Viral Video : ಮಾನಸಿಕ ಆರೋಗ್ಯದ ಬಗ್ಗೆ ಈವತ್ತು ನಾವು ಹೆಚ್ಚು ಗಮನ ಕೊಡುತ್ತಿದ್ದೇವೆ ಮತ್ತು ಮುಕ್ತವಾಗಿ ಮಾತನಾಡುತ್ತಿದ್ದೇವೆ. ಇಂಥ ಸಮಸ್ಯೆಯಿಂದ ಹೊರಬಂದೆ ಎಂದು ನಿರ್ಭಿಡೆಯಿಂದ ಹೇಳಿಕೊಳ್ಳುವಷ್ಟು ತಿಳಿವಳಿಕೆಯುಳ್ಳವರಾಗಿದ್ದೇವೆ. ಸಾಮಾಜಿಕ ಜಾಲತಾಣದಲ್ಲಿ ಈ ವಿಷಯಕ್ಕೆ ಸಂಬಂಧಿಸಿ ಮಿಲಿಯನ್ಗಟ್ಟಲೆ ರೀಲುಗಳನ್ನು ನೋಡಬಹುದಾಗಿದೆ. ಬಹಳ ಮುಕ್ತವಾಗಿ, ಧೈರ್ಯದಿಂದ ಮತ್ತು ಪ್ರಾಮಾಣಿಕವಾಗಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ತಮ್ಮ ಪ್ರಯಾಣವನ್ನು ಹಂಚಿಕೊಳ್ಳುತ್ತಿದ್ದಾರೆ ಇಂದಿನ ಯುವಕ ಯುವತಿಯರು. ಈಗ ವೈರಲ್ ಆಗುತ್ತಿರುವ ಈ ವಿಡಿಯೋ ನೋಡಿ.
ಈ ಯುವತಿಯ ಹೆಸರು ಕಿಯಾ. ಕೆಲವರ್ಷಗಳಿಂದ ನಾನು ಖಿನ್ನತೆಯಿಂದ ಬಳಲುತ್ತಿದ್ದೆ. ಕೊನೆಗೆ ಆಸ್ಪತ್ರೆ ಸೇರುವ ಪರಿಸ್ಥಿತಿ ಬಂದಿತು. ಕಳೆದ ವರ್ಷ ಬೆಂಗಳೂರಿನ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆದೆ. ಬಹುಶಃ ನಾನು ಇದೀಗ ಸಂಪೂರ್ಣವಾಗಿ ಆರಾಮಾಗಿದ್ದೇನೆ ಎಂದು ಭಾವಿಸಿದ್ದೇನೆ. ಆದರೂ ಇನ್ನೂ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹಾಗಾಗಿ ಈ ರೀಲ್ ಮಾಡುತ್ತಿದ್ದೇನೆ ಎಂದು ನೋಟ್ ಬರೆದುಕೊಂಡಿದ್ದಾರೆ ಈಕೆ.
ಅದೆಷ್ಟೋ ರಾತ್ರಿಗಳನ್ನು ನಿದ್ದೆ ಇಲ್ಲದೆ ಕಳೆದಿದ್ದೇನೆ. ಆಸ್ಪತ್ರೆ ಸೇರಿದ ಕೆಲ ವಾರ ಕೂಡ ನನಗೆ ನಿದ್ದೆ ಎನ್ನುವುದು ಸುಲಭವಾಗಿರಲಿಲ್ಲ. ಆದರೆ ಇಲ್ಲಿಯ ವೈದ್ಯರು ಈ ವಿಷಯವಾಗಿ ನನಗೆ ಸಹಾಯ ಮಾಡಿದರು. ನನ್ನ ಹಾಗೆ ಬಂದ ಅನೇಕರು ಇಂಥ ಸಮಸ್ಯೆಗೆ ಒಳಗಾದವರೇ. ಸಮಾನ ಮನಸ್ಕತೆ ಪರಸ್ಪರರ ಒಂಟಿತನವನ್ನು ಕಡಿಮೆ ಮಾಡುತ್ತ ಬಂದಿತು. ಸಂತೋಷವಾಗಿ ಇರುವುದು ಹೇಗೆ ಎನ್ನುವುದನ್ನು ಕಲಿಸಿಕೊಟ್ಟಿತು. ನಿಮಗೂ ಖಿನ್ನತೆಯ ಸಮಸ್ಯೆ ಇದ್ದರೆ ನಿಸ್ಸಂಕೋಚವಾಗಿ ವೈದ್ಯರನ್ನು ಭೇಟಿಯಾಗಿ. ಚಿಕಿತ್ಸೆ ಪಡೆದ ನಂತರದ ದಿನಗಳು ನಿಜಕ್ಕೂ ಚೈತನ್ಯಪೂರ್ಣವಾಗಿರುತ್ತವೆ ಎಂದಿದ್ದಾರೆ ಕಿಯಾ.
