ಪುಟ್ಟಾ, ನಾವೇ ಹೀಗೆ ನಿಧಾನಕ್ಕೆ ರಸ್ತೆ ದಾಟಬೇಕು; ಆನೆಯಮ್ಮನ ಪ್ರಾತ್ಯಕ್ಷಿಕೆ ವಿಡಿಯೋ ವೈರಲ್

Elephant : ಅಭಿವೃದ್ಧಿಯ ಆಟಾಟೋಪದ ಈ ಕಾಲದಲ್ಲಿ ತಾಳ್ಮೆಯಿಂದ ಬದುಕದಿದ್ದರೆ ದಾರಿ ತೆರೆದುಕೊಳ್ಳಲಾರದು; ಪ್ರಾಣಿಗಳಿಗೂ ಈ ಸತ್ಯ ಅರ್ಥವಾಗಿರುವ ಈ ಕಾಲದಲ್ಲಿ ನಾವು, ಅಂದರೆ ಮನುಷ್ಯರು ಬದುಕುತ್ತಿದ್ದೇವೆ! ನೋಡಿ ವಿಡಿಯೋ.

ಪುಟ್ಟಾ, ನಾವೇ ಹೀಗೆ ನಿಧಾನಕ್ಕೆ ರಸ್ತೆ ದಾಟಬೇಕು; ಆನೆಯಮ್ಮನ ಪ್ರಾತ್ಯಕ್ಷಿಕೆ ವಿಡಿಯೋ ವೈರಲ್
ಹೀಗೆ ನಿಧಾನ ರಸ್ತೆ ದಾಟೋಣ
Updated By: ಶ್ರೀದೇವಿ ಕಳಸದ

Updated on: Jan 31, 2023 | 11:56 AM

Viral Video : ಎಚ್ಚರಿಕೆ! ಮಕ್ಕಳು ಬೆಳೆಯುತ್ತಿದ್ದಂತೆ ಅಮ್ಮ ಕಲಿಸುವುದು ಇದನ್ನೇ. ಅದರಲ್ಲೂ ಕಾಡಿನ ಪ್ರಾಣಿಗಳಂತೂ ತಮ್ಮ ಮರಿಗಳಿಗೆ ಸದಾ ಇದನ್ನೇ ಕಲಿಸಿಕೊಡಬೇಕಾದಂಥ ಅನಿವಾರ್ಯ ಪರಿಸ್ಥಿತಿ ಉಂಟಾಗಿದೆ. ಆನೆ ನಡೆದದ್ದೇ ಹಾದಿ ಎನ್ನುವ ಹಮ್ಮಿನಲ್ಲಿ ಈಗಿನ ಆನೆಗಳು ಚಲಿಸಲಾರವು. ಎಲ್ಲೆಂದರಲ್ಲಿ ರಸ್ತೆಗಳು ತೆರೆದುಕೊಂಡು ತಾರಾಬಾರಾ ಗಾಡಿಗಳು ಓಡಾಡುತ್ತಿರುವಾಗ ಆಗುವ ನೋವು ಯಾರಿಗೆ ಎನ್ನುವುದು ಅವುಗಳಿಗೂ ಅರಿವಾಗಿದೆ. ಹಾಗಾಗಿಯೇ ನಾವೇ ಇನ್ನಷ್ಟು ತಾಳ್ಮೆಯನ್ನು ಕಲಿಯಬೇಕು ಎಂದುಕೊಳ್ಳುತ್ತ ಮಕ್ಕಳಿಗೂ ಅದನ್ನೇ ಹೇಳಿಕೊಡುತ್ತಿವೆ ಎನ್ನಿಸುತ್ತದೆ.

ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಈ ವಿಡಿಯೋ ಟ್ವೀಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ ಒಂದಿಷ್ಟು ಆನೆಗಳು ಏನನ್ನೋ ತಿಂದುಕೊಂಡು ತಮ್ಮ ಗುಂಗಿನಲ್ಲಿವೆ. ರಸ್ತೆಬದಿ ಬಂದು ನಿಂತ ಮರಿ ಮತ್ತು ಅತ್ತಕಡೆಯಿಂದ ಬಂದ ಕಾರು. ಇದನ್ನು ಗಮನಿಸಿದ ಆನೆಯಮ್ಮ ತನ್ನ ಮರಿಗೆ ರಸ್ತೆ ದಾಟವುದು ಹೇಗೆ ಎಂದು ಹೇಳಿಕೊಡುತ್ತದೆ.

ಇದನ್ನೂ ಓದಿ : ಆನೆಗೆ ಕೋಲಿನಿಂದ ಹೊಡೆದ ಹುಡುಗರು, ತಿರುಗಿ ಬೆನ್ನಟ್ಟಿದ ಆನೆ

ಈತನಕ ಸುಮಾರು 17,000 ಜನರು ಈ ವಿಡಿಯೋ ನೋಡಿದ್ದಾರೆ. ನೂರಾರು ಜನರು ಪ್ರತಿಕ್ರಿಯಿಸಿದ್ದಾರೆ. ರಸ್ತೆಯನ್ನು ನಿರ್ಮಿಸುವಾಗ ವನ್ಯಪ್ರಾಣಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅನೇಕರು ಹೇಳಿದ್ದಾರೆ. ಆನೆಗಳು ಸೌಮ್ಯ ಮತ್ತು ಬುದ್ಧಿವಂತ ಪ್ರಾಣಿಗಳು. ಅವು ಬದಲಾವಣೆಗೆ ಬೇಗನೆ ಹೊಂದಿಕೊಳ್ಳುತ್ತವೆ ಎಂದಿದ್ದಾರೆ ಇನ್ನೂ ಹಲವರು. ನಮ್ಮ ಜನ ಅರಣ್ಯ ಪ್ರದೇಶದಲ್ಲಿ ನಿಧಾನವಾಗಿ ಸಾಗಬೇಕು ಎಂದು ಇನ್ನೂ ಕೆಲವರು ಹೇಳಿದ್ದಾರೆ.

ಇದನ್ನೂ ಓದಿ :ಚತುರ ಆನೆ! ವಿದ್ಯುತ್ ತಂತಿ ಬೇಲಿಯನ್ನು ಮುರಿದು ರಸ್ತೆ ದಾಟಿದ ಹಳೆಯ ವಿಡಿಯೋ ವೈರಲ್

ಪರಸ್ಪರ ನಿಧಾನದಲ್ಲಿ ಅನುಸರಿಸಿ ಸಾಗಿದರೆ ಮಾತ್ರ ದಾರಿ ಸುಗಮ ಅಲ್ಲವೆ? ಅಭಿವೃದ್ಧಿಯ ಆಟಾಟೋಪದ ಈ ಕಾಲದಲ್ಲಿ ಹೀಗೆ ಯೋಚಿಸದಿದ್ದರೆ ದಾರಿ ತೆರೆದುಕೊಳ್ಳಲಾರದು, ಇರುವುದೊಂದೇ ಬದುಕು ಎನ್ನುವ ಸತ್ಯ ಪ್ರಾಣಿಗಳಿಗೂ ಅರ್ಥವಾಗಿರುವ ಕಾಲದಲ್ಲಿ ನಾವು, ಅಂದರೆ ಮನುಷ್ಯರು ಬದುಕುತ್ತಿದ್ದೇವೆ!

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 11:53 am, Tue, 31 January 23