ಹುಳುಕು ಹಲ್ಲಿನ ಚಿಕಿತ್ಸೆಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಏಕಾಏಕಿ ಸಾವನ್ನಪ್ಪಿರುವ ಘಟನೆ ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಜಿನ್ಹುವಾದಲ್ಲಿ ನಡೆದಿದೆ. ಹಲ್ಲಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದ ವ್ಯಕ್ತಿಗೆ ದಂತ ವೈದ್ಯರು ಹಲ್ಲು ತೆಗೆಸಿ ಹೊಸ ಹಲ್ಲು ಅಳವಡಿಸುವುದಾಗಿ ಹೇಳಿದ್ದರು. ಅದರಂತೆ ವೈದ್ಯರು ಒಂದೇ ದಿನ 23 ಹಲ್ಲು ಕಿತ್ತಿದ್ದಾರೆ. ಇದೀಗ ಹಲ್ಲು ಕಿತ್ತ 13 ದಿನಗಳ ಬಳಿಕ ವ್ಯಕ್ತಿ ಸಾವನ್ನಪ್ಪಿದ್ದು, ತೀವ್ರ ರಕ್ತಸ್ರಾವ ಹಾಗೂ ನೋವಿನಿಂದಾಗಿ ಸಾವನ್ನಪ್ಪಿದ್ದಾರೆ ಎಂದು ಮೃತನ ಮಗಳು ಆರೋಪಿಸಿದ್ದಾಳೆ.
ಘಟನೆಯ ಕುರಿತು ಯುವತಿ ಸೆಪ್ಟೆಂಬರ್ 2 ರಂದು ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದು, ಸದ್ಯ ಫೋಸ್ಟ್ ಎಲ್ಲೆಡೆ ವೈರಲ್ ಆಗಿದೆ. “ನನ್ನ ತಂದೆ ಹುವಾಂಗ್ ಆಗಸ್ಟ್ 14 ರಂದು ಯೋಂಗ್‌ಕಾಂಗ್ ಡ್ಯೂ ಡೆಂಟಲ್ ಆಸ್ಪತ್ರೆಯಲ್ಲಿ ದಂತ ಚಿಕಿತ್ಸೆಗೆ ಒಳಗಾಗಿದ್ದರು. ದಂತ ವೈದ್ಯರು ತಂದೆಯ 23 ಹಲ್ಲುಗಳನ್ನು ಹೊರತೆಗೆದು, ಆ ದಿನವೇ 12 ಹೊಸ ಹಲ್ಲುಗಳನ್ನು ಅಳವಡಿಸಿದರು. ಆದರೆ ಚಿಕಿತ್ಸೆಯ ನಂತರ, ತಂದೆ ತುಂಬಾ ನೋವಿನಿಂದ ಬಳಲುತ್ತಿದ್ದರು. ಇದೀಗ ಹದಿಮೂರು ದಿನಗಳ ನಂತರ ಅವರು ಹಠಾತ್ ಹೃದಯಾಘಾತದಿಂದ ನಿಧನರಾದರು.” ಎಂದು ಯುವತಿ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ವಿಪರೀತ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ಮಹಿಳೆಯ CT ಸ್ಕ್ಯಾನ್ ಕಂಡು ಬೆಚ್ಚಿಬಿದ್ದ ವೈದ್ಯರು
ಶಸ್ತ್ರಚಿಕಿತ್ಸೆ ನಡೆಸಿದ ದಂತ ವೈದ್ಯ ಐದು ವರ್ಷಗಳ ಸೇವೆಯಲ್ಲಿ ಅನುಭವ ಹೊಂದಿದ್ದು, ರೂಟ್ ಕೆನಾಲ್ ಚಿಕಿತ್ಸೆ ಸೇರಿದಂತೆ ಇತರ ಹಲ್ಲಿನ ಚಿಕಿತ್ಸೆಗಳಲ್ಲಿ ಹೆಚ್ಚು ನುರಿತ ಎಂದು ತಿಳಿದುಬಂದಿದೆ. ಆದರೆ ಹಲ್ಲಿನ ಚಿಕಿತ್ಸೆ ಮತ್ತು ಹುವಾಂಗ್ ಸಾವಿನ ನಡುವೆ 13 ದಿನಗಳ ಅಂತರವಿರುವುದರಿಂದ ಯುವತಿಯ ದೂರಿನ ಆಧಾರದ ಮೇಲೆ ಪ್ರಕರಣವನ್ನು ಇನ್ನೂ ಆಳವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಅಲ್ಲಿನ ಆರೋಗ್ಯ ಆಯೋಗ ಹೇಳಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