ಚೆನ್ನೈ: ಇತ್ತೀಚಿನ ದಿನಗಳಲ್ಲಿ ಸಣ್ಣಪುಟ್ಟ ವಿಷಯಗಳಿಗೆ ಜಗಳವಾಡಿ ಕಡೆಗೆ ಜಗಳ ಕೊಲೆಯಲ್ಲಿ ಅಂತ್ಯಗೊಳ್ಳುವ ಪ್ರಕರಣಗಳು ಹೆಚ್ಚಾಗಿ ಬಿಟ್ಟಿದೆ. ಇದಕ್ಕೊಂದು ಉತ್ತಮ ನಿರ್ದಶನವೆಂಬಂತೆ ಎರಡು ದಿನಗಳ ಹಿಂದೆಯಷ್ಟೇ ಅಮಾನವೀಯ ಘಟನೆ ಚೆನ್ನೈನಲ್ಲಿ ನಡೆದಿದೆ. ಹೆಚ್ಚುವರಿ ಸಾಂಬಾರ್ ನೀಡಲಿಲ್ಲ ಎಂದು ಕೋಪಗೊಂಡ ವ್ಯಕ್ತಿ ಹೋಟೆಲ್ ನ ಸೂಪರ್ ವೈಸರ್ ನನ್ನೇ ಹತ್ಯೆ ಮಾಡಿದ್ದಾನೆ. ಮಂಗಳವಾರ ರಾತ್ರಿ (ಮಾ.12) ಚೆನ್ನೈ ಪಲ್ಲಾವರಂ ಬಳಿಯ ಪಮ್ಮಲ್ ಮುಖ್ಯ ರಸ್ತೆಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ವ್ಯಕ್ತಿಯೊಬ್ಬರು ಹೆಚ್ಚುವರಿ ಸಾಂಬಾರ್ ಕೇಳಿದ್ದಾರೆ. ಈ ವೇಳೆ ಹೋಟೆಲ್ ಮೇಲ್ವಿಚಾರಕ ಹೆಚ್ಚುವರಿ ಸಾಂಬಾರ್ ಕೊಡಲು ನಿರಾಕರಿಸಿದ್ದಾನೆ. ಅಷ್ಟರಲ್ಲಿ ಜಗಳ ಹೊಡೆದಾಟದ ವರೆಗೆ ಮುಂದುವರಿದಿದ್ದು, ಜಗಳ ಹೋಟೆಲ್ ಸೂಪರ್ ವೈಸರ್ ಹತ್ಯೆಯ ಮೂಲಕ ಕೊನೆಗೊಂಡಿದೆ.
ಅನಗಾಪುತ್ತೂರಿನ ಪರಿಗಾರದ ಶಂಕರ್ (55) ಮತ್ತು ಅವರ ಮಗ ಅರುಣ್ ಕುಮಾರ್ (30) ಹೋಟೆಲ್ ಸೂಪರ್ ವೈಸರ್ ಅನ್ನು ಹತ್ಯೆ ಮಾಡಿರುವ ಆರೋಪಿಗಳು. ಶಂಕರ್ ಮತ್ತು ಅವರ ಮಗ ಅರುಣ್ ಕುಮಾರ್ ಹೋಟೆಲ್ ಗೆ ಇಡ್ಲಿ ತಿನ್ನಲು ಹೋಗಿದ್ದರು. ಕೆಲ ಹೊತ್ತಿನ ಬಳಿಕ ಹೆಚ್ಚುವರಿ ಸಾಂಬಾರ್ ನೀಡುವಂತೆ ಸಿಬ್ಬಂದಿಯನ್ನು ಕೇಳಿದ್ದಾರೆ. ಈ ವೇಳೆ ಹೋಟೆಲ್ ಸಿಬ್ಬಂದಿ ಹೆಚ್ಚುವರಿ ಸಾಂಬಾರು ನೀಡಲು ಸಾಧ್ಯವಿಲ್ಲ ಎಂದಿದ್ದಾರೆ. ಮಾತುಕತೆ ಜಗಳ, ಹೊಡೆದಾಟವಾಗಿ ಮಾರ್ಪಟ್ಟಾಗ ಹೋಟೆಲ್ ಸೂಪರ್ ವೈಸರ್ ಸ್ಥಳಕ್ಕಾಗಮಿಸಿ ಹಲ್ಲೆ ಮಾಡುವುದನ್ನು ನಿಲ್ಲಿಸುವಂತೆ ಭದ್ರತಾ ಸಿಬ್ಬಂದಿಯನ್ನು ಕೇಳಿಕೊಂಡರೂ ಅರುಣ್ ಕುಮಾರ್ ಸೂಪರ್ ವೈಸರ್ಗೆ ತಲೆ, ಹಣೆ ಮತ್ತು ಕತ್ತಿನ ಮೇಲೆ ಹಲ್ಲೆ ನಡೆಸಿದ್ದಾನೆ. ಈವೇಳೆ ಪ್ರಜ್ಞಾಹೀನನಾಗಿ ಬಿದ್ದ ಸೂಪರ್ ವೈಸರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ಕೂಡ ಅದಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಇದನ್ನೂ ಓದಿ: ಮೂತ್ರ ಪರೀಕ್ಷೆ ಮಾಡುವ ಸಾಮರ್ಥ್ಯ ಹೊಂದಿರುವ ಹೈಟೆಕ್ ಟಾಯ್ಲೆಟ್; ವಿಡಿಯೋ ವೈರಲ್
ಮಾಹಿತಿ ಪಡೆದ ಶಂಕರನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಶಂಕರ್ ಮತ್ತು ಅರುಣ್ ಕುಮಾರ್ ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮೃತ ಸೂಪರ್ ವೈಸರ್ ತಂಜಾವೂರು ಮೂಲದವರಾಗಿದ್ದು, ಚೆನ್ನೈಗೆ ಬಂದು ಕಳೆದ ಕೆಲವು ವರ್ಷಗಳಿಂದ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 12:37 pm, Thu, 14 March 24