‘ಎಮ್ಮಿಗೆ ತಾ ಭಾರತದಾಗ ಇದ್ದೀನಂತೂ ಗೊತ್ತಿಲ್ಲ, ಭಾರತಕ್ಕ ಸ್ವಾತಂತ್ರ್ಯ ಸಿಕ್ಕದಂತೂ ಗೊತ್ತಿಲ್ಲ’

|

Updated on: Jan 31, 2023 | 5:46 PM

Standup Comedian : ಅಭಿವ್ಯಕ್ತಿ ಎಂದರೆ ಕಲಾವಿದರ ವ್ಯಕ್ತಿತ್ವದ ಅನಾವರಣ; ವಿಚಾರ ಸೂಕ್ಷ್ಮತೆ, ಭಾಷೆಯ ವಿನ್ಯಾಸ, ಪರಿಣಾಮದ ಅರಿವು... ಎಲ್ಲ ಅಂಶಗಳ ಹಿನ್ನೆಲೆಯಲ್ಲಿಯೇ ರಾಘವೇಂದ್ರ ಆಚಾರ್ಯ ಲಕ್ಷಾಂತರ ಜನರಿಗೆ ಪ್ರಿಯರಾಗಿರುವುದು. 

‘ಎಮ್ಮಿಗೆ ತಾ ಭಾರತದಾಗ ಇದ್ದೀನಂತೂ ಗೊತ್ತಿಲ್ಲ, ಭಾರತಕ್ಕ ಸ್ವಾತಂತ್ರ್ಯ ಸಿಕ್ಕದಂತೂ ಗೊತ್ತಿಲ್ಲ’
ಸ್ಟ್ಯಾಂಡ್​ ಅಪ್ ಕಾಮೆಡಿಯನ್​ ರಾಘವೇಂದ್ರ ಆಚಾರ್ಯ
Follow us on

Viral Video : ಅತೀ ಹೆಚ್ಚು ಹುಲಿಗಳನ್ನು ಹೊಂದಿದ ಎರಡನೇ ಅತೀ ದೊಡ್ಡ ರಾಜ್ಯ ನಮ್ಮ ಕರ್ನಾಟಕ. ಆದ್ರ ಭಾಳ ಆಶ್ಚರ್ಯ ಆಗೂದಂದ್ರ ಹುಲಿಗೆ ಕರ್ನಾಟಕ ಅದ ಅನ್ನೂದ ಗೊತ್ತಿಲ್ಲ.  ಊರಾಗಿನ ಹಂದಿಗೆ ಕೇಳ್ರಿ ನಿಮ್ಮ ಊರಿನ ಎಮ್ಮೆಲ್ಲೆ ಯಾರಂತ, ಅದಕ್ಕ ಗೊತ್ತ ಇರೂದಿಲ್ಲ. ಆದ್ರ ಅಗದೀ ಅರಾಮ್ ಪ್ರಾಣಿ ಅಂದ್ರ ಎಮ್ಮಿರಿ. ಎಷ್ಟ ಅರಾಮಿರ್ತದ ಅಂದರ ತಾ ಭಾರತದೊಳಗ ಇದ್ದೀನಂತೂ ಗೊತ್ತಿಲ್ಲ. ಭಾರತಕ್ಕ ಸ್ವಾತಂತ್ರ್ಯ ಸಿಕ್ಕದಂತೂ ಗೊತ್ತಿಲ್ಲ; ಈ ಕಂಟೆಂಟ್​ ಯಾವತ್ತಾದರೂ ನಿಮಗೆ ಹೊಳೆದಿತ್ತಾ? ಇಲ್ಲ ತಾನೆ, ಅದಕ್ಕೇ ಕಲೆ ಎನ್ನುವುದು. ನಮ್ಮ ನಡುವಿನ ಪ್ರತಿಭಾನ್ವಿತ ಸ್ಟ್ಯಾಂಡ್​ಅಪ್​ ಕಾಮೆಡಿಯನ್  ರಾಘವೇಂದ್ರ ಆಚಾರ್ಯ ಇಂದು ಯಾರಿಗೆ ಗೊತ್ತಿಲ್ಲ? ಬದುಕಿನ ಬಂಡಿ ಏಕತಾನತೆಯಿಂದ ಓಡುತ್ತಿದೆ ಎನ್ನಿಸಿದಾಗೆಲ್ಲ ಖಂಡಿತ ನೀವು ಇನ್​ಸ್ಟಾಗ್ರಾಂನಲ್ಲಿಯೋ, ಯೂಟ್ಯೂಬ್​ನಲ್ಲಿಯೋ ಅವರ ವಿಡಿಯೋಗಳನ್ನು ಹುಡುಕಿ ನೋಡಿರುತ್ತೀರಿ.

