ಆಗ್ರಾ: ಮನುಷ್ಯರನ್ನು ದೇವರೆಂದು ಪೂಜಿಸುವವರು ಕೆಲವರಾದರೆ ದೇವರನ್ನು ಕೂಡ ಮನುಷ್ಯರಂತೆ ಪರಿಗಣಿಸುವವರು ಇನ್ನು ಕೆಲವರು. ಉತ್ತರ ಪ್ರದೇಶದ ಆಗ್ರಾದ ಜಿಲ್ಲಾ ಆಸ್ಪತ್ರೆಗೆ ಇಂದು ಅರ್ಚಕರೊಬ್ಬರು ಕೃಷ್ಣನ ವಿಗ್ರಹವನ್ನು ಹೊತ್ತು ಬಂದಿದ್ದರು. ನನ್ನ ಕೃಷ್ಣನ ಕೈ ಮುರಿದು ಹೋಗಿದೆ. ಇದಕ್ಕೆ ಬ್ಯಾಂಡೇಜ್ ಹಾಕಿ ಎಂದು ವೈದ್ಯರ ಬಳಿ ಮನವಿ ಮಾಡಿದರು. ಅರ್ಚಕರ ಮಾತನ್ನು ಕೇಳಿ ವೈದ್ಯರು ಶಾಕ್ ಆದರು. ಆದರೆ, ಕೃಷ್ಣನ ವಿಗ್ರಹಕ್ಕೆ ಬ್ಯಾಂಡೇಜ್ ಹಾಕದೆ ಆತ ಹೋಗುವ ಲಕ್ಷಣಗಳು ಕಾಣದ ಹಿನ್ನೆಲೆಯಲ್ಲಿ ಆ ವಿಗ್ರಹದ ತೋಳಿಗೆ ಬ್ಯಾಂಡೇಜ್ ಹಾಕಿ ಕಳುಹಿಸಿದ್ದಾರೆ!
ಇಂಥವರೂ ಇರುತ್ತಾರಾ? ಎಂದು ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇದು ಇಂದು ನಡೆದಿರುವ ಸತ್ಯವಾದ ಘಟನೆ. ದೇವರ ವಿಗ್ರಹವನ್ನು ಹೊತ್ತು ಬಂದ ಅರ್ಚಕ ವೈದ್ಯರ ಮುಂದೆ ಪಟ್ಟು ಹಿಡಿದು ಕುಳಿತಿದ್ದರು. ನನ್ನ ಕೃಷ್ಣನಿಗೆ ನೀವು ಬ್ಯಾಂಡೇಜ್ ಹಾಕುವವರೆಗೂ ನಾವು ಇಲ್ಲಿಂದ ಹೋಗುವುದಿಲ್ಲ. ಇವತ್ತು ಬೆಳಗ್ಗೆ ಕೃಷ್ಣನ ವಿಗ್ರಹಕ್ಕೆ ಸ್ನಾನ ಮಾಡಿಸುವಾಗ ಆಕಸ್ಮಿಕವಾಗಿ ಕೈ ಮುರಿದು ಹೋಗಿದೆ. ಈ ಕೈಯನ್ನು ಜೋಡಿಸಿಕೊಡಿ ಎಂದು ವೈದ್ಯರ ಬಳಿ ಅರ್ಚಕ ಹಠ ಹಿಡಿದಿದ್ದಾರೆ.
ಇದರಿಂದ ಏನು ಮಾಡುವುದು ಎಂದು ತೋಚದ ಆಸ್ಪತ್ರೆ ಸಿಬ್ಬಂದಿ ಕೊನೆಗೆ ‘ಶ್ರೀ ಕೃಷ್ಣ’ ಎಂಬ ಹೆಸರಿನಲ್ಲಿ ನೋಂದಣಿ ಮಾಡಿಕೊಂಡು, ಕೃಷ್ಣನ ವಿಗ್ರಹದ ತೋಳಿಗೆ ಬ್ಯಾಂಡೇಜ್ ಮಾಡಿದ್ದಾರೆ. ಬಾಲ ಕೃಷ್ಣನ ವಿಗ್ರಹಕ್ಕೆ ವೈದ್ಯರು ಬ್ಯಾಂಡೇಜ್ ಹಾಕುತ್ತಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಈ ವಿಗ್ರಹವನ್ನು ಹೊತ್ತು ಬಂದ ಲೇಖ್ ಸಿಂಗ್ ಅವರು ಕಳೆದ 30 ವರ್ಷಗಳಿಂದ ಅರ್ಜುನ್ ನಗರದ ಖೇರಿಯಾ ಮೋಡ್‌ನಲ್ಲಿರುವ ಪತ್ವಾರಿ ದೇವಸ್ಥಾನದಲ್ಲಿ ಅರ್ಚಕರಾಗಿದ್ದಾರೆ. ಆಸ್ಪತ್ರೆಯಲ್ಲಿ ಮೊದಲು ನನ್ನ ವಿನಂತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಇದರಿಂದ ಬೇಸರವಾಗಿ ನಾನು ದೇವರ ವಿಗ್ರಹವನ್ನು ಹಿಡಿದು ಅಳಲು ಪ್ರಾರಂಭಿಸಿದೆ. ಆಮೇಲೆ ಅವರು ಕೃಷ್ಣನಿಗೆ ಬ್ಯಾಂಡೇಜ್ ಹಾಕಿದರು ಎಂದು ಅವರು ಹೇಳಿದ್ದಾರೆ.
Shocking Video: ಪಟಾಕಿಯಿದ್ದ ಸ್ಕೂಟರ್ ಸ್ಫೋಟಗೊಂಡು ಅಪ್ಪ-ಮಗನ ದೇಹ ಛಿದ್ರ; ಶಾಕಿಂಗ್ ವಿಡಿಯೋ ವೈರಲ್
Published On - 7:24 pm, Fri, 19 November 21