ರಾಜ್ಯಾದ್ಯಂತ ಪಡಿತರ ಅಕ್ಕಿಗೆ ಸರ್ವರ್ ಸಮಸ್ಯೆ: ರೇಷನ್ ವಿತರಣೆ ವಿಳಂಬದಿಂದ ಜನ ಪರದಾಟ
ರಾಜ್ಯಾದ್ಯಂತ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪಡಿತರ ವಿತರಣೆಯಲ್ಲಿ ಸರ್ವರ್ ಸಮಸ್ಯೆಗಳು ತಲೆದೋರಿವೆ. ಇದರ ಪರಿಣಾಮವಾಗಿ, ಲಕ್ಷಾಂತರ ಫಲಾನುಭವಿಗಳು ಪಡಿತರ ಅಕ್ಕಿ ಪಡೆಯಲು ಪ್ರತಿದಿನವೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಪಡಿತರ ವಿತರಿಸಲು ಆದೇಶ ನೀಡಿದ್ದರೂ, ತಾಂತ್ರಿಕ ಅಡಚಣೆಗಳಿಂದಾಗಿ ಈ ಆದೇಶ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಸರ್ವರ್ ಸಮಸ್ಯೆಗಳಿಂದಾಗಿ ರೇಷನ್ ವಿತರಣೆ ವಿಳಂಬವಾಗುತ್ತಿದ್ದು, ಹಲವೆಡೆ ಸಂಪೂರ್ಣವಾಗಿ ನಿಂತು ಹೋಗಿದೆ.
ಬೆಂಗಳೂರು, ನವೆಂಬರ್ 27: ರಾಜ್ಯಾದ್ಯಂತ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಪಡಿತರ ವಿತರಣೆಯಲ್ಲಿ ಸರ್ವರ್ ಸಮಸ್ಯೆಗಳು ತಲೆದೋರಿವೆ. ಇದರ ಪರಿಣಾಮವಾಗಿ, ಲಕ್ಷಾಂತರ ಫಲಾನುಭವಿಗಳು ಪಡಿತರ ಅಕ್ಕಿ ಪಡೆಯಲು ಪ್ರತಿದಿನವೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರವು ಬೆಳಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಪಡಿತರ ವಿತರಿಸಲು ಆದೇಶ ನೀಡಿದ್ದರೂ, ತಾಂತ್ರಿಕ ಅಡಚಣೆಗಳಿಂದಾಗಿ ಈ ಆದೇಶ ಪರಿಣಾಮಕಾರಿಯಾಗಿ ಜಾರಿಯಾಗುತ್ತಿಲ್ಲ. ಸರ್ವರ್ ಸಮಸ್ಯೆಗಳಿಂದಾಗಿ ರೇಷನ್ ವಿತರಣೆ ವಿಳಂಬವಾಗುತ್ತಿದ್ದು, ಹಲವೆಡೆ ಸಂಪೂರ್ಣವಾಗಿ ನಿಂತು ಹೋಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದಲೂ ಸರ್ವರ್ ಸಮಸ್ಯೆ ನಿರಂತರವಾಗಿ ಕಾಡುತ್ತಿದೆ. ಇದೇ ರೀತಿಯ ಪರಿಸ್ಥಿತಿ ಸಕಲೇಶಪುರ ತಾಲೂಕಿನಲ್ಲಿಯೂ ಕಂಡುಬಂದಿದೆ. ಇಲ್ಲಿನ ಫಲಾನುಭವಿಗಳು ಕೊರೆಯುವ ಚಳಿಯಲ್ಲೂ ಮುಂಜಾನೆ 4 ಗಂಟೆಯಿಂದಲೇ ರೇಷನ್ ಅಂಗಡಿಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದರೂ, ಸರ್ವರ್ ದೋಷದಿಂದ ಪಡಿತರ ಸಿಗದೆ ಆಕ್ರೋಶ ಹೊರಹಾಕಿದ್ದಾರೆ. ಚಾಮರಾಜನಗರ ಜಿಲ್ಲೆಯ ದಡದಹಳ್ಳಿಯಲ್ಲೂ ಇದೇ ರೀತಿಯ ಸಮಸ್ಯೆ ಉಂಟಾಗಿದ್ದು, ಜನಸಾಮಾನ್ಯರು ತಮ್ಮ ದೈನಂದಿನ ಅವಶ್ಯಕತೆಗಳಿಗಾಗಿ ಕಾಯುವಂತಾಗಿದೆ.
ರಾಜ್ಯದಾದ್ಯಂತ ಪಡಿತರ ವಿತರಣೆಯಲ್ಲಿ ಎದುರಾಗಿರುವ ಈ ತಾಂತ್ರಿಕ ಸಮಸ್ಯೆಗಳು ಅನ್ನಭಾಗ್ಯ ಯೋಜನೆಯ ಉದ್ದೇಶವನ್ನು ತೊಂದರೆಗೊಳಗಾಗಿಸುತ್ತಿದ್ದು, ಬಡ ಮತ್ತು ಮಧ್ಯಮ ವರ್ಗದ ಜನರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಈ ಸಮಸ್ಯೆಗಳನ್ನು ಕೂಡಲೇ ಸರಿಪಡಿಸಿ, ಪಡಿತರ ವಿತರಣೆಯನ್ನು ಸುಗಮಗೊಳಿಸುವಂತೆ ಫಲಾನುಭವಿಗಳು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ.
