ಕ್ರಿಕೆಟ್ ಆಡಿದ ಅಭಿಮಾನಿಗಳು
ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ (India and Englan) ತಂಡಗಳ ನಡುವಿನ ಐದನೇ ಟೆಸ್ಟ್ ಪಂದ್ಯ (Test Match) ಶುಕ್ರವಾರದಿಂದ ಎಡ್ಜ್‌ಬಾಸ್ಟನ್‌ನಲ್ಲಿ ಆರಂಭಗೊಂಡಿದೆ. ಮೊದಲ ದಿನದಾಟದ ವೇಳೆ ಮಳೆಯಿಂದಾಗಿ ಪಂದ್ಯವು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದು, ಆಟಗಾರರು ಡ್ರೆಸ್ಸಿಂಗ್ ರೂಮ್ ಒಳಗೆ ಸೇರಿಕೊಂಡರು. ಕ್ರಿಕೆಟ್ ಪ್ರೇಮಿಗಳು ಮಳೆಯಿಂದ ನಿರಾಶೆಗೊಂಡರು. ಅದಾಗ್ಯೂ ಮೂರ್ನಾಲ್ಕು ಮಂದಿ ಮೈದಾನದ ಹೊರಭಾಗದಲ್ಲಿ ಕ್ರಿಕೆಟ್ ಆಡಿ ಗಮನಸೆಳೆದಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ವೈರಲ್ ಆಗುತ್ತಿದೆ.
ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಟ್ವಿಟರ್ ಖಾತೆಯಲ್ಲಿ ಕ್ರಿಕೆಟ್ ಅಭಿಮಾನಿಗಳು ಕ್ರಿಕೆಟ್ ಆಡಿದ ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕಾಣುವಂತೆ, ಸಣ್ಣ ಬಾಲಕನೊಬ್ಬ ಛತ್ರಿಯನ್ನೇ ಬ್ಯಾಟ್ ಮಾಡಿಕೊಂಡು ಬ್ಯಾಟಿಂಗ್ಗೆ ನಿಂತುಕೊಂಡಿದ್ದಾನೆ. ವ್ಯಕ್ತಿಯೊಬ್ಬರು ಮಾಡಿದ ಬೌಲ್ಗೆ ಬಾಲಕ ಕ್ಯಾಚ್ ನೀಡಿದ್ದಾನೆ. ಈ ವೇಳೆ ಗಮನಿಸಬೇಕಾದ ಅಂಶವೆಂದರೆ ಬೌಲಿಂಗ್ ಮಾಡಿದ ವ್ಯಕ್ತಿ ಭಾರತದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರಂತೆಯೇ ಬೌಲಿಂಗ್ ಮಾಡಿದ್ದಾರೆ ಮತ್ತು ಬಾಲಕ ಕ್ಯಾಚ್ ನೀಡಿದಾಗ ಆ ವ್ಯಕ್ತಿ ಭಾರತೀಯ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಮಾಡುವ ಕಬಡ್ಡಿ ಶೈಲಿಯ ಆಚರಣೆಯಂತೆ ತೊಡೆತಟ್ಟಿ ಸಂಭ್ರಮಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಇದೇ ವೇಳೆ ಉಳಿದ ಜನರು ಹುರಿದುಂಬಿಸುತ್ತಾರೆ.
ಕೊನೆಯ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ, 73 ಓವರ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು 338ರನ್ ಬಾರಿಸಿ ಆಟ ಮುಂದುವರಿಸಿದೆ. ಸದ್ಯ ರವೀಂದ್ರ ಜಡೇಜಾ (83*) ಮತ್ತು ಮೊಹಮ್ಮದ್ ಶಮಿ ಕ್ರೀಸ್ನಲ್ಲಿದ್ದಾರೆ. ಭಾರತದ ಪರ ರಿಷಬ್ ಪಂತ್ ಅವರು 111 ಬಾಲ್ಗಳಲ್ಲಿ 146 ರನ್ಗಳ ಭರ್ಜರಿ ರನ್ ಕಲೆಹಾಕಿದರು.