Viral Video : ಕೊರೊನಾದ ಅನಿಶ್ಚಿತತೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ ರೀತಿ ಅಷ್ಟಿಷ್ಟಲ್ಲ. ಸಾಕಷ್ಟು ಮನೆಗಳಲ್ಲಿ ಅನೇಕ ಸ್ಥಿತ್ಯಂತರಗಳನ್ನು ತಂದೊಡ್ಡಿತು. ಈಗೀಗ ನಿಧಾನ ಎಲ್ಲವೂ ಹಾದಿಗೆ ಬರುತ್ತಿದೆ. ಆದರೆ ಅದರ ಮಧ್ಯೆ ಉಂಟಾದ ನೋವು, ದುಃಖ… ಆದರೂ ನೋವ ನುಂಗಲೇಬೇಕು, ಮತ್ತೆ ಶಕ್ತಿ ತಂದುಕೊಳ್ಳಲೇಬೇಕು. ಇದೀಗ ವೈರಲ್ ಆಗುತ್ತಿರುವ ಈ ವಿಡಿಯೋ ಬಹಳ ಹೃದಯಸ್ಪರ್ಶಿಯಾಗಿದೆ. ಹೆಣ್ಣುಮಕ್ಕಳಿಗೆ ಹೆಚ್ಚು ಆಪ್ತವೆನ್ನಿಸುವ ಜೀವ ಅಪ್ಪನೇ. ಆ ಸಂಬಂಧ, ಅನುಬಂಧವನ್ನು ವಿವರಿಸಲಾಗದು. ಈ ವಿಡಿಯೋದಲ್ಲಿ ಮಗಳು ಶಾಲೆಯಿಂದ ಬಂದು ಕಣ್ಣುಮುಚ್ಚಿಕೊಂಡು ನಿಲ್ಲುತ್ತಾಳೆ. ಅಪ್ಪ ಹೊಸ ಕೆಲಸದ ಸಮವಸ್ತ್ರವನ್ನು ತನ್ನ ಎದೆಗೆ ಹಿಡಿದುಕೊಂಡು, ತನಗೆ ಹೊಸ ಕೆಲಸ ಸಿಕ್ಕಿತೆಂದು ಸರ್ಪ್ರೈಝ್ ಕೊಡುತ್ತಾನೆ.
@pooja.avantika.1987 ಎಂಬ ಇನ್ಸ್ಟಾಗ್ರಾಂ ಖಾತೆದಾರರು ಅಪ್ಲೋಡ್ ಮಾಡಿದ ಈ ವಿಡಿಯೋ ಅನ್ನು ನೋಡಿದ ನೆಟ್ಟಿಗರು ಭಾವುಕರಾಗಿದ್ದಾರೆ. ಸ್ವಿಗ್ಗಿ ಕಂಪೆನಿಯಲ್ಲಿ ತನಗೆ ಕೆಲಸ ಸಿಕ್ಕಿದೆ ಎಂದು ಅಪ್ಪ ಹೇಳುವಾಗ ಮಗಳ ಮುಖದಲ್ಲಿನ ಆನಂದ ವಿವರಿಸಲಾಗದು. 8 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋ ವೀಕ್ಷಿಸಿದ್ದಾರೆ. ಸುಮಾರು 51,000 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ.
‘ಇಂಥ ದೇವತೆಯಂಥ ಮಗಳನ್ನು ಪಡೆದ ನೀವು ಅದೃಷ್ಟವಂತರು’ ಎಂದಿದ್ದಾರೆ ಒಬ್ಬರು. ‘ನಿಮ್ಮ ಕುಟುಂಬ ಸಂತೋಷವಾಗಿರಲಿ ಎಂದು ಬಯಸುತ್ತೇನೆ’ ಎಂದು ಮತ್ತೊಬ್ಬರು ಹಾರೈಸಿದ್ದಾರೆ. ‘ಇದು ತುಂಬಾ ಮುದ್ದಾದ ವಿಡಿಯೋ. ನಿಮಗೆ ಒಳ್ಳೆಯದಾಗಲಿ ಅಣ್ಣಾ’ ಎಂದಿದ್ದಾರೆ ಮಗದೊಬ್ಬರು. ‘ದೇವರ ಆಶೀರ್ವಾದ ನಿಮ್ಮ ಕುಟುಂಬದ ಮೇಲೆ ಸದಾ ಇರಲಿ’ ಎಂದಿದ್ದಾರೆ ಇನ್ನೂ ಒಬ್ಬರು.
ಕೆಲಸವಿಲ್ಲದೆ ಕಳೆದ ದಿನಗಳ ಸಂಕಟ ಅನುಭವಿಸಿದವರಿಗೇ ಗೊತ್ತು ಅಲ್ಲವೆ?
ಇನ್ನು ಕುಟುಂಬ ಮತ್ತು ಇನ್ನ್ಯಾವ ಸಂಬಂಧಗಳಲ್ಲಿಯೂ ಪರಸ್ಪರರ ನೋವು ನಲಿವು ಸಂಕಟಗಳು ಎದೆಯಿಂದ ಎದೆಗೆ ಹೊಲಿದುಕೊಂಡಿರುತ್ತದೆ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 6:47 pm, Sat, 15 October 22