AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Fact Check: ಚಹಾಲ್ ಅನ್ನು ಹೆಗಲ ಮೇಲೆ ಹೊತ್ತುಕೊಂಡಿರುವುದು ಧನಶ್ರೀ ಎಂದು ಸುಳ್ಳು ಪೋಸ್ಟ್ ವೈರಲ್

ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ನಡುವಿನ ಸಂಬಂಧದ ಸುದ್ದಿಯ ನಡುವೆ, ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ, ಹುಡುಗಿಯೊಬ್ಬಳು ಚಹಾಲ್ ಅನ್ನು ತನ್ನ ಭುಜದ ಮೇಲೆ ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಇದು ಧನಶ್ರೀ ಎಂದು ಅನೇಕರು ಹಂಚಿಕೊಳ್ಳುತ್ತಿದ್ದಾರೆ.

Fact Check: ಚಹಾಲ್ ಅನ್ನು ಹೆಗಲ ಮೇಲೆ ಹೊತ್ತುಕೊಂಡಿರುವುದು ಧನಶ್ರೀ ಎಂದು ಸುಳ್ಳು ಪೋಸ್ಟ್ ವೈರಲ್
ವೈರಲ್​​ ವಿಡಿಯೋ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Jan 07, 2025 | 10:13 AM

Share

ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ನಡುವಿನ ಸಂಬಂಧ ಹದಗೆಟ್ಟಿರುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ನಾನಾ ರೀತಿಯ ಆರೋಪಗಳು ಕೇಳಿ ಬರುತ್ತಿವೆ. ಈ ಇಬ್ಬರೂ ಇಷ್ಟರಲ್ಲೇ ವಿಚ್ಛೇದನವನ್ನು ಪಡೆಯಲಿದ್ದಾರೆ ಎಂಬ ಊಹಾಪೋಹಗಳು ಕೂಡ ಎಲ್ಲೆಡೆ ಹಬ್ಬಿದೆ. ಇದರ ನಡುವೆ ಎಕ್ಸ್, ಫೇಸ್​ಬುಕ್​ನಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಚಹಾಲ್‌ ಅವರ ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ.

ವೈರಲ್ ಆಗುತ್ತಿರುವುದೇನು?:

ಎಕ್ಸ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡು, ‘‘ಅವರು (ಚಹಲ್) ಅವಳೊಂದಿಗೆ (ಪತ್ನಿ ಧನಶ್ರೀ) ತುಂಬಾ ಕೆಟ್ಟ ಸಂಬಂಧವನ್ನು ಹೊಂದಿದ್ದಾರೆ. ಯಾರೂ ತಮ್ಮ ಪತಿಗೆ ಈ ರೀತಿ ಮಾಡುವುದನ್ನು ನಾನು ನೋಡಿಲ್ಲ’’ ಎಂದು ಬರೆದುಕೊಂಡಿದ್ದಾರೆ.

Fact Check:

ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಸುಳ್ಳು ಹೇಳಿಕೆಯೊಂದಿಗೆ ಈ ವಿಡಿಯೋ ವೈರಲ್ ಆಗುತ್ತಿದೆ ಎಂಬುದು ಕಂಡುಬಂದಿದೆ. ಅಸಲಿಗೆ ಈ ವಿಡಿಯೋದಲ್ಲಿ ಚಹಾಲ್ ಅವರನ್ನು ಹೆಗಲ ಮೇಲೆ ಎತ್ತಿರುವುದು ಅವರ ಪತ್ನಿ ಧನಶ್ರೀ ವರ್ಮಾ ಅಲ್ಲ, ಬದಲಾಗಿ ಕುಸ್ತಿಪಟು ಸಂಗೀತಾ ಫೋಗಟ್ ಆಗಿದ್ದಾರೆ.

ಈ ವಿಡಿಯೋದ ನಿಜಾಂಶವನ್ನು ತಿಳಿಯಲು ನಾವು ಕೀಫ್ರೇಮ್‌ಗಳನ್ನು ಹೊರತೆಗೆಯುವ ಮೂಲಕ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದ್ದೇವೆ. ಆಗ ನಾವು ಈ ವಿಡಿಯೋವನ್ನು ಹಲವು ಪ್ಲಾಟ್‌ಫಾರ್ಮ್‌ಗಳಲ್ಲಿ ಕಂಡುಕೊಂಡಿದ್ದೇವೆ. ಈ ವಿಡಿಯೋಗಳನ್ನು ಮಾರ್ಚ್ 3-4, 2024 ರಂದು ಹಲವಾರು ಯೂಟ್ಯೂಬ್ ಚಾನಲ್‌ಗಳಲ್ಲಿ ಅಪ್ಲೋಡ್ ಮಾಡಲಾಗಿದೆ. ಎಲ್ಲ ಸುದ್ದಿಯಲ್ಲಿ ‘‘ಸಂಗೀತಾ ಫೋಗಟ್ ಯುಜ್ವೇಂದ್ರ ಚಹಾಲ್ ಅವರನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದಾರೆ’’ ಎಂದು ಬರೆಯಲಾಗಿದೆ.

