ಒಂದು ತಿಂಗಳಲ್ಲಿ 8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಪೊಲೀಸರ ಕಳ್ಳಾಟ

Edited By:

Updated on: Dec 16, 2025 | 10:35 AM

ಕಳೆದ ಒಂದು ತಿಂಗಳಲ್ಲಿ ಎಂಟು ಪೊಲೀಸ್‌ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಲಂಚ, ದರೋಡೆ ಹಾಗೂ ಹಲ್ಲೆ ಆರೋಪಗಳು ಪೊಲೀಸ್‌ ಇಲಾಖೆಯ ಮೇಲೆ ಸರಣಿ ಕಪ್ಪು ಚುಕ್ಕೆ ಇಟ್ಟಿವೆ. ಇತ್ತೀಚೆಗೆ ಕುಂದನಹಳ್ಳಿಯಲ್ಲಿ ಹಣಕ್ಕಾಗಿ ಬೆದರಿಸಿ ಯುವತಿ ಆತ್ಮಹತ್ಯೆ ಯತ್ನಕ್ಕೆ ಕಾರಣವಾದ ಪ್ರಕರಣವೂ ಬೆಳಕಿಗೆ ಬಂದಿದೆ. ಈ ಎಲ್ಲಾ ವಿಚಾರಗಳು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಬರಲಿವೆ.

ಬೆಂಗಳೂರು, ಡಿಸೆಂಬರ್ 16: ಜನರನ್ನು ಕಳ್ಳಕಾಕರಿಂದ ರಕ್ಷಿಸಬೇಕಾದ ಪೊಲೀಸರೇ ಕೆಲ ಕಳ್ಳತನ, ಲಂಚ ಪ್ರಕರಣಗಳಲ್ಲಿ ಸಿಲುಕಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು, ಪೊಲೀಸ್‌ ಇಲಾಖೆಯ ವಿಶ್ವಾಸಾರ್ಹತೆ ಕುಸಿಯುತ್ತಿದೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಒಟ್ಟು 8 ಮಂದಿ ಪೊಲೀಸ್‌ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ. ಈ ಪ್ರಕರಣಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆ ಇದ್ದು, ಈ ವಿಷಯವು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಚರ್ಚೆಗೆ ಬರಲಿದೆ. ಸದನದಲ್ಲಿ ಈ ಬಗ್ಗೆ ನಿಲುವಳಿ ಸೂಚನೆ ಮಂಡಿಸಿ ಗಂಭೀರ ಚರ್ಚೆ ನಡೆಸಲು ಚಿಂತನೆ ನಡೆಸಲಾಗಿದೆ.

ಅಮಾನತುಗೊಂಡವರಲ್ಲಿ ಬೆಳ್ಳಂದೂರು ಸಬ್‌ಇನ್ಸ್‌ಪೆಕ್ಟರ್‌ ಸಂತೋಷ್‌ ಮತ್ತು ಕಾನ್ಸ್‌ಟೇಬಲ್‌ ಗೋರಖ್‌ನಾಥ್‌ (ಯುಡಿಆರ್‌ ಪ್ರತಿ ನೀಡಲು ಲಂಚ), ವರ್ತೂರು ಪೊಲೀಸ್‌ ಠಾಣೆಯ ಮೂವರು ಕ್ರೈಂ ಸಿಬ್ಬಂದಿ (ಮಹಿಳೆ ಮೇಲೆ ಹಲ್ಲೆ ಪ್ರಕರಣ), ಕಾನ್ಸ್‌ಟೇಬಲ್‌ ಅಣ್ಣಪ್ಪ ನಾಯ್ಕ (ಸಿದ್ದಾಪುರದ 7 ಕೋಟಿ 11 ಲಕ್ಷ ರಾಬರಿ ಪ್ರಕರಣ), ಹಾಗೂ ಕಾನ್ಸ್‌ಟೇಬಲ್‌ಗಳಾದ ಬಸವರಾಜ್‌ ಮತ್ತು ಗುರುದತ್ತ (ಹಿರಿಯ ನಾಗರಿಕರಿಗೆ ಹೆದರಿಸಿ ಲಂಚ) ಸೇರಿದ್ದಾರೆ. ಈ ಸಿಬ್ಬಂದಿಯನ್ನು ಅಮಾನತುಗೊಳಿಸಿ ಪೊಲೀಸ್‌ ಆಯುಕ್ತ ಸೀಮಂತ್‌ ಕುಮಾರ್‌ ಸಿಂಗ್‌ ಆದೇಶಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