ಮುಖ್ಯಮಂತ್ರಿ ಪ್ರತಿನಿಧಿಸುವ ಕ್ಷೇತ್ರದ ಊರೊಂದರಲ್ಲಿ ಶಾಲಾ ಮಕ್ಕಳಿಗೆ ಬಸ್ ವ್ಯವಸ್ಥೆ ಇಲ್ಲ, ಮಕ್ಕಳು 4-5 ಕಿಮೀ ನಡೆಯಬೇಕು!

ತೀರ್ಥ ಗ್ರಾಮ ಶಿಗ್ಗಾಂವ್ ತಾಲ್ಲೂಕಿನಲ್ಲಿದೆ. ಇದನ್ನು ನಾವು ಯಾಕೆ ಹೇಳುತ್ತಿದ್ದೇವೆ ಅಂದರೆ ಬೊಮ್ಮಾಯಿ ಅವರು ಇಲ್ಲಿನ ಶಾಸಕರು. ದಿಗಿಲುಗೊಳ್ಳುವ ವಿಚಾರ ಅದೇ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ತೀರ್ಥದಂಥ ಊರುಗಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ ಮತ್ತು ಬಸ್ ವ್ಯವಸ್ಥೆ ಇಲ್ಲ.

TV9kannada Web Team

| Edited By: Arun Belly

Mar 26, 2022 | 4:00 PM

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ಶನಿವಾರ ರಸ್ತೆ ಮೂಲಕ ಹಾವೇರಿಗೆ (Haveri) ತೆರಳುವಾಗ ತಿಮ್ಮಾಪುರ ಗ್ರಾಮದ ಬಳಿ ಹುಬ್ಬಳ್ಳಿಯ (Hubballi) ಸರ್ಕಾರೀ ಶಾಲೆಗಳಲ್ಲಿ ಓದುವ ತೀರ್ಥ ಗ್ರಾಮದ ವಿದ್ಯಾರ್ಥಿನಿಯರ ಗುಂಪೊಂದು ಅವರನ್ನು ತಡೆದು ಮನವಿ ಪತ್ರವೊಂದನ್ನು ಸಲ್ಲಿಸಿತು. ಅವರ ಮನವಿ ಏನೆಂದರೆ ತೀರ್ಥ ಗ್ರಾಮಕ್ಕೆ ಬಸ್ ಸೌಕರ್ಯವಿಲ್ಲ. ಈ ಮಕ್ಕಳು ಓದೋದು ಹುಬ್ಬಳ್ಳಿಯಲ್ಲಿ. ಅಲ್ಲಿಗೆ ಹೋಗಲು ಬಸ್ ಹಿಡಿಯಬೇಕಾದರೆ ತಿಮ್ಮಾಪುರದವರೆಗೆ ಸುಮಾರು 4-5 ಕಿಲೋಮೀಟರ್ ನಡೆದು ಬರಬೇಕು. ಬೇಸಿಗೆ ರಜೆ ಮುಗಿದ ಬಳಿಕ ಮಳೆ ಶುರುವಾಗುತ್ತದೆ. ಮಕ್ಕಳು ಮಳೆಯಲ್ಲಿ, ಕೆಸರಲ್ಲಿ ಮಣಭಾರದ ಸ್ಕೂಲ್ ಬ್ಯಾಗ್ ಗಳನ್ನು ಹೊತ್ತು ನಡೆಯುವ ಬಗ್ಗೆ ಯೋಚನೆ ಮಾಡಿ. ಅಲ್ಲದೆ ಶಾಲೆ ಮುಗಿಸಿಕೊಂಡು ಮನೆಗೆ ಹೋಗುವಾಗ ಮಕ್ಕಳು ಹಸಿದಿರುತ್ತವೆ. ಅವರ ಸಮಸ್ಯೆಯನ್ನು ಪ್ರಾಯಶಃ ಮುಖ್ಯಮಂತ್ರಿಗಳು ಅರ್ಥಮಾಡಿಕೊಂಡಿದ್ದಾರೆ ಅನಿಸುತ್ತೆ.

ಮಕ್ಕಳಿಗೆ ಅವರು ಕೆಲ ಪ್ರಶ್ನೆಗಳನ್ನು ಕೇಳಿದರು ಮತ್ತು ಬಸ್ ವ್ಯವಸ್ಥೆ ಮಾಡಿಸುವ ಭರವಸೆಯನ್ನು ಅವರಿಗೆ ನೀಡಿದರು. ಬೇಸಿಗೆ ರಜೆ ಮುಗಿದು ಜೂನ್ ನಲ್ಲಿ ಶಾಲೆಗಳು ಪುನರಾರಂಭಗೊಳ್ಳುವ ಹೊತ್ತಿಗೆ ತೀರ್ಥ ಗ್ರಾಮಕ್ಕೆ ಬಸ್ ಸೌಕರ್ಯ ಸಿಗಲಿದೆ ಎಂಬ ನಿರೀಕ್ಷೆಯನ್ನು ಮಕ್ಕಳೊಂದಿಗೆ ನಾವು ಸಹ ಇಟ್ಟುಕೊಂಡಿದ್ದೇವೆ ಮಾರಾಯ್ರೇ.

ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ ನಂತರ ಮುಗ್ಧ ಮಕ್ಕಳು ಮಾಧ್ಯಮದವರ ಪ್ರಶ್ನೆಗಳಿಗೆ ಮುದ್ದುಮುದ್ದಾಗಿ ಉತ್ತರ ನೀಡುತ್ತಾರೆ. ಬಸ್ ವ್ಯವಸ್ಥೆ ಬೇಗ ಮಾಡಿಸುವ ಆಶ್ವಾಸನೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆಂದು ಅವರು ಮುಗ್ಧ ನಗುವಿನೊಂದಿಗೆ ಹೇಳುತ್ತಾರೆ.

ಅದೆಲ್ಲ ಸರಿ, ತೀರ್ಥ ಗ್ರಾಮ ಶಿಗ್ಗಾಂವ್ ತಾಲ್ಲೂಕಿನಲ್ಲಿದೆ. ಇದನ್ನು ನಾವು ಯಾಕೆ ಹೇಳುತ್ತಿದ್ದೇವೆ ಅಂದರೆ ಬೊಮ್ಮಾಯಿ ಅವರು ಇಲ್ಲಿನ ಶಾಸಕರು. ದಿಗಿಲುಗೊಳ್ಳುವ ವಿಚಾರ ಅದೇ. ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ತೀರ್ಥದಂಥ ಊರುಗಳಿಗೆ ಮೂಲಭೂತ ಸೌಕರ್ಯಗಳಾದ ರಸ್ತೆ ಮತ್ತು ಬಸ್ ವ್ಯವಸ್ಥೆ ಇಲ್ಲ.

ಇದನ್ನೂ ಓದಿ:   Basavaraj Bommai: ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಆಯೋಗ ರಚನೆ: ಸಿಎಂ ಬೊಮ್ಮಾಯಿ ಘೋಷಣೆ

Follow us on

Click on your DTH Provider to Add TV9 Kannada