PBKS vs SRH: 18 ಎಸೆತಗಳಲ್ಲಿ ಅರ್ಧಶತಕ; ಅಭಿಷೇಕ್ ಅಬ್ಬರ ಹೇಗಿತ್ತು ನೋಡಿ
Abhishek Sharma IPL 2026: ಐಪಿಎಲ್ 2026 ರ 17 ನೇ ಪಂದ್ಯದಲ್ಲಿ, ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಅವರ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಸನ್‌ರೈಸರ್ಸ್ ಹೈದರಾಬಾದ್ ಪವರ್‌ಪ್ಲೇನಲ್ಲಿ 100 ರ ಗಡಿ ದಾಟಿತು. ಅಭಿಷೇಕ್ ಕೇವಲ 18 ಎಸೆತಗಳಲ್ಲಿ 53 ರನ್ ಗಳಿಸಿ ವೇಗದ ಅರ್ಧಶತಕ ದಾಖಲಿಸಿದರು. ಅವರು 28 ಎಸೆತಗಳಲ್ಲಿ 74 ರನ್ ಬಾರಿಸಿ, ಪವರ್‌ಪ್ಲೇನಲ್ಲಿ 7 ಸಿಕ್ಸರ್‌ಗಳನ್ನು ಬಾರಿಸಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು. ಈ ಮೂಲಕ ಪಂಜಾಬ್ ಕಿಂಗ್ಸ್ ವಿರುದ್ಧ ಸತತ ಮೂರನೇ ಅರ್ಧಶತಕ ಪೂರೈಸಿದರು.
ಐಪಿಎಲ್ 2026 ರ 17 ನೇ ಪಂದ್ಯದಲ್ಲಿ, ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ ಪರ ಆರಂಭಿಕರಾದ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಎಂದಿನಂತೆ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಇದರ ಪರಿಣಾಮವಾಗಿ ಸನ್‌ರೈಸರ್ಸ್ ತಂಡ ಪವರ್‌ಪ್ಲೇನಲ್ಲಿಯೇ ಶತಕದ ಗಡಿ ದಾಟಿತು. ಅದರಲ್ಲೂ ಅಬ್ಬರದ ಇನ್ನಿಂಗ್ಸ್ ಕಟ್ಟಿದ ಅಭಿಷೇಕ್ ಶರ್ಮಾ ಕೇವಲ 18 ಎಸೆತಗಳಲ್ಲಿ 5 ಬೌಂಡರಿ ಮತ್ತು 5 ಸಿಕ್ಸರ್‌ಗಳ ಸಹಾಯದಿಂದ 53 ರನ್ ಗಳಿಸಿದರು. ಇದರೊಂದಿಗೆ, ಅವರು ಈ ಪಂದ್ಯಾವಳಿಯಲ್ಲಿ ತಮ್ಮ ಮೊದಲ ಅರ್ಧಶತಕವನ್ನು ಪೂರೈಸಿದರು.
ಅಭಿಷೇಕ್ ಶರ್ಮಾ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಸತತ ಮೂರನೇ ಅರ್ಧಶತಕ ಗಳಿಸಿದ್ದಾರೆ . ಇದಕ್ಕೂ ಮೊದಲು, ಅವರು ಐಪಿಎಲ್ 2024 ಮತ್ತು ಐಪಿಎಲ್ 2025 ರಲ್ಲಿ ಅರ್ಧಶತಕ ಗಳಿಸಿದ್ದರು. ಈಗ ಅವರು ಐಪಿಎಲ್ 2026 ರಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ತಮ್ಮ ಮೂರನೇ ಅರ್ಧಶತಕ ಬಾರಿಸಿದ್ದಾರೆ. ಅಭಿಷೇಕ್ ಶರ್ಮಾ ಪವರ್‌ಪ್ಲೇನ 6 ಓವರ್‌ಗಳಲ್ಲಿ 22 ಎಸೆತಗಳನ್ನು ಆಡಿ 66 ರನ್ ಗಳಿಸಿದರು. ಇದರಲ್ಲಿ 5 ಬೌಂಡರಿಗಳು ಮತ್ತು 7 ಸಿಕ್ಸರ್‌ಗಳು ಸೇರಿದ್ದವು. ಅಭಿ ಮತ್ತು ಹೆಡ್ ಆಟದಿಂದಾಗಿ ಸನ್‌ರೈಸರ್ಸ್ ಹೈದರಾಬಾದ್ 6 ಓವರ್‌ಗಳಲ್ಲಿ 105 ರನ್ ಗಳಿಸಿತು. ಅಂತಿಮವಾಗಿ ಅಭಿಷೇಕ್ ಶರ್ಮಾ, ಶಶಾಂಕ್ ಸಿಂಗ್ ಬೌಲಿಂಗ್‌ನಲ್ಲಿ 28 ಎಸೆತಗಳಲ್ಲಿ 8 ಸಿಕ್ಸರ್‌ಗಳು ಮತ್ತು 5 ಬೌಂಡರಿಗಳ ಸಹಾಯದಿಂದ 74 ರನ್ ಗಳಿಸಿ ಔಟಾದರು.
ಇದರ ಜೊತೆಗೆ ಅಭಿಷೇಕ್ ಶರ್ಮಾ ಐಪಿಎಲ್ ಇನ್ನಿಂಗ್ಸ್‌ನಲ್ಲಿ 1 ರಿಂದ 6 ಓವರ್‌ಗಳಲ್ಲಿ ಅತಿ ಹೆಚ್ಚು ಸಿಕ್ಸರ್‌ಗಳನ್ನು ಬಾರಿಸಿದ ಆಟಗಾರರ ಪಟ್ಟಿಗೆ ಸೇರಿದ್ದಾರೆ. ಇದಕ್ಕೂ ಮೊದಲು, ಮುಂಬೈ ಇಂಡಿಯನ್ಸ್ ಪರ ಆಡುವಾಗ ಸನತ್ ಜಯಸೂರ್ಯ 2008 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಜೋಸ್ ಬಟ್ಲರ್ 2018 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 7 ಸಿಕ್ಸರ್‌ಗಳನ್ನು ಬಾರಿಸಿದ್ದರು. 2022 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡುವಾಗ ಜಾನಿ ಬೈರ್‌ಸ್ಟೋವ್ ಆರ್‌ಸಿಬಿ ವಿರುದ್ಧ 7 ಸಿಕ್ಸರ್‌ಗಳನ್ನು ಬಾರಿಸಿದ್ದರು. ಈಗ ಸನ್‌ರೈಸರ್ಸ್ ಹೈದರಾಬಾದ್ ಪರ ಆಅಭಿಷೇಕ್ ಶರ್ಮಾ ಪಂಜಾಬ್ ಕಿಂಗ್ಸ್ ವಿರುದ್ಧ 7 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಐಪಿಎಲ್‌ನಲ್ಲಿ ಅಂತಹ ಸಾಧನೆ ಮಾಡಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