ಮುಂಬೈ, ಜುಲೈ 18: ಜನಪ್ರಿಯ ಸೋಶಿಯಲ್ ಮೀಡಿಯಾ ಪ್ರಭಾವಿಯೊಬ್ಬರು ಆಕಸ್ಮಿಕವಾಗಿ ಜಲಪಾತಕ್ಕೆ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ರಾಯಗಡದಲ್ಲಿ ನಡೆದಿದೆ. ಮೃತ ಯುವತಿ ಅನ್ವಿ ಕಾಮ್ದಾರ್ (26) ಎಂದು ಗುರುತಿಸಲಾಗಿದ್ದು, ಈಕೆ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಎರಡು ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ರಾಯಗಡ ಬಳಿಯ ಕುಂಭೆ ಫಾಲ್ಸ್ ಬಳಿ ರೀಲ್ ಮಾಡುತ್ತಿರುವ ವೇಳೆ ಏಕಾಏಕಿ ಭೂಕುಸಿದಿದ್ದು, ಯುವತಿ 300 ಅಡಿ ಆಳದ ಜಲಪಾತಕ್ಕೆ ಬಿದ್ದಿದ್ದಾಳೆ. ಸ್ಥಳೀಯ ಅಧಿಕಾರಿಗಳು ತಕ್ಷಣ ಸ್ಪಂದಿಸಿ ರಕ್ಷಣಾ ತಂಡದೊಂದಿಗೆ ಸ್ಥಳಕ್ಕೆ ತಲುಪಿದ್ದಾರೆ.
ಮುಂಬೈ ಮೂಲದ ಅನ್ವಿ ಕಾಮ್ದಾರ್ ಜುಲೈ 16 ರಂದು ತನ್ನ ಏಳು ಸ್ನೇಹಿತರೊಂದಿಗೆ ಜಲಪಾತಕ್ಕೆ ರೀಲ್ ಚಿತ್ರೀಕರಣಕ್ಕೆ ತೆರಳಿದ್ದು, ಬೆಳಗ್ಗೆ 10.30ರ ಸುಮಾರಿಗೆ ಈ ಭೀಕರ ಘಟನೆ ನಡೆದಿದೆ.
ಕೋಸ್ಟ್ ಗಾರ್ಡ್ ಮತ್ತು ಮಹಾರಾಷ್ಟ್ರ ರಾಜ್ಯ ವಿದ್ಯುಚ್ಛಕ್ತಿ ಮಂಡಳಿಯ ಸಿಬ್ಬಂದಿಗಳು ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದು, ಯುವತಿ ಸುಮಾರು 300-350 ಅಡಿ ಕಣಿವೆಯಲ್ಲಿ ಬಿದ್ದಿದ್ದು, ಗಂಭೀರ ಗಾಯಗಳಾಗಿದ್ದವು, ಅದೇ ಸಮಯಕ್ಕೆ ಜೋರು ಮಳೆ ಸುರಿಯುತ್ತಿದ್ದರಿಂದ ತೀವ್ರವಾಗಿ ಗಾಯಗೊಂಡಿದ್ದ ಆಕೆಯನ್ನು ಮೇಲೆತ್ತುವುದು ಸಾಧ್ಯವಾಗಲಿಲ್ಲ. ಆದಾಗ್ಯೂ, ಆರು ಗಂಟೆಗಳ ಸುದೀರ್ಘ ರಕ್ಷಣಾ ಕಾರ್ಯಾಚರಣೆಯ ನಂತರ ಅನ್ವಿಯನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಗಂಭೀರವಾಗಿ ಗಾಯಗೊಂಡ ಆಕೆಯನ್ನು ಮಂಗಾವ್ ಉಪ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಅನ್ವಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ; ಪರ ಸ್ತ್ರೀಯೊಂದಿಗೆ ರೋಮ್ಯಾನ್ಸ್ ಮಾಡುತ್ತಿದ್ದ ವೇಳೆ ಪತ್ನಿಯ ಎಂಟ್ರಿ, ಪತಿಗೆ ಹಿಗ್ಗಾಮುಗ್ಗಾ ಥಳಿತ
ಈ ಹಿನ್ನೆಲೆಯಲ್ಲಿ ತಹಸೀಲ್ದಾರ್, ಮನಗಾಂವ ಪೊಲೀಸ್ ಇನ್ಸ್‌ಪೆಕ್ಟರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಪ್ರವಾಸಿಗರು ಮತ್ತು ನಾಗರಿಕರಲ್ಲಿ ಮನವಿ ಮಾಡಿದ್ದಾರೆ. ಸಹ್ಯಾದ್ರಿ ಶ್ರೇಣಿಗಳ ಸುಂದರ ದೃಶ್ಯಾವಳಿಗಳನ್ನು ನೋಡಲು ಬರುವವರೆಲ್ಲರೂ ಪ್ರವಾಸಿ ತಾಣದಲ್ಲಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ಕೋರಲಾಗಿದೆ. ಪ್ರವಾಸಿಗರು ತಮ್ಮ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೋರಲಾಗಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲುಇಲ್ಲಿ ಕ್ಲಿಕ್ ಮಾಡಿ