Viral Video: ಹಿಮಾಲಯದಲ್ಲಿಯೂ ಕುಡಿಯುವ ನೀರಿಗೆ ತತ್ವಾರ; ಈ ಉಪಾಯವೇ ಆಧಾರ
Drinking Water : ಮಿನರಲ್ ವಾಟರ್ ವಿನಾ ಮತ್ತ್ಯಾವ ನೀರನ್ನೂ ಕುಡಿಯಲಾರೆ ಎಂದು ನಿರ್ಧರಿಸಿದವರನ್ನೂ ಈ ಹಿಮಾಲಯ ತನ್ನ ಒಡಲನ್ನು ತಾನೇ ಕರಗಿಸಿಕೊಂಡು ಗಂಟಲನ್ನು ತಣಿಸುತ್ತದೆ. ಪತ್ರಕರ್ತೆ ಅನು ಆರಾಧ್ಯರ ಈ ವಿಡಿಯೋ ನೋಡಿ.
Himalaya: ಹಿಮವೇ ಇಲ್ಲಿ ಆಲಯವೂ ಬಯಲೂ. ಹನಿಹನಿ ನೀರನ್ನು ಘನಿಕರಿಸಿಕೊಂಡು ಆಕಾಶದೆತ್ತರಕ್ಕೆ ನಿಂತ ಹಿಮಾಚ್ಛಾದಿತ ಪರ್ವತಗಳಲ್ಲಿಯೂ ಕುಡಿಯುವ ನೀರಿಗೆ ಬರ ಎಂದರೆ ಅಚ್ಚರಿಯಾಗುತ್ತದಲ್ಲ? ಸಮುದ್ರಕ್ಕೆ ಹೋದರೂ ಕುಡಿಯುವ ಹನಿ ನೀರಿಗಾಗಿ ಹೇಗೆ ಹಂಬಲಿಸುತ್ತೇವೋ ಹಾಗೆಯೇ ಇಲ್ಲಿಯೂ. ಕನ್ನಡ ಪತ್ರಕರ್ತೆ (Kannada Journalist) ಮತ್ತು ಡಿಜಿಟಲ್ ಕ್ರಿಯೇಟರ್ ಆಗಿರುವ ಅನು ಆರಾಧ್ಯ ಚಾರಣಪ್ರಿಯೆ ಮತ್ತು ಪ್ರಾಣಿಪ್ರಿಯೆ. ಸದ್ಯ ಹಿಮಾಲಯ ಚಾರಣದಲ್ಲಿದ್ದಾರೆ. ಅಲ್ಲಿಯ ಜನಜೀವನ, ಪರಿಸರ ಮತ್ತು ಕೌತುಕ ವಿಷಯಗಳ ಬಗ್ಗೆ ವಿಡಿಯೋ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇದೀಗ ಈ ಕೆಳಗಿನ ವಿಡಿಯೋದಲ್ಲಿ ಹಿಮಾಲಯದಲ್ಲಿ ಕುಡಿಯುವ ನೀರನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎನ್ನುವುದನ್ನು ಅವರು ವಿವರಿಸಿದ್ದಾರೆ.
