Viral: ವಾರಣಾಸಿಯಲ್ಲಿ ಗಾಳಿಪಟ ಹಾರಿಸಿದ ಕಪಿರಾಯ; ವಿಡಿಯೋ ವೈರಲ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 07, 2025 | 10:24 AM

ಮೊನ್ನೆಯಷ್ಟೆ ಪಾತ್ರೆ ತೊಳೆಯುವುದರಿಂದ ಹಿಡಿದು ಚಪಾತಿ ಲಟ್ಟಿಸುವವರೆಗೆ ಅಚ್ಚುಕಟ್ಟಾಗಿ ಮನೆಕೆಲಸ ಮಾಡುವಂತಹ ಕೋತಿಯ ವಿಡಿಯೋ ಸಿಕ್ಕಾಪಟ್ಟೆ ವೈರಲ್‌ ಆಗಿತ್ತು. ಇದೀಗ ಅಂತಹದ್ದೇ ಮತ್ತೊಂದು ವಿಡಿಯೋ ವೈರಲ್‌ ಆಗಿದ್ದು, ಕಟ್ಟಡದ ಮೇಲೆ ಕುಳಿತಿದ್ದಂತಹ ಮಂಗವೊಂದು ಮಕ್ಕಳಂತೆ ಖುಷಿಯಾಗಿ ಗಾಳಿಪಟ ಹಾರಿಸಿದೆ. ಈ ಮುದ್ದಾದ ದೃಶ್ಯ ನೆಟ್ಟಿಗರ ಮನ ಗೆದ್ದಿದೆ.

ಆಹಾರವನ್ನರಸುತ್ತಾ ಜನವಸತಿ ಪ್ರದೇಶ್ಳ ಕಡೆಗೆ ಬರುವ ಮಂಗಗಳು ತಮ್ಮ ಚೇಷ್ಟೆ ಮತ್ತು ತುಂಟತನದಿಂದ ಮನರಂಜನೆ ಹಾಗೂ ಜನರಿಗೆ ತೊಂದರೆ ಕೊಡುವಂತಹ ಕೆಲಸಗಳನ್ನು ಮಾಡುತ್ತಿರುತ್ತವೆ. ಅದರಲ್ಲೂ ಈ ಕೋತಿಗಳು ಕೆಲವೊಮ್ಮೆ ಮನುಷ್ಯರಂತೆಯೇ ವರ್ತಿಸುತ್ತವೆ. ಇದಕ್ಕೆ ಸಂಬಂಧಿಸಿದ ಸಾಕಷ್ಟು ವಿಡಿಯೋಗಳು ಕೂಡಾ ವೈರಲ್‌ ಆಗಿವೆ. ಇದೀಗ ಇಲ್ಲೊಂದು ಅಂತಹದ್ದೇ ಘಟನೆ ನಡೆದಿದ್ದು, ಕೋತಿಯೊಂದು ಮಕ್ಕಳಂತೆ ಬಹಳ ಖುಷಿಯಿಂದ ಗಾಳಿಪಟವನ್ನು ಹಾರಿಸಿದೆ. ಈ ದೃಶ್ಯ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದ್ದು, ಕಪಿರಾಯ ಪಟ ಹಾರಿಸುವ ಶೈಲಿಯನ್ನು ಕಂಡು ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ.

ಈ ಘಟನೆ ವಾರಣಾಸಿಯಲ್ಲಿ ನಡೆದಿದ್ದು, ಕೋತಿಯೊಂದು ಟೆರೇಸ್‌ ಮೇಲೆ ಕುಳಿತು ಮನುಷ್ಯರಿಗಿಂತ ನಾನೇನು ಕಮ್ಮಿಯಿಲ್ಲ ಎಂಬಂತೆ ಕೌಶಲ್ಯಯುತವಾಗಿ ಗಾಳಿಪಟವನ್ನು ಹಾರಿಸಿದೆ. ಕಪಿರಾಯ ಪಟ ಹಾರಿಸುವ ದೃಶ್ಯವನ್ನು ಕಂಡು ಅಲ್ಲಿ ನೆರೆದಿದ್ದ ಸ್ಥಳೀಯರು ಫುಲ್‌ ಶಾಕ್‌ ಆಗಿದ್ದಾರೆ.

ಈ ಕುರಿತ ವಿಡಿಯೋವನ್ನು rose_k01 ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ಆಗುತ್ತಿರುವ ಈ ದೃಶ್ಯದಲ್ಲಿ ಕಟ್ಟಡದ ಮೇಲೆ ಕುಳಿತ ಕೋತಿ ಮಕ್ಕಳಿಗಿಂತ ಸೂಪರ್‌ ಆಗಿ ಗಾಳಿಪಟ ಹಾರಿಸುತ್ತಿರುವಂತಹ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಚಹಾಲ್ ಅನ್ನು ಹೆಗಲ ಮೇಲೆ ಹೊತ್ತುಕೊಂಡಿರುವುದು ಧನಶ್ರೀ ಎಂದು ಸುಳ್ಳು ಪೋಸ್ಟ್ ವೈರಲ್

ಜನವರಿ 6 ರಂದು ಹಂಚಿಕೊಳ್ಳಲಾದ ಈ ವಿಡಿಯೋ 3.8 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಅಯ್ಯಯ್ಯೋ ಈ ದೃಶ್ಯವಂತೂ ತುಂಬಾನೇ ಮುದ್ದಾಗಿದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಮಂಗನಿಂದ ಮಾನವ ಅಂತಾರೆ, ಮನುಷ್ಯರಾದ ನಾವು ಗಾಳಿಪಟವನ್ನು ಹಾರಿಸಬಹುದಾದರೆ ಅವುಗಳಿಗೆ ಇದು ಸಾಧ್ಯವಿಲ್ಲದ ಮಾತೇʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಕಲಿಯುಗದಲ್ಲಿ ಎಲ್ಲವೂ ಸಾಧ್ಯʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