ಹಣ ಸಂಪಾದಿಸಲು ಬೆಕ್ಕಿಗೆ ಸಂತಾನಹರಣ ಸರ್ಜರಿ ಮಾಡಿದ ಆ್ಯಂಬುಲೆನ್ಸ್ ಚಾಲಕ; ಕೇಸ್ ದಾಖಲು
ದುಡ್ಡು ಸಂಪಾದಿಸುವ ಸಲುವಾಗಿ ಯಾವುದೇ ತರಬೇತಿ ಅಥವಾ ಶೈಕ್ಷಣಿಕ ಅರ್ಹತೆಯಿಲ್ಲದೆ ಬೆಕ್ಕಿಗೆ ಆಪರೇಷನ್ ಮಾಡಿರುವ ಆ್ಯಂಬುಲೆನ್ಸ್ ಚಾಲಕ ಹಾಗೂ ಆತನ ಸಹಾಯಕನ ವಿರುದ್ಧ ಕೇಸ್ ದಾಖಲಿಸಲಾಗಿದೆ.
ಮುಂಬೈ: ಯಾವುದೇ ವೈದ್ಯಕೀಯ ಜ್ಞಾನವಿಲ್ಲದೆ ಪ್ರಾಣಿಗಳ ಆ್ಯಂಬುಲೆನ್ಸ್‌ನ ಚಾಲಕ ಮತ್ತು ಅವರ ಸಹಾಯಕ ಬೆಕ್ಕಿಗೆ ಶಸ್ತ್ರಚಿಕಿತ್ಸೆ (ಸರ್ಜರಿ) ಮಾಡುವ ಮೂಲಕ ಜೀವಕ್ಕೆ ಅಪಾಯವನ್ನುಂಟುಮಾಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು, ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ದುಡ್ಡು ಸಂಪಾದಿಸುವ ಸಲುವಾಗಿ ಯಾವುದೇ ತರಬೇತಿ ಅಥವಾ ಶೈಕ್ಷಣಿಕ ಅರ್ಹತೆಯಿಲ್ಲದೆ ಬೆಕ್ಕಿಗೆ ಆಪರೇಷನ್ ಮಾಡಿರುವ ಆ್ಯಂಬುಲೆನ್ಸ್ ಚಾಲಕ ಹಾಗೂ ಆತನ ಸಹಾಯಕನ ವಿರುದ್ಧ ಪ್ರಾಣಿ ಕಾರ್ಯಕರ್ತರೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಆ ದೂರಿನ ಅನ್ವಯ ಕೇಸ್ ದಾಖಲಿಸಲಾಗಿದೆ.
ಎಂಪವರಿಂಗ್ ಹ್ಯಾಂಡ್ಸ್ ಫೌಂಡೇಶನ್ ಎನ್‌ಜಿಒದ ಪ್ರಾಣಿ ಕಾರ್ಯಕರ್ತ ಸಲೀಂ ಚರಾನಿಯಾ ಈ ಬಗ್ಗೆ ದೂರು ನೀಡಿದ್ದು, ಪ್ರದೀಪ್ ಕದಮ್ ಎಂಬ ಪ್ರಾಣಿ ಆ್ಯಂಬುಲೆನ್ಸ್ ಚಾಲಕ, ಬೆಕ್ಕಿಗೆ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಅರಿವಳಿಕೆ ನೀಡುತ್ತಿರುವ ವಿಡಿಯೋವೊಂದನ್ನು ಚಿತ್ರೀಕರಿಸಿ ಪೊಲೀಸರಿಗೆ ನೀಡಿದ್ದರು. ಬೆಕ್ಕಿನ ಮೇಲೆ ಶಸ್ತ್ರಚಿಕಿತ್ಸೆ ಮಾಡಲು ಚಾಲಕನಿಗೆ ಯಾವುದೇ ಅರ್ಹತೆ ಇಲ್ಲದ ಕಾರಣ ಪಶು ಕಲ್ಯಾಣ ಅಧಿಕಾರಿಗಳು ಮತ್ತು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು.
ಆಂಬ್ಯುಲೆನ್ಸ್ ಚಾಲಕ ಪ್ರದೀಪ್ ಕದಮ್ ಮತ್ತು ಆತನ ಸಹಾಯಕ ಕಿರಣ್ ವಿರುದ್ಧ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಮತ್ತು ಭಾರತೀಯ ಪಶುವೈದ್ಯಕೀಯ ಕೌನ್ಸಿಲ್ ಕಾಯ್ದೆಯ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದ ಹೆಚ್ಚಿನ ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ದುಷ್ಕರ್ಮಿಗಳು ಐದು ಬೀದಿ ನಾಯಿಗಳ ಬಾಯಿಗೆ ಆ್ಯಸಿಡ್ ಸುರಿದು ಕೊಂದ ಬೆನ್ನಲ್ಲೇ ಈ ಪ್ರಕರಣ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 2ರಂದು ಮಧ್ಯಪ್ರದೇಶದ ಉಜ್ಜಯಿನಿಯ ಮಹಾಲಕ್ಷ್ಮಿ ನಗರದಲ್ಲಿ ನಡೆದ ಈ ಘಟನೆಯು ಭಾರೀ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿತ್ತು.
ಇದನ್ನೂ ಓದಿ: Shocking Video: ಪಟಾಕಿಯಿದ್ದ ಸ್ಕೂಟರ್ ಸ್ಫೋಟಗೊಂಡು ಅಪ್ಪ-ಮಗನ ದೇಹ ಛಿದ್ರ; ಶಾಕಿಂಗ್ ವಿಡಿಯೋ ವೈರಲ್