ಈ ವಿಡಿಯೋ ಅನ್ನು ಈ ತನಕ 93,000 ಕ್ಕೂ ಹೆಚ್ಚು ಜನರು ಇಷ್ಟಪಟ್ಟಿದ್ಧಾರೆ. 1.5ಗಿಂತಲೂ ಹೆಚ್ಚು ಜನರು ನೋಡಿದ್ದಾರೆ. ಅನೇಕರು ಅನೇಕ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಬಹಳ ಖುಷಿ ಕಿಯಾ, ನೀವು ನಿಮ್ಮನ್ನು ಮರಳಿ ಪಡೆದುಕೊಂಡಿದ್ದೀರಿ. ಇದಕ್ಕಿಂತ ದೊಡ್ಡ ವಿಷಯ ಏನಿದೆ? ನೀವು ಬಹಳ ಮುದ್ದಾಗಿದ್ದೀರಿ, ಧೈರ್ಯ ಮತ್ತು ಉತ್ಸಾಹ ನಿಮ್ಮ ಮುಖದಲ್ಲಿ ಎದ್ದು ಕಾಣುತ್ತಿದೆ ಎಂದಿದ್ದಾರೆ ಒಬ್ಬರು. ನಿಮ್ಮ ಈ ಪ್ರಯಾಣ ಮತ್ತು ಹೋರಾಟದ ಬಗ್ಗೆ ತಿಳಿಸಿಕೊಟ್ಟು ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ. ನಿಮ್ಮ ಭವಿಷ್ಯ ಚೆನ್ನಾಗಿರುತ್ತದೆ, ಲವಲವಿಕೆಯನ್ನು ಕಳೆದುಕೊಳ್ಳಬೇಡಿ ಎಂದಿದ್ದಾರೆ ಮತ್ತೊಬ್ಬರು. ನಮ್ಮ ಮಾನಸಿಕ ಮಾನಸಿಕ ಸ್ಥಿತಿಯನ್ನು ನಾವು ಒಪ್ಪಿಕೊಂಡು ಅದಕ್ಕೆ ಚಿಕಿತ್ಸೆ ಪಡೆದುಕೊಳ್ಳಲು ಧೈರ್ಯ ಬೇಕು. ಆ ಕೆಲಸ ನೀವು ಮಾಡಿದ್ದೀರಿ. ನೀವು ಅನೇಕ ಜನರಿಗೆ ಮಾದರಿಯಾಗಿದ್ದೀರಿ ಎಂದಿದ್ದಾರೆ ಮಗದೊಬ್ಬರು.
ನಿಮ್ಮ ಸುತ್ತಮುತ್ತಲೂ ಯಾರಾದರೂ ಖಿನ್ನತೆಗೆ ಒಳಗಾಗಿದ್ದರೆ ದಯವಿಟ್ಟು ಅವರನ್ನು ಮಾನಸಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಉಪಕರಿಸಿ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:59 pm, Sat, 22 October 22