Dzuleke: ಈ ಅಂಗಡಿಯಲ್ಲಿ ಯಾವುದೇ ವ್ಯಾಪಾರಿ, ಕ್ಯಾಮರಾ, ಸೆಕ್ಯುರಿಟಿಗಳಿಲ್ಲ.. ಆದರೆ ನಂಬಿಕೆ ಮಾತ್ರ ಇದೆ!
ಇಲ್ಲೊಂದು ಆಶ್ಚರ್ಯಕರ ಮತ್ತು ವಿಶೇಷವಾದ ಅಂಗಡಿಯೊಂದಿದೆ. ನೋಡಲು ಸಾಮಾನ್ಯವಾಗಿ ಒಂದು ದಿನಸಿ ಅಂಗಡಿಯಂತೆ ಕಂಡರೂ, ಇದು ಸಾಮಾನ್ಯ ದಿನಸಿ ಅಂಗಡಿಯಲ್ಲ. ಏಕೆಂದರೆ ಈ ಅಂಗಡಿಯಲ್ಲಿ ಯಾವುದೇ ಮಾಲೀಕರು ಅಥವಾ ವ್ಯಾಪಾರಿಗಳಿಲ್ಲ
ನಾಗಾಲ್ಯಾಂಡ್: ಮಹಾರಾಷ್ಟ್ರದ ಶನಿ ಶಿಂಗನಾಪುರದ ಗ್ರಾಮದಲ್ಲಿನ ಮನೆ ಮತ್ತು ಅಂಗಡಿಗಳಿಗೆ ಯಾರೂ ಬಾಗಿಲು ಹಾಕೋದಿಲ್ಲ ಎನ್ನುವಂತಹ ಸುದ್ದಿಯನ್ನು ಓದಿದ್ದೇವೆ. ಆದರೆ, ಈಶಾನ್ಯ ರಾಜ್ಯ ನಾಗಾಲ್ಯಾಂಡ್‌ನ ಈ ಒಂದು ಗ್ರಾಮದ ಅಂಗಡಿಯಲ್ಲಿ ಸಾಮಾನುಗಳಿವೆ, ಆದರೆ, ಮಾರಲು ವ್ಯಾಪಾರಿಗಳಿಲ್ಲ. ದಿನಂಪ್ರತಿ ಎಲ್ಲೆಂದರಲ್ಲಿ ಕಳ್ಳತನ, ಸುಲಿಗೆ ಪ್ರಕರಣಗಳನ್ನು ನೋಡುವ ಈ ಕಾಲದಲ್ಲಿ ಇದು ಅಚ್ಚರಿ ಎನಿಸಬಹುದು. ಬೆಟ್ಟದ ತಪ್ಪಲಿನಲ್ಲಿರುವ ಈ ಅಂಗಡಿಯಿಂದ ನಿಮಗಿಷ್ಟ ಬಂದಂತೆ ತರಕಾರಿ, ಸಾಮಾನುಗಳನ್ನು ತಗೆದುಕೊಂಡು, ಬೋರ್ಡ್ ಅಲ್ಲಿ ಹಾಕಿರುವಷ್ಟು ದುಡ್ಡನ್ನು ಪೆಟ್ಟಿಗೆಯೊಳಗೆ ಹಾಕಿ ಹೋಗಬಹುದು. ಹಾಗಾದರೆ ಈ ಊರಿನ ಜನರಿಗೆ ಕಳ್ಳ-ಕಾಕರ ಭಯವಿಲ್ಲವೇ? ಅಥವಾ ಈ ಊರಿನಲ್ಲಿ ಕಳ್ಳರೇ ಇಲ್ಲವೇ? ಇದೆಂತಹ ಜಾಗ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ನಂಬಿಕೆಯನ್ನೇ ಅಡಿಪಾಯವಾಗಿಟ್ಟುಕೊಂಡ ಇಂತಹ ಒಂದು ಅಂಗಡಿ ನಮ್ಮ ಭಾರತದ ಪರ್ವತ ರಾಜ್ಯ ಎಂದೇ ಪ್ರಸಿದ್ದವಾಗಿರುವ ನಾಗಾಲ್ಯಾಂಡ್‌ನ (Nagaland) ಜುಲೇಕೆಯಲ್ಲಿ (Dzuleke) ಕಾಣಸಿಗುತ್ತದೆ. ಖೊನೊಮಾದಿಂದ (ಭಾರತದ ಮೊದಲ ‘ಹಸಿರು ಗ್ರಾಮ’) ಕೇವಲ 10 ಕಿ.ಮೀ ಮತ್ತು ಕೊಹಿಮಾದಿಂದ (ನಾಗಲ್ಯಾಂಡ್‌ನ ರಾಜಧಾನಿ) ಸುಮಾರು 40 ಕಿ.ಮೀ ದೂರದಲ್ಲಿರುವ ಜುಲೇಕೆಯು ಪ್ರವಾಸಿಗರ ಕಣ್ಣಿಗೆ ಮುದ ನೀಡುತ್ತದೆ.
