ದಕ್ಷಿಣ ಚೀನಾ ಸಮುದ್ರದಲ್ಲಿ ಚಬಾ ಚಂಡಮಾರುತ (Chaba Typhoon) ಸೃಷ್ಟಿಯಾಗಿ ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿದೆ. ಅಲೆಗಳ ಅಬ್ಬರಕ್ಕೆ ಸಿಲುಕಿದ ಹಡಗು ಮುಳುಗಿದ್ದು (Ship sunk), ಅಪಾಯದಲ್ಲಿ ಸಿಲುಕಿದ್ದ ನಾವಿಕರನ್ನು ರಕ್ಷಣೆ ಮಾಡಲಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮುಳುಗುತ್ತಿರುವ ಹಡಗಿನಿಂದ ನಾವಿಕನನ್ನು ರಕ್ಷಣೆ ಮಾಡುವ ವಿಡಿಯೋವನ್ನು ಹಾಂಗ್ ಕಾಂಗ್ ಸರ್ಕಾರಿ ಫ್ಲೈಯಿಂಗ್ ಸರ್ವಿಸ್ (GFS) ಹಂಚಿಕೊಂಡಿದೆ. ಈ ವಿಡಿಯೋ ಕ್ಲಿಪ್ ಮುಳುಗುತ್ತಿರುವ ಹಡಗಿನ ಮೇಲೆ ಪ್ರಕ್ಷುಬ್ಧ ಅಲೆಗಳು ಅಪ್ಪಳಿಸುವುದನ್ನು ಮತ್ತು ನಾವಿಕನನ್ನು ಹೆಲಿಕಾಪ್ಟರ್ ಮೂಲಕ ಮೇಲೆತ್ತುವುದನ್ನು ತೋರಿಸುತ್ತಿದೆ. ಹವಾಮಾನ ವೈಪರೀತ್ಯದ ನಡುವೆಯೂ ರಕ್ಷಣಾ ಸಿಬ್ಬಂದಿ ಸಾಹಸ ಮೆರೆದಿರುವುದಕ್ಕೆ ನೆಟಿಜನ್‌ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Viral Video: ಅಲಿಗೇಟರ್ ಮೊಸಳೆಯನ್ನು ಮದುವೆಯಾದ ಮೆಕ್ಸಿಕೋ ಮೇಯರ್, ಡಾನ್ಸ್ ಮಾಡುತ್ತಾ ಮೊಸಳೆಗೆ ಕಿಸ್ ಕೊಟ್ಟ ಮೇಯರ್
ಹಾಂಗ್ ಕಾಂಗ್ ಸರ್ಕಾರಿ ಫ್ಲೈಯಿಂಗ್ ಸರ್ವಿಸ್ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದು, ಶನಿವಾರ ಬೆಳಿಗ್ಗೆ 7.25 ಕ್ಕೆ ಹಾಂಗ್ ಕಾಂಗ್ ಸಮುದ್ರಯಾನ ರಕ್ಷಣಾ ಸಮನ್ವಯ ಕೇಂದ್ರದಿಂದ ಮಾಹಿತಿ ಪಡೆದಿದ್ದಾಗಿ ಬರೆದುಕೊಂಡಿದೆ. ಸುಮಾರು 30 ನಾವಿಕರು ಇದ್ದ ಹಡಗು ಭಾಗಶಃ ಹಾನಿಗೊಳಗಾಗಿತ್ತು ಮತ್ತು ಎರಡು ತುಂಡುಗಳಾಗಿ ಒಡೆದಿತ್ತು. ನಾವಿಕರು ರಕ್ಷಣೆಗಾಗಿ ಕಾಯುತ್ತಿದ್ದರು ಎಂದು ಹೇಳಿದೆ.
“ಮುಳುಗಡೆಯಾದ ಹಡಗು ಟೈಫೂನ್ ಚಾಬಾದ ಮಧ್ಯಭಾಗದಲ್ಲಿದೆ. ಕಠಿಣ ಹವಾಮಾನ ಪರಿಸ್ಥಿತಿಗಳ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆಯನ್ನು ಹೆಚ್ಚು ಕಷ್ಟಕರವಾಗಿಸುತ್ತದೆ. ನಾವಿಕರ ರಕ್ಷಣೆಗಾಗಿ ವಿಮಾನ ಮತ್ತು ಎರಡು H175 ರಕ್ಷಣಾ ಹೆಲಿಕಾಪ್ಟರ್‌ಗಳನ್ನು ಘಟನಾ ಕಳುಹಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ” ಎಂದು ಬರೆದುಕೊಂಡಿದೆ.
ಇದನ್ನೂ ಓದಿ: Viral Video: ಸೂಪರ್ಫಾಸ್ಟ್ ವೇಗದಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡುವ ಉದ್ಯೋಗಿ, ಅಸಲಿ ಬುಲೆಟ್ ಟ್ರೇನ್ ಎಂದ ಇಂಟರ್ನೆಟ್
ಅಪಾಯದಲ್ಲಿರುವ 30 ನಾವಿಕರ ಪೈಕಿ ಮೂವರು ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ ಎಂದು ರಾಯಿಟರ್ಸ್ ವರದಿ ತಿಳಿಸಿದೆ. ನಗರದ ನೈಋತ್ಯಕ್ಕೆ 300 ಕಿಲೋಮೀಟರ್ ದೂರದಲ್ಲಿ ನಾಪತ್ತೆಯಾದ ಇತರರಿಗಾಗಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮುಂದುವರೆದಿದೆ ಎಂಬ GFS ಹೇಳಿಕೆಯನ್ನು ರಾಯಿಟರ್ಸ್ ಉಲ್ಲೇಖಿಸಿದೆ.
ಚಬಾ ಚಂಡಮಾರುತ ಶನಿವಾರ ಮಧ್ಯಾಹ್ನ 3 ಗಂಟೆಗೆ ಚೀನಾದ ಗುವಾಂಗ್‌ಡಾಂಗ್ ಪ್ರಾಂತ್ಯಕ್ಕೆ ಅಪ್ಪಳಿಸಿತು. ಜೋರಾದ ಗಾಳಿ ಮತ್ತು ಧಾರಾಕಾರ ಮಳೆಯಿಂದಾಗಿ ಹಲವಾರು ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿದೆ ಮತ್ತು ವ್ಯಾಪಾರ ವಹಿವಾಟುಗಳನ್ನು ಮುಚ್ಚಲಾಗಿದೆ ಎಂದು ಸಿಎನ್ಎನ್ ವರದಿ ಮಾಡಿದೆ.
Published On - 3:01 pm, Sun, 3 July 22