ನೀನು ಪಾಸ್ ಆಗಲ್ಲ ಎಂದು ಭವಿಷ್ಯ ನುಡಿದ ಶಿಕ್ಷಕಿಗೆ ಪಾಸ್ ಆಗಿ ತೋರಿಸಿದ ವಿದ್ಯಾರ್ಥಿನಿ; ವಾಟ್ಸ್​ಆ್ಯಪ್ ಚಾಟಿಂಗ್ ವೈರಲ್

| Updated By: Rakesh Nayak Manchi

Updated on: Jul 28, 2022 | 8:50 AM

ಮುಂದಿನ ಬಾರಿ ಫೇಲ್ ಆಗುತ್ತೀ ನೀನು ಎಂದು ಭವಿಷ್ಯ ನುಡಿದಿದ್ದ ಟ್ಯೂಷನ್ ಶಿಕ್ಷಕಿಗೆ ವಿದ್ಯಾರ್ಥಿನಿಯೋರ್ವಳು, ಪಿಯುಸಿ ಉತ್ತೀರ್ಣಳಾದ ನಂತರ ದೀರ್ಘವಾದ ಸಂದೇಶವನ್ನು ಕಳುಹಿಸಿ ಕಿಚಾಯಿಸಿದ್ದಾಳೆ.

ನೀನು ಪಾಸ್ ಆಗಲ್ಲ ಎಂದು ಭವಿಷ್ಯ ನುಡಿದ ಶಿಕ್ಷಕಿಗೆ ಪಾಸ್ ಆಗಿ ತೋರಿಸಿದ ವಿದ್ಯಾರ್ಥಿನಿ; ವಾಟ್ಸ್​ಆ್ಯಪ್ ಚಾಟಿಂಗ್ ವೈರಲ್
ಸಾಂಕೇತಿಕ ಚಿತ್ರ
Image Credit source: 123rf.com
Follow us on

ನೀನು ಈ ಬಾರಿ ಪಾಸ್ ಆಗುವುದಿಲ್ಲ, ನೀನು ಈ ಸರ್ತಿ ಇದೇ ಕ್ಲಾಸ್​ನಲ್ಲಿ ಕೂರುತ್ತೀಯ, ನೀನು ಖಂಡಿತ ಪಾಸ್ ಆಗುವುದಿಲ್ಲ, ಇವೆಲ್ಲ ಶಿಕ್ಷಕರು ಕೆಲವು ವಿದ್ಯಾರ್ಥಿಗಳಿಗೆ ನುಡಿಯುವ ಭವಿಷ್ಯಗಳು. ಕೆಲವೊಮ್ಮೆ ಶಿಕ್ಷಕರ ಮಾತು ನಿಜವಾದರೂ ಇನ್ನು ಕೆಲವೊಮ್ಮೆ ಸುಳ್ಳಾಗುತ್ತದೆ. ನಿಮ್ಮ ಸ್ನೇಹ ಬಳಗದಲ್ಲಿ ಈ ರೀತಿಯ ಘಟನೆ ನಡೆದಿರಬಹುದು. ಇದೀಗ ಇಂತಹದ್ದೇ ಒಂದು ವಿಷಯವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಅದೇನೆಂದರೆ, ವಿದ್ಯಾರ್ಥಿನಿಯೋರ್ವಳಿಗೆ ಶಿಕ್ಷಕಿಯೊಬ್ಬರು “ನೀನು ಅನುತ್ತೀರ್ಣ ಆಗುತ್ತೀಯ” ಎಂದು ಭವಿಷ್ಯ ನುಡಿದಿದ್ದರು. ಆದರೆ ಅದನ್ನೇ ಸವಾಲಾಗಿ ತೆಗೆದುಕೊಂಡ ವಿದ್ಯಾರ್ಥಿನಿ ದ್ವಿತೀಯ ಪಿಯುಸಿ ತೀರ್ಗಡೆಗೊಂಡಿದ್ದಾಳೆ. ಅಷ್ಟಕ್ಕೆ ಸುಮ್ಮನಾಗದ ಆಕೆ ವಾಟ್ಸ್​ಆ್ಯಪ್ ಮೂಲಕ ಅದೇ ಶಿಕ್ಷಕಿಗೆ ಸಂದೇಶವೊಂದನ್ನು ಕಳುಹಿಸಿ ಕಿಚಾಯಿಸಿದ್ದಾಳೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚಾಟಿಂಗ್ ಸ್ಕ್ರೀನ್​ಶಾಟ್ ವೈರಲ್ (Viral) ಆಗುತ್ತಿದೆ.

