Viral Video : ಏಯ್ ಕೋತಿ, ಏಯ್ ಮಂಗ್ಯಾ, ಏಯ್ ಮುಸುವಾ, ಏಯ್ ಮಂಗ, ಏಯ್ ಡಿಂಗ್, ಏಯ್ ಮಂಕೀ, ಏಯ್ ಬಂದರ್… ನೀವೆಲ್ಲಾ ಸೇರಿ ನಿಮ್ಮನಿಮ್ಮವರನ್ನು ಬಯ್ಯುವುದಕ್ಕೋಸ್ಕರ ನಮ್ಮ ಮರ್ಯಾದೆ ಕಳೆದಿದ್ದು ಸಾಕು. ನಮಗೀಗ ಬಹಳ ಬೇಜಾರಾಗಿದೆ. ಆತ್ಮಹತ್ಯೆ ಮಾಡಿಕೊಳ್ಳೋಣವೆಂದರೆ ಒಂದು ಕೋತಂಬರಿ ಎಳೆಯೂ ಸಿಗುತ್ತಿಲ್ಲ. ಅದಕ್ಕಾಗಿ ಅಂಗಡಿಗೆ ಹೋದರೆ ಕಳ್ಳತನದ ಅಪವಾದ ಹೊರಿಸುತ್ತೀರಿ. ನಿಮ್ಮ ಈ ನಡೆಯನ್ನೆಲ್ಲ ನಾವು ಖಂಡಿಸುತ್ತೇವೆ. ಖಂಡಿಸುವುದಷ್ಟೇ ಅಲ್ಲ ಸೇಡು ತೀರಿಸಿಕೊಳ್ಳದೆ ಬಿಡೆವು.
ಎಲ್ಲಿಯಂತ ಹೋಗುವುದು ಈ ಹಗಲಿನಲ್ಲಿ? ಅದಕ್ಕೆ ಧೋಬಿಗಾಟಿಗೆ ಬಂದು ಕುಳಿತಿದ್ದೇನೆ. ಎದುರಿಗೆ ಬಟ್ಟೆಯನ್ನು ಎತ್ತೆತ್ತಿ ಒಗೆಯುತ್ತಿದ್ದಾನೆ ಧೋಬಿಯಣ್ಣ. ಪಾಪ ಕೈ ಸೋತಿರಬೇಕು. ಸಿಗರೇಟು ಹಿಡಿದುಕೊಂಡು ಅತ್ತ ಹೋದ. ಆಹಾ ಸೋಪು, ಆಹಾ ನೀರು, ಆಹಾ ಬಟ್ಟೆ! ನೋಡಿ ಮನುಷ್ಯರೇ ಈಗ ರಪರಪನೆ ಬಡಿದು, ಗಸಗಸನೆ ಉಜ್ಜಿ, ಜಾಲಿಸಿಜಾಲಿಸಿ ನಿಮ್ಮನ್ನು ತೊಳೆಯುತ್ತಿದ್ದೇನೆ… ಅಂತೀರಾ ಇನ್ನೊಮ್ಮೆ ಮಂಗ ಅಂತ?
ಯಾರೋ ಪುಣ್ಯಾತ್ಮ ‘rjkisnaa’ ವಿಡಿಯೋ ಮಾಡಿ ಇನ್ಸ್ಟಾಗ್ರಾಂಗೂ ಹಾಕಿಬಿಡಿಬೇಕೆ? ಈ ಮೊಬೈಲುಗಳನ್ನು ಎತ್ತೆತ್ತಿ ಒಗೆಯಬೇಕು. ಆಗಲೇ ಈ ಮನುಷ್ಯರಿಗೆ ಬುದ್ಧಿ ಬರುವುದು. 1 ಮಿಲಿಯನ್ಗಿಂತಲೂ ಹೆಚ್ಚು ಜನ ನನ್ನನ್ನು ನೋಡಿದ್ಧಾರೆ ಬೇರೆ. ಇನ್ನೇನು 1 ಲಕ್ಷವಾಗುತ್ತದೆ ನನ್ನನ್ನು ಇಷ್ಟಪಟ್ಟವರ ಸಂಖ್ಯೆ. ಎಷ್ಟೋ ಜನ ಕಣ್ಣಲ್ಲಿ ಬಲೂನು ಇಳಿಬಿಟ್ಟುಕೊಂಡು ನಕ್ಕಿದ್ದಾರೆ. ನಗ್ರಿ ನಗ್ರಿ ನೀವೂ ಹೀಗೇ ಒಂದು ದಿನ ನಿಮ್ಮ ಬಟ್ಟೆಗಳನ್ನು ಒಗೆದುಕೊಳ್ಳುವ ಕಾಲ ಬೇಗನೇ ಬರುತ್ತದೆ ಮೊಬೈಲುಗಳನ್ನು ಎಸೆದು. ಆಗ ನೀವು ಮಂಗನಾಗುತ್ತೀರಿ, ನಾನಂತೂ ಮನುಷ್ಯನಾಗುವುದಿಲ್ಲಪ್ಪಾ!
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