ರಾಘವೇಂದ್ರ ಆಚಾರ್ಯ ಕೊಪ್ಪಳ ಜಿಲ್ಲೆಯ ಕುಷ್ಟಗಿಯವರು. ವಾಸವಾಗಿರುವುದು ಬೆಂಗಳೂರಿನಲ್ಲಿ. ಮೈಕ್ರೋಬಯಾಲಜಿಯಲ್ಲಿ ಸ್ನಾತಕೋತ್ತರ ಪದವೀಧರರು. ಆದರೆ ಅವರ ಬರೆವಣಿಗೆಯ ಆಸಕ್ತಿ ಮತ್ತು ಸಾಮಾಜಿಕ ಕಳಕಳಿ ಅವರನ್ನು ಪತ್ರಿಕೋದ್ಯಮದೆಡೆ ಕರೆತಂದಿತು. ಕನ್ನಡಪ್ರಭ, ವಿಜಯ ಕರ್ನಾಟಕ, ಉದಯವಾಣಿ ಪತ್ರಿಕೆಯಲ್ಲಿ ಪತ್ರಕರ್ತರಾಗಿದ್ದ ಇವರು ಸದ್ಯ ಪಾಕೆಟ್​ ಎಫ್​ಎಂನಲ್ಲಿ ಕಾರ್ಯ ನಿವರ್ಹಿಸುತ್ತಿದ್ದಾರೆ. ಈ ಎಲ್ಲ ವೃತ್ತಿಪ್ರಯಾಣದೊಂದಿಗೆ ಅವರೊಳಗಿನ ಕಲಾವಿದ ಮಾತ್ರ ಮತ್ತಷ್ಟು ಮಗದಷ್ಟು ಆಳಕ್ಕಿಳಿಯುತ್ತಲೇ ಇದ್ದಾನೆ. ರಂಗಭೂಮಿಯ ಹಿನ್ನೆಲೆ ಇರುವ ರಾಘವೇಂದ್ರ ಇತ್ತೀಚಿನ ನಾಲ್ಕು ವರ್ಷಗಳಲ್ಲಿ ಕನ್ನಡದ ಅತ್ಯುತ್ತಮ ಸ್ಟ್ಯಾಂಡಅಪ್​ ಕಾಮೆಡಿಯನ್​ಗಳಲ್ಲಿ ಒಬ್ಬರು ಎಂದು ಗುರುತಿಸಿಕೊಂಡಿದ್ದಾರೆ.

ಇದು ಕಂಟೆಂಟ್​ ಜಮಾನಾ, ವ್ಯೂವ್ಸ್​, ಲೈಕ್ಸ್​, ಶೇರ್ಸ್​! ಎಲ್ಲ ಕಲಾವಿದರಿಗಿಂತ ಹಾಸ್ಯ ಕಲಾವಿದರು ಕಂಟೆಂಟ್​ ಬಗ್ಗೆ ಇಂದು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಏಕೆಂದರೆ ಹಾಸ್ಯ ಎನ್ನುವುದು ಸಾಮಾನ್ಯ ಜನರ ಸರಕು. ನೀವು ಕೊಟ್ಟಷ್ಟೂ ನಿಮ್ಮನ್ನು ಅದು ಬೇಡುತ್ತದೆ. ಅದು ಬೇಡುವಾಗ ನಿಮ್ಮೊಳಗನ್ನು ನೀವು ಬಗೆಯುತ್ತಲೇ ಇರಬೇಕಾಗುತ್ತದೆ. ಏಕೆಂದರೆ ಸಾಮಾನ್ಯರೊಳಗಿದ್ದೇ ಅಸಾಮಾನ್ಯವಾದ ಕಂಟೆಂಟ್​ ಹುಟ್ಟುಹಾಕುವುದೇ ನಿರಂತರ ಸವಾಲು. ಅದಕ್ಕಾಗಿ ಎಲ್ಲರೊಳಗಿದ್ದುಕೊಂಡೇ ತಮ್ಮದೇ ಆದ ಕುದುರೆಯನ್ನು ಕಲಾವಿದರು ಏರಬೇಕಾಗುತ್ತದೆ.


ನಂತರ ಅಖಾಡಾಕ್ಕೆ ಬಂದಾಗ ಸಾಮಾಜಿಕ ಜವಾಬ್ದಾರಿಯನ್ನು ಮರೆಯದೇ ಚೌಕಟ್ಟಿನೊಳಗೆ ಹಾಸ್ಯದೌತಣ ಬಡಿಸಬೇಕಾಗುತ್ತದೆ. ಆಗಲೇ ಕಲಾವಿದರ ಅಭಿವ್ಯಕ್ತಿಯಲ್ಲಿ ಅವರ ಅಭಿರುಚಿ ಮತ್ತು ವ್ಯಕ್ತಿತ್ವದ ಅನಾವರಣವೂ ಆಗುತ್ತಾ ಹೋಗುವುದು; ವಸ್ತು, ವಿಚಾರ, ನಿರೂಪಣೆ, ಭಾಷೆಯ ವಿನ್ಯಾಸ, ಪರಿಣಾಮದ ಅರಿವು ಹೀಗೆ ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿಯೇ ರಾಘವೇಂದ್ರ ಲಕ್ಷಾಂತರ ಜನರಿಗೆ ಪ್ರಿಯರಾಗಿರುವುದು.

