ವಿಶ್ವದ ಅತ್ಯಂತ ಎತ್ತರದ ಶ್ವಾನ ಯಾವುದು ಎಂಬ ಕುತೂಹಲ ನಿಮಗಿದ್ದರೆ ಉತ್ತರ ಇಲ್ಲಿದೆ. ಗಿನ್ನೆಸ್ ವರ್ಲ್ಡ್ ರೆಕಾರ್ಡ್ (Guinness World Record) ಬುಧವಾರದಂದು ಜಗತ್ತಿನ ಅತ್ಯಂತ ಎತ್ತರದ ಶ್ವಾನವನ್ನು ಘೋಷಿಸಿದ್ದು, ಎರಡು ವರ್ಷದ ಅಮೇರಿಕನ್ ಗ್ರೇಟ್ ಡೇನ್ ತಳಿಯ ‘ಜೀಯಸ್’ (Zeus) ಈ ಹಿರಿಮೆಗೆ ಪಾತ್ರವಾಗಿದೆ. ಇದು ಸದ್ಯ ಜೀವಂತವಿರುವ ಅತ್ಯಂತ ಎತ್ತರದ ಗಂಡು ಶ್ವಾನವಾಗಿದೆ. ಬರೋಬ್ಬರಿ 3 ಅಡಿ 5.18 ಇಂಚು ಅರ್ಥಾತ್ 1.046 ಮೀಟರ್ ಎತ್ತರವಾಗಿದೆ ‘ಜೀಯಸ್’. ಅಮೇರಿಕಾದ ಟೆಕ್ಸಾಸ್ನ ಬೆಡ್ಫೋರ್ಡ್ನಲ್ಲಿರುವ ಡೇವಿಸ್ ಕುಟುಂಬದ ಜತೆ ವಾಸ ಮಾಡುತ್ತಿದ್ದಾನೆ ‘ಜೀಯಸ್’. ಅವನನ್ನು 8 ವಾರಗಳ ಮರಿಯಾಗಿದ್ದಾಗ ಬ್ರಿಟನಿ ಡೇವಿಸ್ ದತ್ತು ಸ್ವೀಕರಿಸಿದ್ದರಂತೆ. ಮರಿಯಾಗಿದ್ದಾಗಲೇ ಆತನ ಕಾಲುಗಳೆಲ್ಲವೂ ದೊಡ್ಡದಾಗಿತ್ತು ಎಂದಿದ್ದಾರೆ ಕುಟುಂಬದವರು. ‘ಜೀಯಸ್’ ಬಗ್ಗೆ ಮತ್ತಷ್ಟು ಕುತೂಹಲಕರ ವಿಚಾರಗಳು ಇಲ್ಲಿವೆ.
ಗಿನ್ನೆಸ್ ವರ್ಲ್ಡ್ ರೆಕಾರ್ಡ್ನ ಟ್ವಿಟರ್ ಖಾತೆಯಲ್ಲಿ ‘ಜೀಯಸ್’ನ ಸಣ್ಣ ಸಾಕ್ಷ್ಯಚಿತ್ರವನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಜೀಯಸ್ ಒಡೆಯರಾದ ಡೇವಿಸ್ ಕುಟುಂಬಸ್ಥರು ಮಾತನಾಡಿದ್ದಾರೆ. ‘‘ಈ ಮೊದಲೆಲ್ಲಾ ಈ ಶ್ವಾನವನ್ನು ನೋಡಿದವರು ಜಗತ್ತಿನ ಅತ್ಯಂತ ಎತ್ತರದ ನಾಯಿಯಿದು ಎನ್ನುತ್ತಿದ್ದರು. ಆದರೆ ಅದೀಗ ನಿಜವಾಗಿದೆ. ನಾವೂ ಕೂಡ ಎಲ್ಲರಿಗೂ ಹೌದು, ಇದು ಜಗತ್ತಿನ ಅತ್ಯಂತ ಎತ್ತರದ ನಾಯಿ ‘ಜೀಯಸ್’ ಎನ್ನಬಹುದು’’ ಎಂದಿದ್ದಾರೆ.
ಇದಲ್ಲದೇ ಈ ಶ್ವಾನವನ್ನು ನೋಡಿದ ತಕ್ಷಣ ಜನರು ಹೇಗೆಲ್ಲಾ ಪ್ರತಿಕ್ರಿಯಿಸುತ್ತಾರೆ ಎನ್ನುವುದುನ್ನು ಅವರು ನೆನಪಿಸಿಕೊಂಡಿದ್ದಾರೆ. ‘‘ಇದು ಕುದುರೆಯಂತಿದೆ..’’, ‘‘ನಾವು ಇದರ ಮೇಲೆ ಸವಾರಿ ಮಾಡಬಹುದೇ?’’, ಹೀಗೆಲ್ಲಾ ಜನರು ವಿಚಿತ್ರ ಪ್ರಶ್ನೆಗಳನ್ನು ಕೇಳುತ್ತಾರಂತೆ. ‘‘ಎಲ್ಲಾ ಪ್ರಶ್ನೆಗೂ ಇಲ್ಲ ಇಲ್ಲ.. ಎಂದು ಸಾಕಾಗಿದೆ’’ ಎಂದಿದ್ದಾರೆ ಡೇವಿಸ್.
ಇಷ್ಟೆಲ್ಲಾ ದೈತ್ಯಾಕಾರ ಹೊಂದಿದ್ದರೂ ‘ಜೀಯಸ್’ ಸ್ನೇಹಜೀವಿಯಂತೆ. ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆತ ಫೇಮಸ್ ಎಂದಿರುವ ಶ್ವಾನದ ಒಡತಿ, ದಲ್ಲಾಸ್ ಸುತ್ತಮುತ್ತ ಅವನಿಗೆ ಅಭಿಮಾನಿಗಳಿದ್ದಾರೆ ಎಂದಿದ್ದಾರೆ. ಜೀಯಸ್ ಮನೆಯಲ್ಲೂ ಇತರ ಸಾಕುಪ್ರಾಣಿಗಳೊಂದಿಗೆ ಅನ್ಯೋನ್ಯವಾಗಿರುತ್ತಾನಂತೆ.
‘ಜೀಯಸ್’ ಬಗ್ಗೆ ಕುತೂಹಲಕರ ವಿಚಾರ ಹೊಂದಿರುವ ಈ ವಿಡಿಯೋ ನೋಡಿ:
New record: Tallest dog living – Zeus, 1.046 metres (3 ft 5.18 in)
The two-year-old Great Dane is living life as the world’s tallest dog! pic.twitter.com/IT7GTwt2nO
— Guinness World Records (@GWR) May 4, 2022
ಇನ್ನಷ್ಟು ಕುತೂಹಲಕರ ವಿಚಾರ ಓದಲು ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:09 pm, Fri, 6 May 22