ತನ್ನ ಹುಟ್ಟುಹಬ್ಬವನ್ನು ಎಲ್ಲಿ ಆಚರಿಸುವುದು, ಹೇಗೆ ಆಚರಿಸುವುದು ಎಂದು ಎಲ್ಲರೂ ಯೋಚಿಸುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿ ಎಲ್ಲರಿಗೆ ಮಾದರಿಯಾಗುವಂತೆ ತನ್ನ ಜನ್ಮದಿನವನ್ನು ಆಚರಿಸಿದ್ದಾನೆ. ಕಾಲೇಜಿಗೆ ಹೋಗುವ ದಾರಿಯಲ್ಲಿ ಪದೇಪದೇ ಭೇಟಿಯಾಗುತ್ತಿದ್ದ ವಿಕಲಚೇತನ ವ್ಯಕ್ತಿಯನ್ನು ಭೇಟಿಯಾಗುವ ಮೂಲಕ ವಿದ್ಯಾರ್ಥಿಯು ಜನ್ಮದಿನವನ್ನು ಆಚರಿಸಿದ್ದಾನೆ. ಇದರ ಹೃದಯಸ್ಪರ್ಶಿ ವೀಡಿಯೋ ಆನ್‌ಲೈನ್‌ನಲ್ಲಿ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.
ಮೂಲತಃ ಕೇರಳದ ಕಣ್ಣೂರಿನ ಹಾಗೂ ಮಂಗಳೂರಿನ ಯೆನೆಪೊಯ ವಿಶ್ವವಿದ್ಯಾನಿಲಯದ ಮನಃಶಾಸ್ತ್ರ ವಿದ್ಯಾರ್ಥಿ ವಿಹಾಯಸ್ ತನ್ನ 20ನೇ ಜನ್ಮ ವರ್ಷಾಚರಣೆಯನ್ನು ವಿಕಲಾಂಗ ವ್ಯಕ್ತಿಗೆ ಸಿಹಿ ತಿನ್ನಿಸುವ ಮೂಲಕ ಅರ್ಥಪೂರ್ಣವಾಗಿ ಆಚಿಸಿದ್ದಾನೆ. ವಿಹಾಯಸ್ ಮತ್ತು ಸ್ನೇಹಿತೆ ಮೃಧುಲಾ ಮಧು ಪವನ್ ನೆಲೆಸಿದ್ದ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದಾರೆ. ಈ ವೇಳೆ ಪವನ್ ಮತ್ತು ಅವರ ತಾಯಿಯ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಇದನ್ನೂ ಓದಿ: Viral Video: ಚಬಾ ಚಂಡಮಾರುತಕ್ಕೆ ಮುಳುಗಿದ ಹಡಗು, ನಾವಿಕರನ್ನು ರಕ್ಷಿಸುವ ರೋಚಕ ವಿಡಿಯೋ ವೈರಲ್
ಇದರ ವಿಡಿಯೋ ವೈರಲ್ ಆಗುತ್ತಿದೆ. ವಿಡಿಯೋ ಕ್ಲಿಪ್ನಲ್ಲಿರುವಂತೆ, ವಿದ್ಯಾರ್ಥಿ “ನಾವು ಅವನಿಗೆ ಕೈ ಬೀಸಿದಾಗಲೆಲ್ಲಾ ಅವನ ಮುಖವು ಬೆಳಗುತ್ತದೆ. ಸಾಮಾನ್ಯವಾಗಿ ಅವನನ್ನು ನೋಡುವುದು ನಮ್ಮ ದಿನದ ಪ್ರಮುಖ ಅಂಶವಾಗಿದೆ” ಎಂದು ವಿಡಿಯೋದಲ್ಲಿ ಬರೆದಿದ್ದಾರೆ.
ಕೈಯಲ್ಲಿ ಕೇವಲ ಒಂದು ಸಣ್ಣ ಕೇಕ್ ತೆಗೆದುಕೊಂಡು ಹೋದ ಇಬ್ಬರು ವಿದ್ಯಾರ್ಥಿಗಳು ಪವನ್ ಯಾವ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದರು ಎಂದು ಖಚಿತವಾಗಿರದಿದ್ದರೂ ಹುಡುಕಾಡಿ ಭೇಟಿಯಾಗಿದ್ದಾರೆ. ಭೇಟಿ ವೇಳೆ ಪವನ್ ತಮ್ಮನ್ನು ಗುರುತಿಸುತ್ತಾರೆಯೇ ಎಂಬ ಕುತೂಹಲ ವಿದ್ಯಾರ್ಥಿಗಳಲ್ಲಿ ಇತ್ತು. ಆದರೆ ಅವರು ಅಂತಿಮವಾಗಿ ಅವನ ಮನೆ ಬಾಗಿಲಿಗೆ ಬಂದಾಗ ಗುರುತಿಸಿದ ಪವನ್ ಮತ್ತು ತಾಯಿ ಸಂತೋಷಪಟ್ಟಿದ್ದಾರೆ.
ತನ್ನದೇ ಆದ ರೀತಿಯಲ್ಲಿ ವಿಹಾಯಸ್‌ಗೆ ಜನ್ಮದಿನದ ಶುಭಾಶಯಗಳನ್ನು ಕೋರಿದ ಪವನ್ಗೆ ವಿಹಾಯಸ್ ಕೇಕ್ ತಿನ್ನಿಸಿದ್ದಾರೆ. ನಂತರ ಪವನ್ ತಾಯಿಯ ಸಹಾಯದಿಂದ ವಿಹಾಯಸ್‌ಗೆ ಕೇಕ್ ತಿನ್ನಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ತಮ್ಮ ಹೊಸ ಸ್ನೇಹವನ್ನು ಗುರುತಿಸಲು ಮೂವರು ಫೋಟೋ ತೆಗೆಸಿಕೊಂಡಿದ್ದಾರೆ. “ಪವನ್ ನಿಮ್ಮನ್ನು ನೋಡಿದಾಗಲೆಲ್ಲಾ ಅಣ್ಣ ಮತ್ತು ಅಕ್ಕ ಎಂಬ ಪದಗಳನ್ನು ಸನ್ನೆ ಮಾಡುತ್ತಾನೆ ಎಂದು ಪವನ್ ತಾಯಿ ಹೇಳಿದಾಗ ನಮ್ಮ ಹೃದಯ ಕರಗಿತು” ಎಂದು ವಿಹಾಯಸ್ ಹೇಳಿದ್ದಾರೆ.
Published On - 4:31 pm, Sun, 3 July 22