ಇದನ್ನೂ ಓದಿView this post on Instagram
ಅನು ತನ್ನ ಸಹಚಾರಣಿಗರೊಂದಿಗೆ ಈ ಜಾಗ ತಲುಪಿದ್ದಾರೆ. ಕುಡಿಯಲು ಇಲ್ಲಿ ನೀರನ್ನು ಹೇಗೆ ಸಂಗ್ರಹಿಸಲಾಗುತ್ತದೆ ಎನ್ನುವ ಬಗ್ಗೆ ಇಲ್ಲಿಯವರನ್ನು ಕೇಳಿದಾಗ ಅವರು ತಮ್ಮ ‘ನಿತ್ಯಜಲಮೂಲ’ದೆಡೆ ಕೈ ತೋರಿದ್ದಾರೆ. ಗಮನಿಸಿ, ಅಲ್ಲಿ ಒಂದು ಗುಂಡಿಯನ್ನು ತೋಡಲಾಗಿದೆ, ಮಂಜುಗಡ್ಡೆಯ ತುಂಡಿನಿಂದ ಹನಿಹನಿಯಾಗಿ ಇಳಿಯುವ ನೀರು ಪ್ಲಾಸ್ಟಿಕ್ ಹಾಸುಗಳ ಮೇಲೆ ಬೀಳುತ್ತದೆ. ಬಿದ್ದ ನೀರು ಬಕೆಟ್ ಸೇರುತ್ತದೆ. ನಂತರ ಆ ನೀರನ್ನು ನೀಲಿ ಟಬ್ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಈ ನೀರನ್ನೇ ಇಲ್ಲಿ ಕುಡಿಯಲು ಮತ್ತು ಅಡುಗೆಗೆ ಬಳಸಲಾಗುತ್ತದೆ.
ಇದನ್ನೂ ಓದಿ : Viral Video: ತಮಿಳಿನ ‘ಟಮ್ ಟಮ್’ ಧಾಟಿಯಲ್ಲಿ ಟೊಮ್ಯಾಟೋ ಗೀತೆ
ಚಳಿಗಾಲದಲ್ಲಿ ಇದೂ ಇಲ್ಲಿ ದುರ್ಲಭ. ಆಗ ಮಂಜುಗಡ್ಡೆಯ ತುಂಡುಗಳನ್ನು ದೊಡ್ಡ ಪಾತ್ರೆಗೆ ಹಾಕಿ ಬಿಸಿ ಮಾಡಿ ಕರಗಿಸಲಾಗುತ್ತದೆ. ಇನ್ನು ಶೌಚಾಲಯಕ್ಕಂತೂ ಇಲ್ಲಿ ನೀರು ಬಳಸುವ ಹಾಗೆಯೇ ಇಲ್ಲ. ಪರ್ವತದ ಜನರು ರೂಢಿಸಿಕೊಂಡ ‘ಗುಂಡಿ ಮುಚ್ಚುವ ಮತ್ತು ಟಿಶ್ಯೂ ಬಳಕೆಯ’ ವ್ಯವಸ್ಥೆಯನ್ನೇ ಚಾರಣಿಗರೂ ಅನುಸರಿಸುವುದು ಅನಿವಾರ್ಯ!
ಇದನ್ನೂ ಓದಿ : Viral Video: ಇಲ್ಲಿ ಕೂಸುಗಳು ಹೊರಗೆ ಒಂಟಿಯಾಗಿಯೇ ಮಲಗುತ್ತವೆ; ಕಿಡ್ನ್ಯಾಪ್ನ ಭಯವಿಲ್ಲ
ನೀರಿನ ಸಮಸ್ಯೆ ಮಹಾನಗರಗಳು ನಗರಗಳು ಮತ್ತು ಹಳ್ಳಿಗಳು ಮತ್ತು ಸಮುದ್ರದಲ್ಲಷ್ಟೇ ಇಲ್ಲ. ಹಿಮಾಲಯದಲ್ಲಿಯೂ ಇದೆ! ಆದರೆ ಏನೇ ಆದರೂ ಮನುಷ್ಯ ಪ್ರಯತ್ನವಾದಿ, ಉಪಾಯವಾದಿ, ಪರ್ಯಾಯವಾದಿ ಮತ್ತು ಸಂಶೋಧನಾಪ್ರಿಯ. ಭೂಮಿಯಾಳಕ್ಕೆ ಹೋದರೂ, ಗಗನಕ್ಕೆ ಹಾರಿದರೂ ಹೀಗೆ ಏನಾದರೂ ಒಂದು ವ್ಯವಸ್ಥೆಯನ್ನು ತನ್ನ ಉಳಿವಿಗಾಗಿ ಖಂಡಿತ ಮಾಡಿಕೊಳ್ಳುತ್ತಲೇ ಇರುತ್ತಾನೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 5:38 pm, Sat, 8 July 23