ತಿಮಿಂಗಿಲವೊಂದು (whale) ತನ್ನ ದೇಹಕ್ಕೆ ಬಿಗಿದಿರುವ ಹಗ್ಗದಿಂದ ದಯವಿಟ್ಟು ಬಿಡಿಸಿ ಎಂಬರ್ಥದ ಯಾಚನೆಯೊಂದಿಗೆ ಮೀನುಗಾರರ (fishermen) ನಾವೆ ಬಳಿಗೆ ಬರುವ ಮತ್ತು ದಯಾಳು ಮೀನುಗಾರರು ತಮ್ಮಲ್ಲಿರುವ ಸಲಕರಣೆಗಳ ಸಹಾಯದಿಂದ ಬಹಳ ಸೂಕ್ಷ್ಮವೆನಿಸುವ ರೀತಿಯಲ್ಲಿ ಜಲಚರ ಪ್ರಾಣಿಯ ದೇಹಕ್ಕೆ ಸುತ್ತಿಕೊಂಡಿರುವ ಹಗ್ಗದಿಂದ ಮುಕ್ತ ಮಾಡುವ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗಿದೆ ಮಾರಾಯ್ರೆ.
‘ತನ್ನ ದೇಹಕ್ಕೆ ಬಿಗಿದಿರುವ ಹಗ್ಗದಿಂದ ಮುಕ್ತಗೊಳಿಸಿರಿ ಅಂತ ಮೀನುಗಾರರ ನಾವೆ ಹತ್ತಿರ ಹೋಗುವ ತಿಮಿಂಗಿಲ’ ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋವನ್ನು ಶನಿವಾರ ಯೂಟ್ಯೂಬ್ ನಲ್ಲಿ ಶೇರ್ ಮಾಡಲಾಗಿದೆ.
ವಿಡಿಯೋನಲ್ಲಿ ಸುಂದರವಾದ ತಿಮಿಂಗಿಲವೊಂದು ಮೂರ್ನಾಲ್ಕು ಮೀನುಗಾರರಿರುವ ನಾವೆಯ ಬಳಿ ನಿಧಾನವಾಗಿ ಈಜುತ್ತಾ ಬರುವುದು ಕಾಣಿಸುತ್ತದೆ. ನಂತರ ಅದು ನೀರಿನ ಮೇಲ್ಭಾಗಕ್ಕೆ ಬಂದು ತನ್ನ ದೇಹದ ಸುತ್ತ ಹಗ್ಗ ಬಿಗಿದಿರುವುದರಿಂದ ಈಜುವುದು ಸಮಸ್ಯೆಯಾಗುತ್ತಿದೆ ಅನ್ನೋದನ್ನು ಮೀನುಗಾರರಿಗೆ ಪ್ರದರ್ಶಿಸುತ್ತದೆ.
ಅದರ ಸಂಕಟವನ್ನು ಮೀನುಗಾರರು ಅರ್ಥಮಾಡಿಕೊಳ್ಳುತ್ತಾರೆ. ಅವರಲ್ಲೊಬ್ಬ ತಾವು ಮೀನು ಹಿಡಿಯಲು ಬಳಸುವ ಹುಕ್ ನಂಥ ಸಲಕರಣೆಯಿಂದ ತಿಮಿಂಗಿಲಗೆ ಆರಾಮವಾಗಿ ಈಜಲು ತೊಂದರೆ ಮಾಡುತ್ತಿರುವ ಹಗ್ಗವನ್ನು ಮೇಲೆತ್ತಿ ಚಾಕುವಿನ ಹಾಗೆ ಕಾಣುವ ಉಪಕರಣವೊಂದರಿಂದ ಅದನ್ನು ಕಟ್ ಮಾಡುತ್ತಾನೆ.
ಬಂಧನದಿಂದ ಮುಕ್ತಗೊಳ್ಳುವ ತಿಮಿಂಗಿಲ ನೀರಿನಲ್ಲಿ ಬೋರಲಾಗಿ ತನ್ನ ಬಾಲವನ್ನು ಪಟಪಟಾಂತ ಅಲ್ಲಾಡಿಸಿ ಸಮುದ್ರಾಳಕ್ಕೆ ಸ್ಯುಂಯ್ ಅಂತ ಹೋಗಿಬಿಡುತ್ತದೆ.
ವಿಡಿಯೋ ಶೇರ್ ಆದ ಬಳಿಕ ಅದು 68,000 ಕ್ಕೂ ವ್ಯೂಗಳನ್ನು ಗಳಿಸಿದೆ ಮತ್ತು ನೂರಾರು ಜನ ಅದನ್ನು ಲೈಕ್ ಮಾಡುತ್ತಿದ್ದಾರೆ.
ಮೀನುಗಾರರು ತಿಮಿಂಗಿಲಗೆ ಮಾಡಿದ ಸಹಾಯವನ್ನು ನೆಟ್ಟಿಗರು ಪ್ರಶಂಸಿಸುತ್ತಿದ್ದಾರೆ.
ಒಬ್ಬ ಯೂಸರ್ ನಮಗೆಲ್ಲ ಬೇಕಾಗಿರೋದೇ ಇದು; ಮಾನವರ ಪ್ರಕೃತಿಯತ್ತ ಸಹಾಯಹಸ್ತ ಚಾಚುವುದು. ಉದ್ದೇಶಪೂರ್ವಕವಾಗಿ ಯಾರೋ ಹಗ್ಗವನ್ನು ಸಮುದ್ರದಲ್ಲಿ ಬಿಟ್ಟಿರುತ್ತಾರೆ ಅಂತ ನಾನಂದುಕೊಳ್ಳುವುದಿಲ್ಲ. ಆದರೆ ಇಂಥದ್ದೇ ಸಮಸ್ಯೆಗೆ ಸಿಕ್ಕು ಯಾವುದಾದರೂ ಬೋಟಿನ ಬಳಿಗೆ ಹೋಗಿ ಸಹಾಯ ಪಡೆದುಕೊಳ್ಳಲಾಗದೆ ಸಾಯುವ ಪ್ರಾಣಿಗಳ ಬಗ್ಗೆ ಯೋಚಿಸಿ,’ ಅಂತ ಕಾಮೆಂಟ್ ಮಾಡಿದ್ದಾರೆ.
ಮತ್ತೊಬ್ಬ ಯೂಸರ್, ‘ಆ ಕೊನೆಯ ಅಲೆಯನ್ನೊಮ್ಮೆ ಗಮನಿಸಿ. ಇದ್ಯಾವುದೋ ಮತಿಭ್ರಮಣೆಯಾಗಿರುವ ಪ್ರಾಣಿ ಅಲ್ಲ. ಜಲಚರ ಪ್ರಾಣಿ ಮತ್ತು ಮಾನವರ ನಡುವಿನ ಈ ಸಂವಹನ ಅಮೋಘ, ಮನುಕುಲದ ನನ್ನ ಸಹೋದರರು ಪ್ರಾಣಿಯ ಜೊತೆಗೂ ಭ್ರಾತೃತ್ವ ಪ್ರದರ್ಶಿಸಿರುವುದು ಸಂತಸ ನೀಡಿದೆ,’ ಎಂದಿದ್ದಾರೆ.