ಅಮೆರಿಕದ ಒರೆಗಾನ್ನಲ್ಲಿ ವ್ಯಕ್ತಿಯೊಬ್ಬ ತನ್ನ ಕಾರಿನಿಂದ 2 ಲಕ್ಷ ಡಾಲರ್ ಮೌಲ್ಯದ ನೋಟುಗಳನ್ನು ಎಸೆದಿದ್ದಾನೆ. ಅಂದರೆ ಭಾರತೀಯ ಕರೆನ್ಸಿ ಪ್ರಕಾರ ಸುಮಾರು 1.6 ಕೋಟಿ ರೂಪಾಯಿ. ಈತ ತಾನು ಇತರರಿಗೆ ನೆರವಾಗುತ್ತೇನೆ ಎಂದು ಹೇಳಿಕೊಂಡಿದ್ದಾನೆ. ಆದರೆ ಈ ಘಟನೆಯ ಬಳಿಕ ಆತನ ಕುಟುಂಬ ಆಘಾತಕ್ಕೊಳಗಾಗಿದೆ. ಹೌದು ಆತ ಕೋಟ್ಯಾಂತರ ರೂಪಾಯಿಗಳನ್ನು ರಸ್ತೆ ಎಸೆದಿದ್ದರಿಂದ ತಮ್ಮ ಕುಟುಂಬ ಅಪಾರ ನಷ್ಟವನ್ನು ಅನುಭವಿಸಿದೆ ಎಂದು ಆತನ ವಿರುದ್ಧ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ಕೋಟ್ಯಾಂತರ ಮೊತ್ತದ ಹಣವನ್ನು ರಸ್ತೆಗಳ ಮೇಲೆ ಎಸೆದ ವ್ಯಕ್ತಿಯನ್ನು ಕಾಲಿನ್ ಡೇವಿಸ್ ಮೆಕಾರ್ಥಿ (38) ಎಂದು ಗುರುತಿಸಲಾಗಿದೆ. ಕಾಲಿನ್ ಬ್ಯಾಂಕ್ನಿಂದ 100 ಡಾಲರ್ ಕರೆನ್ಸಿ ನೋಟುಗಳನ್ನು ಡ್ರಾ ಮಾಡಿಕೊಂಡಿದ್ದಾನೆ. ಈ ಹಣಗಳನ್ನು ಅಮೆರಿಕದ ಜನನಿಬಿಡ ಹೆದ್ದಾರಿಯಲ್ಲಿ ಎಸೆದಿದ್ದಾನೆ. ಹಣವನ್ನು ಉಡುಗೊರೆಯಾಗಿ ನೀಡುವ ಮೂಲಕ ಇತರರಿಗೆ ನೆರವಾಗುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ನೋಟುಗಳ ಸುರಿಮಳೆ ಸುರಿಯುತ್ತಿದ್ದಂತೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಹಣದ ಸುರಿಮಳೆಯನ್ನು ಕಂಡು ಜನರು ಮುಗಿಬಿದ್ದಿದ್ದಾರೆ. ಇದು ಏ. 11ರಂದು ರಾತ್ರಿ 7:20 ರ ಸುಮಾರಿಗೆ ನಡೆದಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: 6 ಪತ್ನಿಯರ ಮುದ್ದಿನ ಗಂಡನಿಗೆ ಮೊದಲ ಮಗು ಯಾರಿಂದ ಪಡೆಯುವುದು ಎಂಬ ಚಿಂತೆಯಂತೆ..!
ಈತನ ಈ ಕೆಲಸ ಎಲ್ಲೆಡೆ ಸುದ್ದಿಯಾಗುತ್ತಿದ್ದಂತೆ ಆತನ ಕುಟುಂಬ ಆಘಾತಕ್ಕೊಳಗಾಗಿದೆ. ಕಾಲಿನ್ ತಮ್ಮ ಜಂಟಿ ಬ್ಯಾಂಕ್(joint account)ಖಾತೆಯನ್ನು ಖಾಲಿ ಮಾಡಿದ್ದಾನೆ. ಇದರಿಂದಾಗಿ ನಮ್ಮ ಕುಟುಂಬ ಬೀದಿಗೆ ಬೀಳುವ ಪರಿಸ್ಥಿತಿಗೆ ಬಂದು ತುಲುಪಿದೆ ಎಂದು ಗೋಳಾಡಿದ್ದಾರೆ. ಜೊತೆಗೆ ಆತನ ವಿರುದ್ಧ ಕೇಸು ದಾಖಲಿಸಲಾಗಿದೆ. ದೂರು ದಾಖಲಾಗಿದ್ದರೂ ಪೊಲೀಸರು ಕಾಲಿನ್‌ನನ್ನು ಬಂಧಿಸಲಿಲ್ಲ ಮತ್ತು ಯಾವುದೇ ಅಪರಾಧದ ಆರೋಪ ಹೊರಿಸಲಿಲ್ಲ. ಏಕೆಂದರೆ ಅವನು ಶ್ರೀಮಂತನೆಂದು ಹೇಳಿಕೊಂಡು ,ಇತರರ ಜೀವನವನ್ನು ಸುಧಾರಿಸಲು ಕೋಟ್ಯಾಂತರ ಮೌಲ್ಯದ ಹಣವನ್ನು ಉಡುಗೊರೆಯಾಗಿ ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಇದರಲ್ಲಿ ತಪ್ಪು ಕಾಣದ ಪೊಲೀಸರು ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಜೊತೆಗೆ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು, ಕುಟುಂಬ ಸದಸ್ಯರು ತಮಗಾಗಿ ವಿಶೇಷ ಬ್ಯಾಂಕ್ ಖಾತೆಯನ್ನು ತೆರೆದು ತಮ್ಮ ಹಣವನ್ನು ಅದರಲ್ಲಿ ಇರಿಸಿಕೊಳ್ಳಲು ಪೋಲಿಸರು ಸಲಹೆ ನೀಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 2:18 pm, Mon, 17 April 23