ಹಾಗೆಯೆ ಟಿವಿ9 ಬಾಂಗ್ಲಾ ಕೂಡ ಇದೇ ವಿಡಿಯೋವನ್ನು ಹಂಚಿಕೊಂಡು ಮಾರ್ಚ್ 3, 2024 ರಂದು ಸುದ್ದಿ ಪ್ರಕಟಿಸಿದೆ. ಇದರಲ್ಲಿರುವ ಮಾಹಿತಿ ಪ್ರಕಾರ, ‘‘ಭಾರತದ ಅನುಭವಿ ಆಫ್ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ರನ್ನು ಕುಸ್ತಿಪಟು ಸಂಗೀತಾ ಫೋಗಟ್ ಅವರು ಹೆಗಲ ಮೇಲೆ ಎತ್ತಿ ತಿರುಗಿಸಿದ ವಿಡಿಯೋ ವೈರಲ್ ಆಗಿದೆ. ಇದು ರಿಯಾಲಿಟಿ ಡ್ಯಾನ್ಸಿಂಗ್ ಶೋ ಜಲಕ್ ದಿಖ್ಲಾ ಜಾ ಆಯೋಜಿಸಿದ ಪಾರ್ಟಿಯಾಗಿದ್ದು, ಇದರಲ್ಲಿ ಚಹಾಲ್ ಅವರ ಪತ್ನಿ ಧನಶ್ರೀ ವರ್ಮಾ ಅವರು ಸಂಗೀತಾ ಫೋಗಟ್ ಅವರೊಂದಿಗೆ ಸ್ಪರ್ಧಿಯಾಗಿದ್ದಾರೆ. ಚಹಾಲ್ ಅವರ ಪತ್ನಿ ಧನಶ್ರೀ ಅವರು ತಮ್ಮ ನೃತ್ಯ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದಾರೆ. ಸಂಗೀತಾ ಫೋಗಟ್ ಕುಸ್ತಿಪಟುಗಳಂತೆ ಚಹಾಲ್ ಅನ್ನು ಭುಜದ ಮೇಲೆ ಎತ್ತುವ ಮೂಲಕ ತನ್ನ ಶಕ್ತಿಯನ್ನು ಸಾಬೀತುಪಡಿಸಿದರು’’ ಎಂದು ಬರೆಯಲಾಗಿದೆ.

ಈ ಮೂಲಕ ಯುಜ್ವೇಂದ್ರ ಚಹಾಲ್ ಅವರನ್ನು ಹೆಗಲ ಮೇಲೆ ಹೊತ್ತ ಮಹಿಳೆ ಅವರ ಪತ್ನಿ ಧನಶ್ರೀ ಅಲ್ಲ, ಕುಸ್ತಿಪಟು ಸಂಗೀತಾ ಫೋಗಟ್ ಎಂಬುದು ತನಿಖೆಯಿಂದ ಸ್ಪಷ್ಟವಾಗಿದೆ.

ಅನ್​ಫಾಲೋ ಮಾಡಿದ ದಂಪತಿಗಳು:

ಚಹಾಲ್ ಮತ್ತು ಅವರ ಪತ್ನಿ ಧನಶ್ರೀ ವರ್ಮಾ ಅವರ ದಾಂಪತ್ಯ ಜೀವನದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಈ ಊಹಾಪೋಹಗಳಿಗೆ ಪುಷ್ಠಿ ನೀಡುವ ಘಟನೆ ನಡೆದಿದ್ದು, ಚಹಾಲ್ ಮತ್ತು ಧನಶ್ರೀ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆ ಇನ್​ಸ್ಟಾಗ್ರಾಮ್​ನಲ್ಲಿ ಪರಸ್ಪರ ಅನ್​​ಫಾಲೋ ಮಾಡಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿದ ನಂತರ ಧನಶ್ರೀ ಅವರೊಂದಿಗಿನ ಎಲ್ಲಾ ಫೋಟೋ ಹಾಗೂ ವಿಡಿಯೋಗಳನ್ನು ಚಹಾಲ್ ಡಿಲೀಟ್ ಮಾಡಿದ್ದಾರೆ.

ಎನ್‌ಡಿಟಿವಿಯ ವರದಿಯ ಪ್ರಕಾರ, ವಿಚ್ಛೇದನದ ವದಂತಿಗಳು ನಿಜವೆಂದು ದಂಪತಿಗಳ ನಿಕಟ ಮೂಲಗಳು ಟೈಮ್ಸ್ ಆಫ್ ಇಂಡಿಯಾಕ್ಕೆ ತಿಳಿಸಿವೆ. ಈ ಇಬ್ಬರು ಪರಸ್ಪರ ಬೇರೆ ಬೇರೆಯಾಗುವುದಕ್ಕೆ ನಿಖರವಾದ ಕಾರಣಗಳು ಏನು ಎಂಬುದು ಇದುವರೆಗೆ ತಿಳಿದುಬಂದಿಲ್ಲ. ಆದರೆ ದಂಪತಿಗಳು ಪ್ರತ್ಯೇಕ ಜೀವನವನ್ನು ನಡೆಸಲು ನಿರ್ಧರಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಫ್ಯಾಕ್ಟ್ ಚೆಕ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