ಆಶಾ ಎಂಬ ಟ್ಯೂಷನ್ ಶಿಕ್ಷಕಿ ವಿದ್ಯಾರ್ಥಿನಿಯ ಮನೋಸ್ಥೈರ್ಯವನ್ನು ಕೆಡಿಸುವ ಮಾತುಗಳನ್ನಾಡುತ್ತಾರೆ. ಮುಂದಿನ ಬಾರಿ ನೀನು ಪಾಸ್ ಆಗುವುದಿಲ್ಲ ಎಂದು ಹೇಳಿದ್ದ ಟೀಚರ್ ಆಶಾಗೆ ವಾಟ್ಸ್​ಆ್ಯಪ್​ ಮೂಲಕ “ಶುಭ ಮಧ್ಯಾಹ್ನ, ಇದು ಆಶಾ ಮೇಡಂ ನಂಬರ್?” ಎಂದು ಪ್ರಶ್ನಿಸಿದ್ದಾಳೆ. ಇದಕ್ಕೆ ಟೀಚರ್ ಹೌದು ಎಂದಾಗ ದೀರ್ಘ ಸಂದೇಶವೊಂದನ್ನು ಬರೆದುಕಳಿಸಿದ್ದಾಳೆ. “ನಾನು 2019-20ರ ಬ್ಯಾಚ್​ನ 10 ತರಗತಿ ವಿದ್ಯಾರ್ಥಿನಿ, ಈ ಸಂದೇಶ ಕಳುಹಿಸುತ್ತಿರಲು ಕಾರಣ ಮುಂದಿನ ಬಾರಿ ನೀನು ಪಾಸ್ ಆಗುವುದಿಲ್ಲ ಎಂದು ಹೇಳಿದ್ದೀರಿ. ಆದರೆ ಇಂದು ನಾನು ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಕೂಡ ಪಾಸ್ ಮಾಡಿದ್ದೇನೆ” ಎಂದು ದೀರ್ಘವಾಗಿ ಬರೆದು, “ದಯವಿಟ್ಟು ಮುಂದಿನ ಬಾರಿ ವಿದ್ಯಾರ್ಥಿಗಳೊಂದಿಗೆ ದಯೆ ತೋರಲು ಮರೆಯದಿರಿ” ಎಂದು ಮನವಿ ಮಾಡಿದ್ದಾಳೆ.

ಟ್ಯೂಶನ್ ಟೀಚರ್ ಮತ್ತು ವಿದ್ಯಾರ್ಥಿನಿ ನಡುವಿನ ಚಾಟಿಂಗ್ ಸ್ಕ್ರೀನ್​ಶಾಟ್ ಅನ್ನು famouspringroll ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಎರಡು ವರ್ಷಗಳ ಹಿಂದೆ, ನಾನು ಮತ್ತು ನನ್ನ ಸ್ನೇಹಿತ ನಮ್ಮ ಫಲಿತಾಂಶಗಳು ಬಂದ ದಿನ ನಮ್ಮ ಶಿಕ್ಷಕರಿಗೆ ಸಂದೇಶ ಕಳುಹಿಸಲು ನಿರ್ಧರಿಸಿದೆವು” ಎಂದು ಶೀರ್ಷಿಕೆ ಬರೆದು ನಗುತ್ತಿರುವ ಮುಖದ ಎಮೋಜಿ ಹಾಕಲಾಗಿದೆ. ಈ ಟ್ವೀಟ್ ವೈರಲ್ ಪಡೆದು 62 ಸಾವಿರಕ್ಕೂ ಹೆಚ್ಚು ಲೈಕ್​ಗಳು ಬಂದಿದ್ದು, 6ಸಾವಿರದ ಆಸುಪಾಸಿನಲ್ಲಿ ರೀಟ್ವೀಟ್​ಗಳು ಆಗಿವೆ. ಜುಲೈ 22 ರಂದು ಹಂಚಿಕೊಳ್ಳಲಾದ ಈ ಟ್ವೀಟ್​ಗೆ ಪ್ರತಿಕ್ರಿಯಿಸಿದ ಅನೇಕರು, ಟ್ಯೂಷನ್ ಶಿಕ್ಷಕರು ಈ ಸಂದೇಶಕ್ಕೆ ಉತ್ತರಿಸಿದ್ದಾರೆಯೇ ಅಥವಾ ಇಲ್ಲವೇ ಎಂದು ತಿಳಿಯಲು ಬಯಸಿದ್ದಾರೆ.

Published On - 8:49 am, Thu, 28 July 22