ಕೀವ್​​ ಗಡಿಯಲ್ಲಿ ಮಗಳ ಎದುರೇ ಮದುವೆಯಾದ ಉಕ್ರೇನಿಯನ್ ದಂಪತಿ; ಹಾಡಿ, ಸಂಭ್ರಮಿಸಿದ ಸೈನಿಕರ ವಿಡಿಯೋ ವೈರಲ್

| Updated By: ಸುಷ್ಮಾ ಚಕ್ರೆ

Updated on: Mar 07, 2022 | 4:40 PM

Russia-Ukraine War: ಈ ಮದುವೆಯಿಂದ ನಾನು ಬಹಳ ಸಂತೋಷವಾಗಿದ್ದೇನೆ. ಹೊರಗೆ ಘೋರ ಯುದ್ಧ ನಡೆಯುತ್ತಿದ್ದರೂ ನಾವು ಜೀವಂತವಾಗಿದ್ದೇವೆ ಎಂಬುದೇ ಖುಷಿಯ ಸಂಗತಿ. ನನ್ನ ಪತಿ ಜೀವಂತವಾಗಿದ್ದಾನೆ, ಅವನು ನನ್ನೊಂದಿಗೆ ಇದ್ದಾನೆ ಎಂಬುದೇ ನನಗೆ ದೊಡ್ಡ ಸಂತೋಷ ಎಂದು ವಧು ಹೇಳಿದ್ದಾಳೆ.

ಕೀವ್​​ ಗಡಿಯಲ್ಲಿ ಮಗಳ ಎದುರೇ ಮದುವೆಯಾದ ಉಕ್ರೇನಿಯನ್ ದಂಪತಿ; ಹಾಡಿ, ಸಂಭ್ರಮಿಸಿದ ಸೈನಿಕರ ವಿಡಿಯೋ ವೈರಲ್
ಉಕ್ರೇನ್ ಗಡಿಯಲ್ಲಿ ಮದುವೆಯಾದ ದಂಪತಿ
Follow us on

ಕೀವ್: ಕಳೆದ 22 ವರ್ಷಗಳಿಂದ ಒಟ್ಟಿಗೆ ಲಿವ್ ಇನ್ ರಿಲೇಷನ್​ಶಿಪ್​ನಲ್ಲಿದ್ದ ಮತ್ತು 18 ವರ್ಷದ ಮಗಳನ್ನು ಹೊಂದಿರುವ ಉಕ್ರೇನಿಯನ್ (Ukraine) ದಂಪತಿ ಭಾನುವಾರ ಕೀವ್‌ನಲ್ಲಿ ರಕ್ಷಣಾ ರೇಖೆಯಲ್ಲೇ ಮದುವೆಯಾಗುವ ಮೂಲಕ ತಮ್ಮ ಸಂಬಂಧವನ್ನು ಗಟ್ಟಿಗೊಳಿಸಿಕೊಂಡಿದ್ದಾರೆ. ಕಳೆದ ತಿಂಗಳ ಅಂತ್ಯದಲ್ಲಿ ರಷ್ಯಾ (Russia) ಮತ್ತು ಉಕ್ರೇನ್ ನಡುವೆ ಯುದ್ಧ ಪ್ರಾರಂಭವಾದಾಗ ವಧು ಲೆಸಿಯಾ ಇವಾಶ್ಚೆಂಕೊ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿದ್ದಳು. ಬಳಿಕ ಕೀವ್‌ನ ಹೊರವಲಯದಲ್ಲಿರುವ ತನ್ನ ಜಿಲ್ಲೆಯನ್ನು ರಕ್ಷಿಸಲು ಪ್ರಾದೇಶಿಕ ರಕ್ಷಣಾ ಪಡೆಗಳನ್ನು ಸೇರಿಕೊಂಡಳು. ರಷ್ಯಾದ ಆಕ್ರಮಣದ ಆರಂಭದ ಭಾನುವಾರ ಅವರ ಮದುವೆಯವರೆಗೂ ಅವಳು ತನ್ನ ಪಾರ್ಟನರ್ ವ್ಯಾಲೆರಿ ಫೈಲಿಮೊನೊವ್ ಅನ್ನು ನೋಡಲು ಸಾಧ್ಯವಾಗಿರಲಿಲ್ಲ. ಅವರಿಬ್ಬರೂ ಅಧಿಕೃತವಾಗಿ ಗಂಡ-ಹೆಂಡತಿಯಾದಾಗ ಅವರಿಬ್ಬರೂ ಮತ್ತೆ ಒಂದಾದರು.

