ಇಂದಿನ ಪೈಪೋಟಿ ಯುಗದಲ್ಲಿ ಯಾವ ರೆಸ್ಟೋರೆಂಟ್ನಲ್ಲಿ ಹೆಚ್ಚಿನ ರುಚಿ ನೀಡಲಾಗತ್ತೊ ಅಲ್ಲಿ ಗ್ರಾಹಕರು ಹೆಚ್ಚಿರುತ್ತಾರೆ. ಹೀಗಾಗಿ ಶೆಫ್ಗಳು ಕೂಡ ವಿಭಿನ್ನ, ವಿಶೇಷ ರೆಸಿಪಿಗಳ ಮೊರೆ ಹೋಗುತ್ತಾರೆ. ಆದರೆ ಲಾಸ್ ವೇಗಾಸ್ನ ರೆಸ್ಟೋರೆಂಟ್ವೊಂದು ತನ್ನ ಆಹಾರಗಳಲ್ಲಿ ಗಾಂಜಾ ಬೆರೆಸುವ ಮೂಲಕ ಗ್ರಾಹಕರಿಗೆ ನಶೆ ಭರಿತ ರುಚಿ ನೀಡುತ್ತಿದೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿದೆ. ದಿ ಸೀಕ್ರೆಟ್ ಆಫ್ ಸಿಯಾಮ್ ಎಂಬ ಹೆಸರಿನ ಈ ಥಾಯ್ ರೆಸ್ಟೋರೆಂಟ್ ವಿರುದ್ಧ ಅನೇಕ ಜನರು ದೂರುಗಳನ್ನು ನೀಡಿದ್ದಾರೆ. ಈ ರೆಸ್ಟೋರೆಂಟ್ನಲ್ಲಿ ಆಹಾರ ಸೇವಿಸಿದ ಬಳಿಕ ನಶೆಯಲ್ಲಿ ತೇಲುತ್ತಿರುವಂತ ಅನುಭವ ಅನೇಕರಿಗೆ ಉಂಟಾಗಿದೆ. ವಿಶೇಷ ಮಸಾಲೆ ಎಂಬ ಹೆಸರಿನಲ್ಲಿ ಕೆಲ ಆಹಾರಗಳನ್ನು ಗ್ರಾಹಕರ ಮುಂದಿಡಲಾಗುತ್ತಿತ್ತು. ಈ ಆಹಾರಗಳನ್ನು ಸೇವಿಸಿದ ಅನೇಕರಿಗೆ ಅಮಲಿನಲ್ಲಿ ತೇಲಿದ ಅನುಭವವಾಗುತ್ತಿತ್ತು. ಇದನ್ನು ಕೆಲವರು ಇಷ್ಟಪಟ್ಟಿದ್ದರು. ಹೀಗಾಗಿಯೇ ರೆಸ್ಟೋರೆಂಟ್ನ ವ್ಯವಹಾರ ಕೂಡ ಉತ್ತಮಗೊಂಡಿತು.
ಆದರೆ ಇತ್ತೀಚೆಗೆ ದಿ ಸೀಕ್ರೆಟ್ ಆಫ್ ಸಿಯಾಮ್ನಲ್ಲಿ ಸೂಪ್ ಸೇವಿಸಿದ್ದ ಸಮಂತಾ ಡಯಾಸ್ ಎಂಬ ಮಹಿಳೆಯು ಅಸ್ವಸ್ಥರಾಗಿದ್ದಾರೆ. ಅಲ್ಲದೆ ಆಕೆಗೆ ಹೃದಯಾಘಾತವಾದಂತೆ ಭಾಸವಾಗಿದೆ. ಇದಾಗ್ಯೂ ತನಗೆ ಏನಾಗುತ್ತಿದೆ ಎಂಬುದನ್ನು ವಿವರಿಸಲು ಸಮಂತಾ ಡಯಾಸ್ಗೆ ಸಾಧ್ಯವಾಗುತ್ತಿರಲಿಲ್ಲ. ಕೂಡಲೇ ಪತಿಯು ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಆ ಬಳಿಕ ಪರಿಶೀಲಿಸಿದಾಗ ಅಮಲಿನಲ್ಲಿ ತೇಲುತ್ತಿರುವ ಅರಿವಾಗಿದೆ.
ಇದರಿಂದ ಅನುಮಾನಗೊಂಡ ಸಮಂತಾ ದಿ ಸೀಕ್ರೆಟ್ ಆಫ್ ಸಿಯಾಮ್ ರೆಸ್ಟೋರೆಂಟ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹುಡುಕಾಡಿದ್ದಾರೆ. ತನಗಾದ ಅದೇ ರೀತಿಯ ಅನುಭವಗಳ ಬಗ್ಗೆ ಅನೇಕರು ವ್ಯಕ್ತಪಡಿಸಿದ್ದರು. ಅಲ್ಲದೆ ಈ ರೆಸ್ಟೊರೆಂಟ್‌ನಲ್ಲಿ ಆಹಾರದಲ್ಲಿ ಡ್ರಗ್ಸ್ ಬೆರೆಸಲಾಗುತ್ತಿದೆ ಎಂದು ಹಲವರು ಆರೋಪಿಸಿರುವುದನ್ನು ಕಂಡು ಅಚ್ಚರಿಗೊಂಡಿದ್ದರು. ಹೀಗಾಗಿ ಇದೀಗ ಸಮಂತಾ ಡಯಾಸ್ ದಿ ಸೀಕ್ರೆಟ್ ಆಫ್ ಸಿಯಾಮ್ ವಿರುದ್ದ ದೂರು ನೀಡಿದ್ದಾರೆ.
ಪ್ರಾಥಮಿಕ ತನಿಖೆಯ ವೇಳೆ ದಿ ಸೀಕ್ರೆಟ್ ಆಫ್ ಸಿಯಾಮ್ ರೆಸ್ಟೋರೆಂಟ್ ಅನ್ನು ಮುಚ್ಚಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಲಾಸ್ ವೇಗಾಸ್ ಪೊಲೀಸರು ತಿಳಿಸಿದ್ದಾರೆ. ಈ ಆರೋಪಗಳು ನಿಜವೆಂದು ಕಂಡುಬಂದರೆ, ರೆಸ್ಟೋರೆಂಟ್ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: World Record: ಟಿ20 ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟ್ಸ್ಮನ್
ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ
ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!
(thai restaurant in mix marijuana in food as secret spice)