ಮೋಸ ಹೋಗುವವರು ಇರುವವರೆಗೆ ಮೋಸ ಮಾಡುವವರು ಇದ್ದೇ ಇರುತ್ತಾರೆ ಎನ್ನುವ ಮಾತೊಂದಿದೆ. ಅದರಲ್ಲೂ ಇದು ಮೋಸ, ವಂಚನೆಯೇ ತುಂಬಿ ತುಳುಕುತ್ತಿರುವ ಕಾಲ. ಇಲ್ಲಿ ಎಷ್ಟು ಜಾಗರೂಕರಾಗಿದ್ದರೂ ಕಮ್ಮಿಯೇ. ಹೀಗೆ ಬಣ್ಣದ ಮಾತುಗಳನ್ನು ನಂಬಿ ಮೋಸ ಹೋದವರು ಹಲವರಿದ್ದಾರೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಸಾಲ ಕೊಟ್ಟರೆ ನಿಮಗೆ ಬಡ್ಡಿಯೆಲ್ಲಾ ಸೇರಿ ದುಪ್ಪಟ್ಟು ಹಣ ಗಳಿಸಬಹುದು ಎಂದು ಹೇಳಿ ಉದ್ಯಮಿಯೊಬ್ಬ ಭಿಕ್ಷುಕನಿಂದ ಬರೋಬ್ಬರಿ 50 ಸಾವಿರ ರೂಪಾಯಿ ಹಣವನ್ನು ಪಡೆದು, ಇದೀಗ ಕೊಟ್ಟ ಸಾಲವನ್ನು ವಾಪಸ್ ಕೊಡದೆ ಬಡ ಭಿಕ್ಷುಕನಿಗೆ ಪಂಗನಾಮ ಹಾಕಿದ್ದಾನೆ. ಈ ಸುದ್ದಿ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ತೆಲಂಗಾಣದ ಖಮ್ಮಂ ಜಿಲ್ಲೆಯಲ್ಲಿ ನಡೆದಿದ್ದು, ಇಲ್ಲಿನ ಉದ್ಯಮಿಯೊಬ್ಬ ಭಿಕ್ಷುಕನಿಂದ ಸಾಲ ಪಡೆದು, ಇದೀಗ ಕೊಟ್ಟ ಸಾಲವನ್ನು ವಾಪಸ್ ನೀಡದೆ ವಂಚಿಸಿದ್ದಾನೆ. ಬೋನಕಲ್ ಮಂಡಲದ ಹೊಟೇಲ್ ಉದ್ಯಮಿ ನರಸಿಂಹರಾವ್ ಭಿಕ್ಷುಕ ಅಶೋಕ್‌ನಿಂದ ಬರೋಬ್ಬರಿ 50 ಸಾವಿರ ರೂ. ಗಳಷ್ಟು ಸಾಲವನ್ನು ಪಡೆದಿದ್ದ. ಕೊಟ್ಟ ಸಾಲವನ್ನು ವಾಪಸ್ ಕೇಳಿದ್ದಕ್ಕೆ ಇದೀಗ ಉದ್ಯಮಿ ಭಿಕ್ಷುಕನಿಗೆ ಐಪಿ ನೋಟಿಸ್ ನೀಡಿದ್ದಾನೆ. ಭಿಕ್ಷುಕ ಅಶೋಕ್ ತನ್ನ ಪತ್ನಿಯ ಜೊತೆ ಸೇರಿ ಇಲ್ಲಿನ ಸಾಯಿ ಬಾಬಾ ದೇವಸ್ಥಾನದ ಬಳಿ ಭಿಕ್ಷೆ ಬೇಡುವ ಕಾಯಕದಲ್ಲಿ ತೊಡಗಿದ್ದ. ಹೀಗೆ ಭಿಕ್ಷೆ ಬೇಡಿ ಬಂದ ಹಣವನ್ನು ತನ್ನ ಮಗುವಿನ ವಿದ್ಯಾಭ್ಯಾಸಕ್ಕಾಗಿ ಕೂಡಿಟ್ಟಿದ್ದನು.
ಇದನ್ನೂ ಓದಿ: ಛೀ ಛೀ… ಕೊಚ್ಚೆ ನೀರಲ್ಲಿ ನಿಂಬೆ ಜ್ಯೂಸ್ ಮಾಡಿ ಕುಡಿದ ಆಸಾಮಿ
ಆ ಸಂದರ್ಭದಲ್ಲಿ ಬಂದಂತಹ ಉದ್ಯಮಿ ನರಸಿಂಹರಾವ್ ನೀವು ಹೀಗೆ ಹಣವನ್ನು ಕೂಡಿಡುವ ಬದಲು ಸಾಲದ ರೂಪದಲ್ಲಿ ಆ ಹಣವನ್ನು ನನಗೆ ಕೊಡು, ಆಗ ನಿನಗೆ ಬಡ್ಡಿ ಸಮೇತ ದುಪ್ಪಟ್ಟು ಹಣ ಬರುತ್ತದೆ ಎಂದು ನಂಬಿಸುತ್ತಾನೆ. ಈತನ ಬಣ್ಣದ ಮಾತುಗಳನ್ನು ನಂಬಿದ ಭಿಕ್ಷುಕ ಉದ್ಯಮಿಗೆ 50 ಸಾವಿರ ರೂ. ಹಣವನ್ನು ನೀಡುತ್ತಾನೆ. ಅಂದಿನಿಂದ ಇಂದಿನವರೆಗೂ ಉದ್ಯಮಿ ಕೊಟ್ಟ ಹಣ ಬಿಡಿ ಬಡ್ಡಿ ಹಣವನ್ನು ಕೊಟ್ಟಿಲ್ಲ. ಈತ ಭಿಕ್ಷುಕನಿಗೆ ಮಾತ್ರವಲ್ಲದೆ ಇದೇ ರೀತಿ 69 ಜನರಿಂದ ಸಾಲ ಪಡೆದು ಅವರಿಗೆಲ್ಲಾ ಪಂಗನಾಮ ಹಾಕಿದ್ದಾನೆ. ಹೌದು ಸಿವಿಲ್ ನ್ಯಾಯಾಲಯದಲ್ಲಿ ತಾನು ದಿವಾಳಿಯೆಂದು ಅರ್ಜಿ ಸಲ್ಲಿಸಿ, ಅಲ್ಲಿಂದ ಸಾಲ ಕೊಟ್ಟವರಿಗೆಲ್ಲಾ ಐಪಿ ನೋಟಿಸ್ ನೀಡಿದ್ದಾನೆ. ಉದ್ಯಮಿಯಿಂದಾದ ಮೋಸಕ್ಕೆ ಇದೀಗ ಭಿಕ್ಷುಕ ಅಶೋಕ್ ಕಂಗಾಲಾಗಿದ್ದಾನೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