ಸಾಕಿದ ನಾಯಿಯೇ ಇರಲಿ (Pet Dog) ಅಥವಾ ಬೇರೆ ಯಾವುದೇ ಪ್ರಾಣಿಯಿರಲಿ, ಕೊನೆಯ ವಿದಾಯ ಹೇಳುವುದು ತೀವ್ರ ವಿಷಾದದ ಸಂಗತಿ. ನೀವು ಸ್ವತಃ ನಾಯಿ, ಬೆಕ್ಕು, ಹಸು ಅಥವಾ ಯಾವುದೇ ಪ್ರಾಣಿ ಸಾಕಿದವರಾಗಿದ್ದರೆ ಇಂಥ ಅನುಭವ ನಿಮಗೂ ಆಗಿರುತ್ತದೆ. ಇಲ್ಲದಿದ್ದರೆ ಚಾರ್ಲಿ (Charlie 777 Moview) ಸಿನಿಮಾ ನೋಡಿದ್ದರೂ ಅದು ಎಂಥದ್ದು ಎಂದು ನಿಮಗೆ ಅರ್ಥವಾಗಿರುತ್ತೆ. ಆಪ್ತಮಿತ್ರನಂತೆ ಸದಾ ಬೆನ್ನಿಗಿರುವ ಮುದ್ದಿನ ಪ್ರಾಣಿಗಳನ್ನು ಕಳೆದುಕೊಂಡ ನೋವು ಅನುಭವಿಸಿದವರಿಗೆ ಗೊತ್ತು. ಎಷ್ಟೋ ಜನರು ಹಲವು ದಿನ, ತಿಂಗಳುಗಳವರೆಗೆ ಖಿನ್ನತೆ ಅನುಭವಿಸುವುದೂ ಉಂಟು. ಒಂದೊಮ್ಮೆ ಇಂಥ ಪ್ರಾಣಿಗಳು ಮೃತಪಟ್ಟಾಗ ಅವಕ್ಕೆಂದು ತಂದಿದ್ದ ಸೋಪು, ಆಹಾರ ಅಥವಾ ಇತರ ವಸ್ತುಗಳನ್ನು ಏನು ಮಾಡುವುದು ಎಂಬ ಪ್ರಶ್ನೆ ಎದುರಾಗುವುದು ಉಂಟು. ಬಿಸಾಡಲು ಮನಸ್ಸು ಬರುವುದಿಲ್ಲ. ಪ್ರಾಣಿಗಳನ್ನು ಸಾಕಿರುವ ಇತರರ ಮನವೊಲಿಸಿ, ಅವರಿಗೆ ಕೊಡುವುದು ವಾಡಿಕೆ.
ಇಂಥದ್ದೇ ಪ್ರಕರಣವೊಂದು ಟ್ವಿಟರ್ನಲ್ಲಿ ಇದೀಗ ಸದ್ದು ಮಾಡುತ್ತಿದೆ. ಮುದ್ದುನಾಯಿಯ ಸಾವಿನಿಂದ ನೊಂದಿದ್ದ ಅದರ ಪೋಷಕರು, ಪೆಟ್ ಫುಡ್ ಕಂಪನಿಗೆ ಕರೆ ಮಾಡಿ, ತಾವು ಖರೀದಿಸಿದ್ದ ಪೆಟ್ ಫುಡ್ ಹಿಂದಕ್ಕೆ ಪಡೆದುಕೊಳ್ಳಲು ಸಾಧ್ಯವೇ ಎಂದು ವಿಚಾರಿಸಿದ್ದರು. ತನ್ನ ಗ್ರಾಹಕ ಸಂಪರ್ಕ ಪ್ರತಿನಿಧಿಯೊಂದಿಗೆ ಮಹಿಳೆ ನಡೆಸಿದ್ದ ಸಂವಾದವನ್ನು ಪೆಟ್ ಫುಡ್ ಕಂಪನಿ ಟ್ವೀಟ್ ಮಾಡಿ, ಮಾನವೀಯ ಆಫರ್ ಒಂದನ್ನು ನೀಡಿದೆ. ಇದನ್ನು ನೋಡಿದ ಹಲವರು ಸಾಕುಪ್ರಾಣಿಗಳೊಂದಿಗಿನ ತಮ್ಮ ಒಡನಾಟದ ಸಂದರ್ಭಗಳನ್ನೂ ನೆನಪಿಸಿಕೊಂಡಿದ್ದಾರೆ. ಒಟ್ಟಾರೆ ಭಾವುಕ ಟ್ವೀಟ್, ರಿಟ್ವೀಟ್ಗಳು ಸದ್ದು ಮಾಡಿವೆ.