ನೂರಾರು ಕಾಮೆಡಿಯನ್​​ಗಳು ಇಂದು ನಮ್ಮ ಮಧ್ಯೆ ಇದ್ಧಾರೆ. ಅನೇಕರು ಪ್ರಸಿದ್ಧಿಯನ್ನೂ ಹೊಂದಿದ್ದಾರೆ ನಿಜ. ಆದರೆ ಬೆರಳೆಣಿಕೆಯಷ್ಟು ಜನ ಮಾತ್ರ ಹಾಸ್ಯದ ಸೂಕ್ಷ್ಮತೆಯನ್ನು ಬಲ್ಲವರಾಗಿದ್ದಾರೆ. ಮೆನ್ಸ್​ ಡೇ ಪಂಚಾಂಗದಾಗೂ ಇಲ್ಲ, ಗೂಗಲ್​ದಾಗೂ ಇಲ್ಲ ಎಂದು ಹೇಳಿದ ಸೋನು ವೇಣುಗೋಪಾಲ ಅವರನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು. ಹಾಗೆಯೇ ರಮ್ಮಿ ಆಡಿ ಬೀದಿಗೆ ಬಂದ ಮುದ್ದುಕುಮಾರ ಅಲಿಯಾಸ್​ ವಿಕಿಪೀಡಿಯಾ ವಿಕಾಸ್​ ಅವರನ್ನೂ. ಈಗಂತೂ ಮುದ್ದುಕುಮಾರ್ ಅವರ ಅಜ್ಜಿ ಕೂಡ ಮುದ್ದುಕುಮಾರನ ಅಕೌಂಟಿನಿಂದ ರಮ್ಮಿ ಆಡಿ ಸಾಲದ ಶೂಲಕ್ಕೆ ಸಿಕ್ಕಿಹಾಕಿಕೊಂಡಿದ್ದಾರೆ ಎನ್ನುವುದು ಅಪ್​ಡೇಟೆಡ್​ ನ್ಯೂಸ್​.

ಇನ್ನು ನಮ್ಮ ನಡುವಿನ ಪ್ರಸಿದ್ಧ ಹಾಸ್ಯಕಲಾವಿದರಲ್ಲಿ ಅನೇಕರು ಪೂರ್ವತಯಾರಿಗೆಂದು ಸ್ಕ್ರಿಪ್ಟ್​ ಮಾಡಿಕೊಳ್ಳುತ್ತಾರೆ. ಆದರೆ ರಾಘವೇಂದ್ರ ಎಂದಿಗೂ ಸ್ಪಾಂಟೇನಿಯಸ್​. ಈ ಸ್ಪಾಂಟೆನಿಟಿ ಹೊಮ್ಮುವುದು 24 ತಾಸೂ ಅದೇ ಗುಂಗಿನಲ್ಲಿದ್ದಾಗ ಮಾತ್ರ. ಅದೇ ಕಲಾವಿದರ ಜಗತ್ತು ಮತ್ತು ತಾಕತ್ತು. ಅದಕ್ಕೆ ಅವಕಾಶವಿಲ್ಲದಿದ್ದರೆ ಅವರು ನೀರಿನಿಂದ ಹೊರಬಂದ ಮೀನಿನಂತೆ. ಸದ್ಯ ಕಾರ್ಪೋರೇಟ್ ಷೋಗಳೊಂದಿಗೆ ಸಾರ್ವಜನಿಕ ಕಾರ್ಯಕ್ರಮಗಳನ್ನು ಕೊಡುವುದರೊಂದಿಗೆ ರಾಘವೇಂದ್ರ ಸಾಕಷ್ಟು ಬಿಝಿಯಾಗಿದ್ದಾರೆ.

ರಾಯಚೂರಿನ Hot ಹುಡುಗನೊಳಗಿನ ಅಂತಃಸ್ಸತ್ವವನ್ನು ಅನಾವರಣಗೊಳಿಸಲು ಮತ್ತಷ್ಟು ಅವಕಾಶಗಳು ಸಿಗಲಿ. ಅವರೊಳಗಿನ ಸೃಜನಶೀಲ ವ್ಯಕ್ತಿಗೆ, ವಿಡಂಬನಾ ಪ್ರೇಮಿಗೆ ಮತ್ತಷ್ಟು ಇಂಬು ಸಿಗಲಿ.

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:41 pm, Tue, 31 January 23