ಬಡವರು. ಮನೆಯಲ್ಲಿ ಹಣಕಾಸಿನ ಸಮಸ್ಯೆ ಇರುವುದರಿಂದ ಬೈಕ್​ ಖರೀದಿ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಹೇಳಿದ್ದ. ಹೀಗಾಗಿ ನಾವೆಲ್ಲರೂ ಸ್ವಲ್ಪ ಹಣ ಹಾಕಿ, ಶೋರೂಂಗೆ ಪಾವತಿ ಮಾಡಿ ಬೈಕ್​ ಖರೀದಿಸಿ ಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಇನ್ನು ಉಳಿದ ಹಣವನ್ನು ನಾನೇ ತುಂಬಿಕೊಳ್ಳುವುದಾಗಿ ಹೇಳಿರುವ ಹಾಲ್ಡೆ, ಪೊಲೀಸ್ ಸಿಬ್ಬಂದಿಗೆ ಧನ್ಯವಾದ ಹೇಳಿದ್ದಾನೆ. ಈ ಮೊದಲು ನಾನು 6-8 ಪಾರ್ಸೆಲ್​ ಮಾತ್ರ ನೀಡಲು ಸಾಧ್ಯವಾಗುತ್ತಿತ್ತು. ಆದರೆ ಈಗ ದಿನಕ್ಕೆ 15-20 ಪಾರ್ಸೆಲ್​ ಕೊಡುತ್ತಿದ್ದೇನೆ. ರಾತ್ರಿಯೂ ಆರಾಮಾಗಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.  ಈ ಸುದ್ದಿ ಈಗಾಗಲೇ ವೈರಲ್ ಆಗಿದ್ದು, ಪೊಲೀಸರ ನಡೆಗೆ ಶ್ಲಾಘನೆ ವ್ಯಕ್ತವಾಗಿದೆ.

ಇದನ್ನೂ ಓದಿ: ಇನ್ನು ಎರಡು ಮೂರು ದಿನಗಳಲ್ಲಿ ಮಾಹಿತಿ ಬಿಚ್ಚಿಡುತ್ತೇನೆ, ನಾರು ಯಾರನ್ನೂ ಟಾರ್ಗೆಟ್​ ಮಾಡಲ್ಲ: ಮಾಜಿ ಸಿಎಂ ಕುಮಾರಸ್ವಾಮಿ

Published On - 5:50 pm, Mon, 2 May 22