ಮಂಗಳೂರು ಬಳಿ ಜಲದಿಗ್ಭಂಧನಕ್ಕೊಳಗಾದ ಮನೆ, ಆತಂಕದಲ್ಲಿ ಮನೆಯಲ್ಲಿ ವಾಸವಾಗಿರುವ ಒಂಟಿ ಮಹಿಳೆ
ಕರಾವಳಿ ಪ್ರದೇಶದ ನದಿಗಳೆಲ್ಲ ಉಕ್ಕಿ ಹರಿಯುತ್ತಿವೆ ಎಂದು ನಮ್ಮ ವರದಿಗಾರ ಮಾಹಿತಿ ನೀಡಿದ್ದಾರೆ. ನೇತ್ರಾವತಿ, ನಂದಿನಿ, ಪಡುಕೋಣೆ ಮತ್ತು ಕುಮಾರಧಾರ ನದಿಗಳು ಅಪಾಯ ಮಟ್ಟ ಮೀರಿ ಉಕ್ಕಿವೆ ಎಂಬ ಮಾಹಿತಿ ಇದೆ. ಘಟ್ಟಪ್ರದೇಶದಲ್ಲಿ ಇನ್ನೂ ಎರಡು ಮೂರು ದಿನ ಸತತವಾಗಿ ಮಳೆ ಸುರಿದರೆ ನದಿಗಳು ತಾಂಡವ ನೃತ್ಯ ನಡೆಸಲಿವೆ.
ಮಂಗಳೂರು: ಇದೆಂಥ ಮಳೆ ಮಾರಾಯ್ರೇ? ಜಲದಿಗ್ಭಂಧನ ಅಂದರೆ ಇದೇನಾ? ದೊಡ್ಡ ಮತ್ತು ಭವ್ಯ ಮನೆಯ ಪೋರ್ಟಿಕೋದಲ್ಲಿ ನಿಂತು ಮನೆಯ ಸುತ್ತ ನೀರು ನಿಂತಿರುವುದನ್ನು ವೀಕ್ಷಿಸುತ್ತಿರುವ ಈ ಮಹಿಳೆ ನಿಸ್ಸಂದೇಹವಾಗಿ ಹೆದರಿರುತ್ತಾರೆ ಮತ್ತು ಗಾಬರಿ ಕೂಡ ಆಗಿರುತ್ತಾರೆ. ಯಾರೋ ಒಬ್ಬರು ಮನೆಯಲ್ಲಿ ಅವರೊಬ್ಬರೇ ಇರೋದು ಎಂದು ಹೇಳುತ್ತಿರುವುದನ್ನು ಕೇಳಿಸಿಕೊಳ್ಳಬಹುದು. ಇವರು ಮನೆಗೆ ಬೀಗ ಜಡಿದು ಅಚೆ ಬರೋದು ಮತ್ತು ಹೊರಗಿನವರು ಯಾರಾದರೂ ಅವರ ನೆರವಿಗೆ ಹೋಗುವುದು ಸಾಧ್ಯವಿಲ್ಲ. ನಿನ್ನೆ ರಾತ್ರಿ ಕೇವಲ ಅರ್ಧ ಗಂಟೆ ಸುರಿದ ಅಬ್ಬರದ ಮಳೆಗೆ ಈ ಸ್ಥಿತಿ ನಿರ್ಮಾಣವಾಗಿದೆಯಂತೆ. ಅವರನ್ನು ಮನೆಯಿಂದ ಆಚೆ ತರಬೇಕಾದರೆ ಬೋಟ್ ಬೇಕೇಬೇಕು. ಅಂದಹಾಗೆ ಇದು ಮಂಗಳೂರು ನಗರದ ಎಡಪದವಿ ಎಂದು ಕರೆಸಿಕೊಳ್ಳುವ ಜಾಗ. ಮನೆ ಸುತ್ತ ನಿಂತಿರುವ ನೀರು ಇಂಗಬೇಕಾದರೆ ಬಹಳ ಸಮಯ ಬೇಕಾಗಲಿದೆ. ಮತ್ತೊಂದು ಆತಂಕಕಾರಿ ಸಂಗತಿಯೆಂದರೆ ಕರಾವಳಿ ಪ್ರದೇಶದಲ್ಲಿ ಇನ್ನೂ ಎರಡು ಮೂರು ದಿನಗಳ ಕಾಲ ಮಳೆಯಾಗಲಿದೆ ಎಂದಿರುವ ಹವಾಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಿದೆ. ಪರಿಸ್ಥಿತಿ ಹೀಗಿರುವಾಗ ಈ ಒಂಟಿ ಮಹಿಳೆಗೆ ಜಿಲ್ಲಾಡಳಿತ ಹೇಗೆ ನೆರವು ಒದಗಿಸಲಿದೆ ಅನ್ನೋದು ಕಾದು ನೋಡಬೇಕಿರುವ ಸಂಗತಿ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಮಳೆ..ಮಳೆ..ಕರಾವಳಿ ಭಾಗಕ್ಕೆ ರೆಡ್, ಮಲೆನಾಡಿಗೆ ಆರೆಂಜ್ ಅಲರ್ಟ್: ಬೆಂಗಳೂರಿನಲ್ಲಿ ವಾತಾವರಣ ಬದಲಾವಣೆ