Viral Video: ಸಾಕ್ಷರ ನಾಯಿ: ಇನ್ನೇನು ಶಾಲೆಗೆ ಅಡ್ಮಿಷನ್ ಒಂದು ಬಾಕಿ

Dog : ಪ್ರೀತಿ, ಪ್ರಯತ್ನ, ಶ್ರದ್ಧೆ ಇದ್ದರೆ ನಾಯಿಯೂ ಕೂಡ ಓದಲು ಕಲಿಯಬಲ್ಲುದು ಎನ್ನುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇದೆಯೇ? ಈ ನಾಯಿ ಗಾಲಿಕುರ್ಚಿಯಲ್ಲಿ ದಿನವೂ ತನ್ನ ಪೋಷಕನನ್ನು ವಿಹಾರಕ್ಕೂ ಕರೆದೊಯ್ಯುತ್ತದೆ.

Viral Video: ಸಾಕ್ಷರ ನಾಯಿ: ಇನ್ನೇನು ಶಾಲೆಗೆ ಅಡ್ಮಿಷನ್ ಒಂದು ಬಾಕಿ
ಹೈಡೆನ್​ ತನ್ನ ನಾಯಿ ಮೆಲೆಕ್​ಗೆ ಕ್ಯೂ ಕಾರ್ಡ್​ ತೋರಿಸುತ್ತಿದ್ದಾರೆ. ಆ ಕಾರ್ಡಿನೊಳಗಿನದನ್ನು ಅದು ಅನುಸರಿಸುತ್ತಿದೆ.

Updated on: Jul 08, 2023 | 7:07 PM

Dog Lover : ನಾಯಿಗಳಿಗೆ ಮನುಷ್ಯನ ಚಲನ ವಲನ, ಮೌನ ಮಾತು ಎಲ್ಲವೂ ಅರ್ಥವಾಗುತ್ತದೆ. ಅಷ್ಟೇ ಯಾಕೆ ಮನುಷ್ಯನಿಗೆ ಅರ್ಥವಾಗದ್ದೂ ಇವುಗಳಿಗೆ ಅರ್ಥವಾಗುತ್ತದೆ. ಅಂಥ ಸೂಕ್ಷ್ಮಗ್ರಾಹಿಯೂ, ತೀಕ್ಷ್ಣ ಗ್ರಹಣಶಕ್ತಿಯನ್ನೂ ಉಳ್ಳಂತ ನಾಯಿಗೆ ಮನುಷ್ಯನ ಸಾಂಗತ್ಯವೆಂದರೆ ಅಚ್ಚುಮೆಚ್ಚು. ಹಾಗೆಯೇ ಮನುಷ್ಯನಿಗೆ ನಿಷ್ಠೆ ಮತ್ತು ವಿಶ್ವಾಸಕ್ಕೆ ಹೆಸರಾದ ನಾಯಿ ಸದಾ ತನ್ನೊಂದಿಗೇ ಇರಬೇಕೆಂದು ಮನುಷ್ಯ ಕೂಡ ಬಯಸುತ್ತಾನೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ನೋಡಿ. ಈ ಮನುಷ್ಯ ತನ್ನ ನಾಯಿಗೆ ಕಾರ್ಡ್​ (Cue Card) ತೋರಿಸುತ್ತಿದ್ದಾನೆ. ಅದರಲ್ಲಿ ಏನು ಬರೆದಿದೆಯೋ ಅದನ್ನು ಅರ್ಥ ಮಾಡಿಕೊಂಡು ಆ ಪ್ರಕಾರ ನಡೆದುಕೊಳ್ಳುತ್ತಿದೆ ಈ ನಾಯಿ.

ಆದರೆ ಇದನ್ನು ಬರೀ ನಾಯಿ, ಸಾಕುನಾಯಿ ಎಂದು ಹೇಗೆ ಹೇಳುವುದು? ಇದೀಗ ಓದಲು ಕಲಿತ ಸಾಕ್ಷರ ನಾಯಿ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಿಗರ ಅಪಾರ ಮೆಚ್ಚುಗೆಯನ್ನು ಗಳಿಸಿದೆ. ಈಗಾಗಲೇ ಇದನ್ನು ಸುಮಾರು 1.5 ಲಕ್ಷ ಜನರು ನೋಡಿದ್ದಾರೆ. ಈ ನಾಯಿಯ ಹೆಸರು ಮೆಲೆಕ್. ಇದರ ಪೋಷಕರ ಹೆಸರು ಹೈಡೆನ್. ತಮ್ಮಿಬ್ಬರ ಹೆಸರಿನಲ್ಲಿರುವ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ತಮ್ಮ ನಾಯಿಯೊಂದಿಗೆ ಬಹುತೇಕ ಸಮಯ ಕಳೆಯುವ ಇವರು ಅದರ ಅನೇಕ ಚಟುವಟಿಕೆಗಳ ವಿಡಿಯೋ ಅನ್ನು ಈ ಖಾತೆಯಲ್ಲಿ ಅಪ್​ಲೋಡ್ ಮಾಡುತ್ತಿರುತ್ತಾರೆ.

ನೋಡಿದೀರಲ್ಲ? ಪ್ರತೀ ದಿನವೂ ತನ್ನ ಪೋಷಕ್ ಹೈಡೆನ್​ ಅವರನ್ನು ಮೆಲೆಕ್​ ವಿಹಾರಕ್ಕೆ ಕರೆದೊಯ್ಯುತ್ತದೆ. ಹೈಡೆನ್​ ಗಾಲಿಕುರ್ಚಿಯ ಮೇಲೆ ಕುಳಿತು ಚಲಿಸುತ್ತಿದ್ದರೆ, ಮೆಲೆಕ್​ ದಾರಿ ತೋರುತ್ತ ಓಡುತ್ತದೆ. ಒಟ್ಟಾರೆಯಾಗಿ ಮನುಷ್ಯ ಮತ್ತು ಸಾಕುಪ್ರಾಣಿಗಳ ಅನುಬಂಧವನ್ನು ಹಿಡಿದಿಡುವಲ್ಲಿ ಶಬ್ದಗಳೂ ಸೋಲುತ್ತವೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 7:03 pm, Sat, 8 July 23