ಈ ಮದುವೆಯಿಂದ ನಾನು ಬಹಳ ಸಂತೋಷವಾಗಿದ್ದೇನೆ. ಹೊರಗೆ ಘೋರ ಯುದ್ಧ ನಡೆಯುತ್ತಿದ್ದರೂ ನಾವು ಜೀವಂತವಾಗಿದ್ದೇವೆ ಎಂಬುದೇ ಖುಷಿಯ ಸಂಗತಿ. ನನ್ನ ಪತಿ ಜೀವಂತವಾಗಿದ್ದಾನೆ, ಅವನು ನನ್ನೊಂದಿಗೆ ಇದ್ದಾನೆ ಎಂಬುದೇ ನನಗೆ ದೊಡ್ಡ ಸಂತೋಷ. ನಾಳೆ ಏನಾಗುತ್ತದೆ ಎಂಬುದು ಯಾರಿಗೂ ಗೊತ್ತಿಲ್ಲ, ಇಂದಿಗಾಗಿ ನಾವು ಬದುಕಬೇಕು. ನಾವು ರಾಜ್ಯದ ಜನರ ಮುಂದೆ, ದೇವರ ಮುಂದೆ ಮದುವೆಯಾಗಬೇಕು ಎಂಬುದೇ ನಮ್ಮ ನಿರ್ಧಾರವಾಗಿತ್ತು. ನಮಗೆ ವಯಸ್ಸಿಗೆ ಬಂದ ಮಗಳಿದ್ದಾಳೆ. ನಮ್ಮ ಕನಸಿನಂತೆಯೇ ಮಗಳ ಎದುರು ನಾವು ಮದುವೆಯಾಗಿದ್ದಾಳೆ. ನಮ್ಮ ನಿರ್ಧಾರದಿಂದ ನಮ್ಮ ಮಗಳೂ ಖುಷಿಪಟ್ಟಿದ್ದಾಳೆ ಎಂದು ಆ ಜೋಡಿ ಮದುವೆಯಾದ ನಂತರ ಖುಷಿಯಾಗಿ ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಯುದ್ಧದಿಂದಾಗಿ ನಮ್ಮ ಕುಟುಂಬ ಒಟ್ಟಿಗೆ ಇರಲು ಸಾಧ್ಯವಾಗಿಲ್ಲ. ಯುದ್ಧ ಪ್ರಾರಂಭವಾದ ನಂತರ ನಾನು ನನ್ನ ಪತಿಯನ್ನು ಇದೇ ಮೊದಲ ಬಾರಿಗೆ ನೋಡಿದೆ. ನಾವು ವಿವಿಧ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತೇವೆ. BILDಗಾಗಿ ಕೆಲಸ ಮಾಡುವ ಮತ್ತು ಕೀವ್​ನಿಂದ ರಷ್ಯಾ-ಉಕ್ರೇನ್ ಸಂಘರ್ಷವನ್ನು ಕವರ್ ಮಾಡುವ ಜರ್ಮನ್ ವರದಿಗಾರ ಪಾಲ್ ರೋನ್‌ಝೈಮರ್ ಅವರು ಆನ್‌ಲೈನ್‌ನಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಈ ವಿಡಿಯೋ ತುಣುಕಿನಲ್ಲಿ ದಂಪತಿಗಳು ತಮ್ಮ ಒಡನಾಡಿಗಳಿಂದ ಸುತ್ತುವರೆದಿರುವುದನ್ನು ನೋಡಬಹುದು. ಈ ಸಂಭ್ರಮದ ವೇಳೆ ಸೈನಿಕರು ಸುತ್ತಲೂ ನಿಂತು ಉಕ್ರೇನಿಯನ್ ಭಾಷೆಯ ಹಾಡನ್ನು ಹಾಡುತ್ತಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಪ್ರಾದೇಶಿಕ ರಕ್ಷಣಾ ಪಡೆಯಲ್ಲಿ ಸ್ವಯಂಸೇವಕರಾಗಿರುವ ಪ್ರಸಿದ್ಧ ಉಕ್ರೇನಿಯನ್ ಕಲಾವಿದ ತಾರಸ್ ಕೊಂಪನಿಚೆಂಕೊ ಅವರು ಹಾಡುವುದನ್ನು ಕಾಣಬಹುದು.

ಮದುವೆಗೆ ವಧು ಮತ್ತು ವರರು ತಮ್ಮ ಮಿಲಿಟರಿ ಯೂನಿಫಾರಂ ಧರಿಸಿದ್ದರು. ಈ ವಿಡಿಯೋ ವೈರಲ್ ಆಗಿದ್ದು, 1.6 ಮಿಲಿಯನ್ ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಉಕ್ರೇನ್​ನಲ್ಲಿ ರಷ್ಯಾದ ದಾಳಿ ಮುಂದುವರೆದಿದ್ದು, ಕೆಲವು ನಗರಗಳಲ್ಲಿ ತಾತ್ಕಾಲಿಕವಾಗಿ ಕದನ ವಿರಾಮ ಘೋಷಿಸಲಾಗಿದೆ.

ಇದನ್ನೂ ಓದಿ: Russia-Ukraine War: 12ನೇ ದಿನಕ್ಕೆ ಕಾಲಿಟ್ಟ ರಷ್ಯಾ-ಉಕ್ರೇನ್ ಯುದ್ಧ; ಪುಟಿನ್ ಜೊತೆ ಪ್ರಧಾನಿ ಮೋದಿ ಮಾತುಕತೆ

Russia-Ukraine War Live: ಉಕ್ರೇನ್‌ನ 4 ನಗರಗಳಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆ ಮಾಡಿದ ರಷ್ಯಾ

Published On - 4:39 pm, Mon, 7 March 22