ಜುಲೇಕೆ ನಾಗಾಲ್ಯಾಂಡ್‌ನ ಜನಪ್ರಿಯ ಪ್ರವಾಸಿ ತಾಣವಲ್ಲದಿದ್ದರು ಇಲ್ಲಿನ ಪ್ರಕೃತಿ ಹಸಿರು ಜುಲೆಕೆಯನ್ನು ಅತಿ ಸುಂದರ ಪ್ರವಾಸಿತಾಣವನ್ನಾಗಿ ಮಾಡಿದೆ. ಈ ಪ್ರದೇಶವು ಸುಮಾರು 200 ಮನೆಗಳ ವಿರಳ ಜನಸಂಖ್ಯೆಯನ್ನು ಹೊಂದಿದೆ, ಹೆಚ್ಚಾಗಿ ಅಂಗಮಿಗಳು ಇಲ್ಲಿ ವಾಸಿಸುತ್ತಾರೆ. ಇದು ರಾಜ್ಯದ ಪ್ರಮುಖ ಬುಡಕಟ್ಟು ಜನಾಂಗದವರು ವಾಸಿಸುವ ಪ್ರದೇಶದಲ್ಲಿ ಒಂದಾಗಿದೆ.
ಬರಿ ಪ್ರಕೃತಿ ಸೌಂದರ್ಯಕ್ಕಷ್ಟೇ ಈ ಪ್ರದೇಶ ಪ್ರಸಿದ್ದಿ ಪಡೆದಿಲ್ಲ. ಇಲ್ಲೊಂದು ಆಶ್ಚರ್ಯಕರ ಮತ್ತು ವಿಶೇಷವಾದ ಅಂಗಡಿಯಿದೆ. ನೋಡಲು ಒಂದು ತರಕಾರಿ ಅಂಗಡಿಯಂತೆ ಕಂಡರೂ, ಇದು ಸಾಮಾನ್ಯ ಅಂಗಡಿಯಲ್ಲ. ಏಕೆಂದರೆ ಸಾಮಾನ್ಯವಾಗಿ ಅಂಗಡಿ ಎಂದರೆ ಅಲ್ಲಿ ಮಾಲೀಕರು ಅಥವಾ ವ್ಯಾಪಾರಿಗಳು ಇರುತ್ತಾರೆ. ಜನರು ಬೇಕಾದ ದಿನಸಿ, ಸಾಮಾನುಗಳನ್ನು ತೆಗೆದುಕೊಂಡು ವ್ಯಾಪಾರಿಗಳಿಗೆ ಹಣವನ್ನು ನೀಡುತ್ತಾರೆ. ಆದರೆ ಈ ಪುಟ್ಟ ಸಾವಯವ ಕಿರಾಣಿ ಅಂಗಡಿಯು ಹಣ್ಣುಗಳು ಮತ್ತು ತರಕಾರಿಗಳನ್ನು ಮಾರುತ್ತದೆ. ಇಲ್ಲಿ ಯಾವುದಕ್ಕೆ ಎಷ್ಟು ರೂಪಾಯಿ ಎಂಬ ಬೋರ್ಡ್ ಕೂಡ ಇದೆ, ಆದರೆ ಮಾಲೀಕರು ಮಾತ್ರ ಇಲ್ಲ. ಇಲ್ಲಿಗೆ ಬಂದ ಜನ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಬೋರ್ಡ್ನಲ್ಲಿ ಬರೆದಷ್ಟು ಹಣವನ್ನು ಅಲ್ಲಿ ಇಟ್ಟ ಪೆಟ್ಟಿಗೆಯೊಳಗೆ ಹಾಕಿ ಹೋಗುತ್ತಾರೆ.
View this post on Instagram
ಇದನ್ನೂ ಓದಿ: ಮೇಘಾಲಯದ ಈ ಪುಟ್ಟ ಹಳ್ಳಿಯಲ್ಲಿ ಮಗುವಿಗೆ ನಮ್ಮಂತೆಯೇ ಹೆಸರಿಡ್ತಾರೆ, ಜತೆಗೆ ಹಾಡೂ ಕೂಡ, ಇಲ್ಲಿಯ ವೈಶಿಷ್ಟ್ಯ ತಿಳಿಯಿರಿ
ಈ ಅಂಗಡಿಯಲ್ಲಿ ಯಾವುದೇ ವ್ಯಾಪಾರಿ, ಕ್ಯಾಮೆರಾ, ಸೆಕ್ಯೂರಿಟಿ ಇಲ್ಲ ಆದರೆ ಬಹಳಷ್ಟು ನಂಬಿಕೆ ಇದೆ. ಇಲ್ಲಿಯ ಜನ ಗ್ರಾಮದ ಪ್ರತಿಯೊಬ್ಬರೂ ಪ್ರಾಮಾಣಿಕವಾಗಿ ಅವರು ತೆಗೆದುಕೊಳ್ಳುವ ವಸ್ತುಗಳಿಗೆ ಸರಿಯಾದ ಮೊತ್ತವನ್ನು ಪಾವತಿಸುತ್ತಾರೆ ಎಂದು ನಂಬುತ್ತಾರೆ. ಹಾಗಂತ ಇಲ್ಲಿ ಕಳ್ಳತನ ಆಗುವಿದೇ ಇಲ್ಲ ಎಂದೇನಿಲ್ಲ ಆದರೆ ಇಂತಹ ಪ್ರಕರಣಗಳು ಬಹಳ ವಿರಳ ಎಂದು ಗ್ರಾಮಸ್ಥರು ಹೇಳುತ್ತಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