Viral Video: ಹುಲಿ ರಸ್ತೆ ದಾಟಲು ವಾಹನಗಳನ್ನು ತಡೆದ ಟ್ರಾಫಿಕ್ ಪೊಲೀಸರು; ಭಾರೀ ವೈರಲ್ ಆಗುತ್ತಿದೆ ವಿಡಿಯೋ
ವನ್ಯಜೀವಿಗಳ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆ ಟ್ರಾಫಿಕ್ ಪೊಲೀಸರು ಹುಲಿ ದಾಟಲು ರಸ್ತೆಯ ಇಕ್ಕೆಲಗಳಲ್ಲಿ ಪ್ರಯಾಣಿಕರನ್ನು ತಡೆದು ನಿಲ್ಲಿಸಿದ ವಿಡಿಯೋ ವೈರಲ್ ಆಗುತ್ತಿದೆ. ಹುಲಿಯನ್ನು ಹೆದರಿಸಬೇಡಿ, ಸುಮ್ಮನಿರಿ ಎಂದು ಪೊಲೀಸರು ವಾಹನ ಸವಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ವಾಹನಗಳ ಸಂಖ್ಯೆ ಮತ್ತು ಸಿಟಿ ಪ್ರದೇಶಗಳು ವ್ಯಾಪ್ತಿ ಹೆಚ್ಚಾಗುತ್ತಾ ಹೋದಂತೆ ಕಾಡುಗಳು ನೆಲಸಮವಾಗಿ ದೊಡ್ಡದೊಡ್ಡ ರಸ್ತೆಗಳು ನಿರ್ಮಾಣಗೊಳ್ಳುತ್ತಿವೆ. ಜನರು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸವಾರಿ ಹೋಗುತ್ತಲೇ ಇರುತ್ತಾರೆ. ನಿರಂತರ ವಾಹನಗಳ ಓಡಾಟದ ಪರಿಣಾಮ ನಾಯಿ, ಜಾನುವಾರುಗಳು ಮಾತ್ರವಲ್ಲ ವನ್ಯಜೀವಿಗಳಿಗೂ ರಸ್ತೆ ದಾಟುವುದು ಸವಾಲಾಗಿ ಪರಿಣಮಿಸಿದೆ. ಕೆಲವೊಮ್ಮೆ ರಸ್ತೆ ದಾಟುವಾಗ ಪ್ರಾಣಿಗಳು ಅಪಘಾತಕ್ಕೀಡಾಗಿ ಸಾವನ್ನಪ್ಪುವ ಮತ್ತು ಗಾಯಗೊಳ್ಳುವ ಪ್ರಕರಣಗಳು ನಡೆಯುತ್ತವೆ. ಇಂತಹ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆ ಟ್ರಾಫಿಕ್ ಪೊಲೀಸರು ಹುಲಿ ರಸ್ತೆ ದಾಟಲು ರಸ್ತೆಯ ಇಕ್ಕೆಲಗಳಲ್ಲಿ ಪ್ರಯಾಣಿಕರನ್ನು ತಡೆದು ನಿಲ್ಲಿಸಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ (Viral Video) ಆಗುತ್ತಿದೆ.
ವೈರಲ್ ವಿಡಿಯೋದಲ್ಲಿ ಇರುವಂತೆ, ಹುಲಿಯೊಂದು ರಸ್ತೆ ದಾಟಲು ಬದಿಯಲ್ಲಿ ನಿಂತಿರುತ್ತದೆ. ಈ ವೇಳೆ ಇಬ್ಬರು ಟ್ರಾಫಿಕ್ ಪೊಲೀಸರು ಆ ರಸ್ತೆಯ ಎರಡೂ ಬದಿಯಿಂದ ಬರುತ್ತಿದ್ದ ವಾಹನಗಳನ್ನು ನಿಲ್ಲಿಸಿ ಹುಲಿ ಆರಾಮವಾಗಿ ರಸ್ತೆ ದಾಟಲು ಅನುವು ಮಾಡಿಕೊಟ್ಟಿದ್ದಾರೆ. ಈ ವೇಳೆ ಓರ್ವ ಪೊಲೀಸ್, ಯಾವುದೇ ರೀತಿಯಲ್ಲಿ ಹುಲಿಯನ್ನು ಹೆದರಿಸಬೇಡಿ, ಸುಮ್ಮನಿರಿ ಎಂದು ವಾಹನಸವಾರರ ಬಳಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಅಪರೂಪವಾಗಿ ಕಾಣಸಿಗುವ ಹುಲಿಯನ್ನು ಜನರು ನೋಡಿದಾಗ ಸುಮ್ಮನಿರುತ್ತಾರಾ? ತಮ್ಮ ಮೊಬೈಲ್ಗಳ ಮೂಲಕ ವಿಡಿಯೋ ಮಾಡಿಕೊಂಡಿದ್ದಾರೆ.
