ಇಂದೋರ್: ಕೆಲವೊಂದು ಜನಾಂಗದ ಸಂಪ್ರದಾಯಗಳು ವಿಚಿತ್ರವಾಗಿರುತ್ತವೆ. ಈ ಸಂಪ್ರದಾಯಗಳನ್ನು ಆಚರಿಸುವಾಗ ಸಂಪ್ರದಾಯವನ್ನು ಪಾಲಿಸಬೇಕಾ? ಅಥವಾ ಕಾನೂನನ್ನು ಪಾಲಿಸಬೇಕಾ? ಎಂಬ ಚರ್ಚೆ, ವಿವಾದಗಳು ಏಳುವುದು ಸಾಮಾನ್ಯ. ಮಧ್ಯಪ್ರದೇಶದ (Madhya Pradesh) ಅಲಿರಾಜ್‌ಪುರ ಜಿಲ್ಲೆಯಲ್ಲಿ 42 ವರ್ಷದ ವ್ಯಕ್ತಿಯೊಬ್ಬರು ಬುಡಕಟ್ಟು ಸಂಪ್ರದಾಯಗಳ (Tribal Culture) ಪ್ರಕಾರ ಒಂದೇ ಸಮಾರಂಭದಲ್ಲಿ ತನ್ನ ಮೂವರು ಲಿವ್-ಇನ್ ಪಾರ್ಟನರ್ಗಳನ್ನು ವಿವಾಹವಾಗಿದ್ದಾರೆ.
ಈ ಮೂವರು ಮಹಿಳೆಯರೊಂದಿಗೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಆ ವ್ಯಕ್ತಿ ಆರು ಮಕ್ಕಳಿಗೆ ತಂದೆಯಾಗಿದ್ದರು. ತಮ್ಮ ತಂದೆ-ತಾಯಿಯ ಮದುವೆಯಲ್ಲಿ ಆ 6 ಮಂದಿ ಮಕ್ಕಳು ಕೂಡ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಮೋರಿ ಫಾಲಿಯಾ ಗ್ರಾಮದಲ್ಲಿ ನಡೆದ ಈ ಸಮಾರಂಭದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ನೆಟಿಜನ್‌ಗಳು ಹಂಚಿಕೊಳ್ಳುವ ಮೂಲಕ ಈ ಮದುವೆ ಇನ್ನಷ್ಟು ಚರ್ಚೆಗೆ ಗ್ರಾಸವಾಗಿದೆ. (Source)
ಭೋಪಾಲ್‌ನಿಂದ ಸುಮಾರು 400 ಕಿಲೋಮೀಟರ್ ದೂರದಲ್ಲಿರುವ ನಾನ್‌ಪುರ್ ಗ್ರಾಮದ ಮಾಜಿ ಸರಪಂಚ್ ಮೌರ್ಯ ಅವರು 2003ರಲ್ಲಿ ತಮ್ಮ ಮೊದಲ ಸಂಗಾತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ಇತರ ಇಬ್ಬರು ಪಾರ್ಟನರ್ಗಳು ಸಹ ಕಳೆದ 15 ವರ್ಷಗಳಿಂದ ಅವರೊಂದಿಗೆ ವಾಸಿಸುತ್ತಿದ್ದರು. ಒಂದೇ ಮನೆಯಲ್ಲಿ ಮೂವರು ಮಹಿಳೆಯರೊಂದಿಗೆ ವಾಸವಾಗಿದ್ದ ಮೌರ್ಯ ಅವರಿಗೆ 6 ಮಕ್ಕಳೂ ಜನಿಸಿದ್ದರು.
ಮೌರ್ಯ ಅವರು ನಾಣಬಾಯಿ, ಮೇಳ ಮತ್ತು ಸಕ್ರಿ ಅವರನ್ನು ಒಂದೇ ಮಂಟಪದಲ್ಲಿ ವಿವಾಹವಾದರು. ಬುಡಕಟ್ಟು ಪದ್ಧತಿಯಂತೆ ಮೂರು ದಿನಗಳ ಕಾಲ ಬುಡಕಟ್ಟು ಜನಾಂಗದವರ ಡೋಲು ಬಾರಿಸುವುದು ಸೇರಿದಂತೆ ಮದುವೆ ವಿಜೃಂಭಣೆಯಿಂದ ನಡೆಯಿತು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.