ತಮಿಳುನಾಡಿನ ಮಲ್ಲಿಗೆಗೆ ಮಾರುಹೋದ ಲಂಡನ್​ ಪತ್ರಕರ್ತೆಯ ವಿಡಿಯೋ ವೈರಲ್

Tamil Nadu : ‘ನಾನೀಗ ತಮಿಳುನಾಡಿನ ಪ್ರವಾಸದಲ್ಲಿದ್ದೇನೆ. ಇಂಥ ಅನಿರೀಕ್ಷಿತ ಕ್ಷಣಗಳು ನನ್ನ ಖುಷಿಗೆ ಇಂಬು ಕೊಡುತ್ತವೆ. ಚೆನ್ನೈನ ಈ ಹೂ ಮಾರುವಾಕೆಯೊಂದಿಗೆ ಕಳೆದ ಆಪ್ತ ಕ್ಷಣಗಳನ್ನು ಎಂದಿಗೂ ಮರೆಯಲಾರೆ’ ಎಂದಿದ್ದಾರೆ ಅಲೆಕ್ಸ್​.

ತಮಿಳುನಾಡಿನ ಮಲ್ಲಿಗೆಗೆ ಮಾರುಹೋದ ಲಂಡನ್​ ಪತ್ರಕರ್ತೆಯ ವಿಡಿಯೋ ವೈರಲ್
ಲಂಡನ್ನಿನ ಪತ್ರಕರ್ತೆ ಅಲೆಕ್ಸ್​ ಓಥ್​ವೇಟ್ ಚೆನ್ನೈನ ಹೂವ್ವಾಡಗಿತ್ತಿಯನ್ನು ಭೇಟಿಯಾದಾಗ
Updated By: ಶ್ರೀದೇವಿ ಕಳಸದ

Updated on: Feb 18, 2023 | 11:59 AM

Viral Video : ನಮ್ಮ ದೇಶ ವಿವಿಧ ವೈವಿಧ್ಯಗಳ ನೆಲ. ಆಪ್ತವಾಗಿ ಪೊರೆಯುವ ಗುಣ ಇದಕ್ಕಿದೆ. ಹಾಗಾಗಿಯೇ ವಿದೇಶಿಗರು ಇಲ್ಲಿಗೆ ಪ್ರವಾಸ ಕೈಗೊಳ್ಳಲು ಹಾತೊರೆಯುತ್ತಿರುತ್ತಾರೆ. ಇದೀಗ ಲಂಡನ್​ನ ಪತ್ರಕರ್ತೆ ಅಲೆಕ್ಸ್​ ಔಥ್​ವೈಟ್ ಭಾರತಕ್ಕೆ ಬಂದಿದ್ದಾರೆ. ಸದ್ಯ ತಮಿಳುನಾಡು ಸುತ್ತುತ್ತಿದ್ದಾರೆ. ಇಲ್ಲಿಯ ಹೂ ಹಣ್ಣಿನ ಮಾರುಕಟ್ಟಗೆ ಆಕೆ ಭೇಟಿ ಕೊಟ್ಟಾಗ ಹೂ ಮಾರುತ್ತಿದ್ದ ಹೆಣ್ಣುಮಗಳೊಬ್ಬರೊಂದಿಗೆ ಈಕೆ ಒಡನಾಡಿದರು. ಆಗ ಹೂ ಮಾರುವಾಕೆ ಅಲೆಕ್ಸ್​ಳ ಮುಡಿಗೆ ಮಲ್ಲಿಗೆ ಮಾಲೆಯನ್ನು ಮುಡಿಸಿದರು. ಈ ಆಪ್ತವಾದ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ​

ಅಲೆಕ್ಸ್​ ನವೆಂಬರ್​ಗೆ ತಮಿಳುನಾಡಿಗೆ ಬಂದರು. ‘ತಮಿಳುನಾಡು ಬಹಳ ಸಮೃದ್ಧವಾದ ರಾಜ್ಯ. ಕರಾವಳಿ ತೀರ, ಗಿರಿಧಾಮಗಳು, ಚಹಾ ತೋಟಗಳಲ್ಲಿ ವಿಹರಿಸುವುದು ವಿಶೇಷ ಅನುಭವ ಕೊಡುತ್ತದೆ. ಸಾವಿರಾರು ವರ್ಷಗಳಷ್ಟು ಹಳೆಯದಾದ ದೇವಾಲಯಗಳು ಕಲಾತ್ಮಕತೆಯಿಂದ ಕೂಡಿವೆ. ಸಾಮಾನ್ಯವಾಗಿ ನನ್ನ ಪ್ರಯಾಣಗಳು ಎಲ್ಲಾ ಸಮಯದಲ್ಲಿಯೂ ಯೋಜಿತವಾಗಿರುತ್ತವೆ ಎಂದು ಹೇಳಲಾಗದು. ಇಂಥ ಸಂದರ್ಭದಲ್ಲಿ ಕೆಲ ಅನಿರೀಕ್ಷಿತ ವ್ಯಕ್ತಿಗಳ ಒಡನಾಟ ಖುಷಿಗೆ ಇಂಬು ಕೊಡುತ್ತವೆ’ ಎಂದಿದ್ಧಾರೆ ಆಲೆಕ್ಸ್.

ಇದನ್ನೂ ಓದಿ : ಟರ್ಕಿ: ‘ನೀನೇ ನನ್ನನ್ನು ರಕ್ಷಿಸಿದ್ದು, ಈಗ ಹೊರಟು ನಿಂತರೆ?’ ಬೆಕ್ಕಿನ ವಿಡಿಯೋ ವೈರಲ್

ಈ ವಿಡಿಯೋ ನೋಡಿದ ಅನೇಕರ ಹೃದಯ ಬೆಚ್ಚಗಾಗಿದೆ. ಇದು ಬಹಳ ಆಪ್ತವಾದ ವಿಡಿಯೋ, ನಮ್ಮ ದೇಶ ಯಾವತ್ತೂ ಅತಿಥಿಗಳನ್ನು ಗೌರವಿಸುತ್ತದೆ ಎಂದಿದ್ದಾರೆ ಅನೇಕರು. ನಾವು ಭಾರತೀಯರು ಸ್ನೇಹಜೀವಿಗಳು ಎಂದಿದ್ದಾರೆ ಹಲವರು. ಟ್ರಾವೆಲ್​ ಜರ್ನಲಿಸ್ಟ್ ಆಗಿರುವ ಅಲೆಕ್ಸ್​ ಉದಯಪುರದಿಂದ ಕೊಲ್ಕತ್ತಾಗೆ ಭೇಟಿ ನೀಡಿ ಅಲ್ಲಿಂದ ತಮಿಳುನಾಡಿಗೆ ಬಂದಿದ್ದಾರೆ. ಇಲ್ಲಿಯ ಪಾಕವೈಶಿಷ್ಟ್ಯ, ಸಾಂಪ್ರದಾಯಿಕ ಹಬ್ಬಗಳ ಆಚರಣೆಗಳ ಬಗ್ಗೆ ತಿಳಿದುಕೊಳ್ಳುವ ಉತ್ಸಾಹದೊಂದಿಗೆ ಸಾಗುತ್ತಿದ್ದಾರೆ.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:58 am, Sat, 18 February 23