ಈ ವಿಡಿಯೋವನ್ನು ಐಎಫ್‌ಎಸ್ ಅಧಿಕಾರಿ ಪರ್ವೀನ್ ಕಸ್ವಾನ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸಾರ್ವಜನಿಕರನ್ನು ಮತ್ತು ಪೊಲೀಸರನ್ನು ಶ್ಲಾಘಿಸಿದ್ದಾರೆ. “ಹುಲಿಗೆ ಮಾತ್ರ ಹಸಿರು ಸಿಗ್ನಲ್, ಈ ಸುಂದರ ಜನರು, ಅಜ್ಞಾತ ಸ್ಥಳ” ಎಂದು ಶೀರ್ಷಿಕೆ ಬರೆದಿದ್ದಾರೆ.
Green signal only for tiger. These beautiful people. Unknown location. pic.twitter.com/437xG9wuom
— Parveen Kaswan, IFS (@ParveenKaswan) July 22, 2022
ಪರ್ವೀನ್ ಅವರು ಈ ವಿಡಿಯೋ ಎರಡು ದಿನಗಳ ಹಿಂದೆ ಹಂಚಿಕೊಂಡಿದ್ದು, ಈವರೆಗೆ 2.24 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದ್ದು, 9ಸಾವಿರಕ್ಕೂ ಹೆಚ್ಚು ಲೈಕ್ಗಳು ಗಿಟ್ಟಿಸಿಕೊಂಡಿದೆ. 900ಕ್ಕೂ ಹೆಚ್ಚು ರೀಟ್ವೀಟ್ಗಳಾಗಿವೆ. ವಿಡಿಯೋ ನೋಡಿದ ನೆಟ್ಟಿಗರ ಸಂತೋಷಗೊಂಡಿದ್ದು, ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿ, “ತೀರಾ ಅಪರೂಪದ ಘಟನೆ, ಈ ಹುಲಿ ಮಾನವ ಉಪಸ್ಥಿತಿಯನ್ನು ಒಪ್ಪಿಕೊಂಡಿದೆಯೇ ಅಥವಾ ಹಸಿವಿನಿಂದಿರಲಿಲ್ಲವೇ?” ಎಂದು ಕೇಳಿಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ಪ್ರತಿಕ್ರಿಯಿಸಿ, “ಸುಲಭವಾಗಿ ಸಾಗಲು ನಮಗೆ ಹಸಿರು ಕಾರಿಡಾರ್‌ಗಳ ಅಗತ್ಯವಿದೆ” ಎಂದು ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇನ್ನು ಈ ವಿಡಿಯೋವನ್ನು ಗಮನಿಸಿದ ಟ್ವಿಟರ್ ಬಳಕೆದಾರ ಆರ್.ಜೆ.ಫಿಲಿಪ್ ಅವರು ವಿಡಿಯೋಗೆ ಪ್ರತಿಕ್ರಿಯಿಸಿ, “ಸರ್ ಈ ವೀಡಿಯೋ ಮಹಾರಾಷ್ಟ್ರದ ಚಂದ್ರಾಪುರ ಜಿಲ್ಲೆಯ ಪ್ಲೇಸ್- ಬ್ರಹ್ಮಪುರಿಯದ್ದಾಗಿದೆ. ಆ ಸಮಯದಲ್ಲಿ ನಾನು ಕೂಡ ಅಲ್ಲಿದ್ದೆ, ನನ್ನ ಬಳಿ ಇರುವ ವಿಡಿಯೋ ಕೂಡ ಒಂದೇ” ಎಂದು ಹೇಳಿಕೊಂಡಿದ್ದಾರೆ.
Sir this video belong to Maharashtra's chandrapur dist, Place- Bramhapuri, that is Bramhapuri to Nagbhid road,that time I am also there, also one of video I have,just few days before almost same place same tiger ? pic.twitter.com/Lad3ieJmyK
— RJ Philip (@RJPhilip2) July 24, 2022
Published On - 10:39 am, Mon, 25 July 22