ಅನ್ನಾ ಬ್ರೂಸ್ ಎನ್ನುವವರು ತಮ್ಮ ಟ್ವಿಟರ್ ಹ್ಯಾಂಡ್ಲ್ನಲ್ಲಿ ಈ ಕುರಿತು ಮೊದಲು ಬರೆದುಕೊಂಡಿದ್ದರು. ‘ನಾನು Chewy ಪೆಟ್ ಫುಡ್ ಕಂಪನಿಯನ್ನು ಸಂಪರ್ಕಿಸಿದೆ. ನನ್ನ ನಾಯಿ ತೀರಿ ಹೋಗಿದ್ದ ಕಾರಣ, ಇನ್ನೂ ಓಪನ್ ಮಾಡಿರದ ಫುಡ್ ಪಾಕೆಟ್ ಹಿಂದಿರುಗಿಸಬಹುದೇ ಎಂದು ಕೇಳಿದೆ. ಅವರು ನನಗೆ ಆ ಫುಡ್ ಪಾಕೆಟ್ನ ಪೂರ್ತಿ ಹಣ ವಾಪಸ್ ಕೊಟ್ಟರು. ಅದೇ ಪೊಟ್ಟಣವನ್ನು ಬೇರೆ ಯಾವುದಾದರೂ ಅನಾಥಪ್ರಾಣಿಗಳ ಆಶ್ರಮಕ್ಕೆ ಕೊಡುವಂತೆ ಸೂಚಿಸಿದರು. ಅದರ ಜೊತೆಗೆ ನಾನು ಕಸ್ಟಮರ್ ಕೇರ್ನಲ್ಲಿ ಯಾರೊಂದಿಗೆ ಮಾತನಾಡಿದ್ದೆನೊ, ಅವರ ಸಹಿಯಿರುವ ಪತ್ರದೊಂದಿಗೆ ಗಿಫ್ಟ್ ನೋಟ್ ಕಳಿಸಿಕೊಟ್ಟರು’ ಎಂದು ಟ್ವೀಟ್ ಮಾಡಿದ್ದರು.
Thank you all for the kind messages and shared stories in the comments ? Gus would have been blown away! pic.twitter.com/DiopASuHIi
— Anna Brose, MSc (@alcesanna) June 16, 2022
ಒಂದು ವೇಳೆ ತನ್ನ ನಾಯಿ ಬದುಕಿದ್ದಿದ್ದರೆ ಈ ಪ್ರೀತಿಯ ನಡೆಯಿಂದ ಎಷ್ಟು ಖುಷಿ ಪಡುತ್ತಿತ್ತು ಎಂದು ಆಕೆ ಹೇಳಿಕೊಂಡಿದ್ದಾರೆ. ನಿಮ್ಮೆಲ್ಲರ ಸಾಂತ್ವನದ ಮಾತುಗಳಿಗೆ, ಆಸ್ಥೆಯಿಂದ ಕಥೆ ಹೇಳಿಕೊಂಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು ಎಂದು ಅವರು ಹೇಳಿದ್ದಾರೆ. ಪೆಟ್ ಫುಡ್ ಕಂಪನಿ ಸಹ ಈಕೆಯ ಟ್ವೀಟ್ಗೆ ಪ್ರತಿಕ್ರಿಯಿಸಿದ್ದು, ‘ಇದು ನಾವು ಮಾಡಬಹುದಾದ ಕನಿಷ್ಠ ಕೆಲಸ. ಈ ಹೂವುಗಳು ನಿಮ್ಮ ಸಹೃದಯತೆಯನ್ನು ಇನ್ನಷ್ಟು ವಿಸ್ತರಿಸಲಿ’ ಎಂದು ಹೇಳಿದೆ. ಸಾಕುಪ್ರಾಣಿಗಳ ಸಾವಿರಾರು ಪೋಷಕರು ಈ ಸಂವಾದದಲ್ಲಿ ಭಾಗಿಯಾಗಿದ್ದು, ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 10:57 am, Sun, 19 June 22