ಸಂತೋಷ್ ಸಾವು ಪ್ರಕರಣ: ಪ್ರಾಥಮಿಕ ವರದಿ ಸಿಕ್ಕ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಎಂದರು ಮುಖ್ಯಮಂತ್ರಿ ಬೊಮ್ಮಾಯಿ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Apr 12, 2022 | 4:30 PM

ಪೊಲೀಸರು ನಡೆಸುವ ತನಿಖೆಯಲ್ಲಿ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸ್ ಇಲಾಖೆ ಸರ್ವ ಸ್ವತಂತ್ರವಾಗಿ ತನಿಖೆ ನಡೆಸುವುದು ಅನ್ನೋದನ್ನು ತಿಳಿಸಲು ಇಚ್ಛೆಪಡುವುದಾಗಿ ಮುಖ್ಯಮಂತ್ರಿಗಳು ಹೇಳಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ (KS Eshwarappa) ಮತ್ತೊಮ್ಮೆ ತೊಂದರೆಗೆ ಸಿಲುಕಿದ್ದಾರೆ. ಅವರ ವಿರುದ್ಧ 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿ ಪ್ರಧಾನಿ ನರೇಂದ್ರ ಮೋದಿಯವರಿಗೂ (PM Narendra Modi) ಪತ್ರ ಬರೆದಿದ್ದ ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ (Santosh Patil) ಅವರ ದೇಹ ಉಡುಪಿಯ ಹೋಟೆಲೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅವರ ಬರೆದಿರುವ ಡೆತ್ ನೋಟ್ ಒಂದು ಪತ್ತೆಯಾಗಿದೆ ಅಂತ ಹೇಳಲಾಗುತ್ತಿದ್ದು ಅದರ ನೈಜ್ಯತೆ ಬಗ್ಗೆ ತನಿಖೆ ಆರಂಭವಾಗಿದೆ. ಮಂಗಳವಾರ ಮಂಗಳೂರಲ್ಲಿದ್ದ ಮುಖ್ಯಮಂತ್ರಿ ಅವರಿಗೆ ಮಾಧ್ಯಮದವರು ಸಂತೋಷ್ ಬಗ್ಗೆ ಪ್ರಶ್ನೆಗಳನ್ನು ಕೇಳಿದಾಗ ಅವರಿಂದ ಸ್ಪಷ್ಟವಾದ ಉತ್ತರಗಳು ಸಿಗಲಿಲ್ಲ. ಸಂತೋಷ್ ಅವರ ದೇಹದ ಬಳಿ ದೊರೆತ ಡೆತ್ ನೋಟ್ ನಲ್ಲಿ ನನ್ನ ಸಾವಿಗೆ ಈಶ್ವರಪ್ಪ ನೇರ ಕಾರಣ ಎಂದು ಬರೆದಿದೆ ಎನ್ನಲಾಗಿದೆ.

ಸಂತೋಷ್ ಅವರ ದೇಹ ಉಡುಪಿಯ ಹೋಟೆಲೊಂದರಲ್ಲಿ ನೇತಾಡುವ ಸ್ಥಿತಿಯಲ್ಲಿ ಸಿಕ್ಕಿರುವ ಕುರಿತು ಮಾತ್ರ ತಮಗೆ ಮಾಹಿತಿ ಲಭ್ಯವಾಗಿದೆ. ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅವರ ಸಿಬ್ಬಂದಿ ಸ್ಥಳಕ್ಕೆ ದಾವಿಸಿದ್ದಾರೆ. ವಿಧಿ ವಿಜ್ಞಾನ ತಂಡ ಸ್ಥಳದಲ್ಲಿದೆ. ಅವರಿಂದ ಪ್ರಾಥಮಿಕ ವರದಿ ದೊರೆತ ನಂತರವೇ ಮುಂದಿನ ಕ್ರಮದ ಬಗ್ಗೆ ಯೋಚಿಸಲಾಗುವುದು ಎಂದು ಬೊಮ್ಮಾಯಿ ಹೇಳಿದರು.

ಆದರೆ ಪೊಲೀಸರು ನಡೆಸುವ ತನಿಖೆಯಲ್ಲಿ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸ್ ಇಲಾಖೆ ಸರ್ವ ಸ್ವತಂತ್ರವಾಗಿ ತನಿಖೆ ನಡೆಸುವುದು ಅನ್ನೋದನ್ನು ತಿಳಿಸಲು ಇಚ್ಛೆಪಡುವುದಾಗಿ ಮುಖ್ಯಮಂತ್ರಿಗಳು ಹೇಳಿದರು.

ಸಚಿವ ಈಶ್ವರಪ್ಪನವರ ಹೆಸರು ಡೆತ್ ನೋಟ್ನಲ್ಲಿ ಉಲ್ಲೇಖಿತಗೊಂಡಿರುವ ಬಗ್ಗೆ ಬೊಮ್ಮಾಯಿ ಅವರ ಗಮನ ಸೆಳೆದಾಗ, ಒಮ್ಮೆ ಪ್ರಾಥಮಿಕ ವರದಿ ಸಿಕ್ಕಿತು ಅಂತಾದರೆ ಅದರ ಆಧಾರದ ಮೇಲೆ ತಪ್ಪಿತಸ್ಥರು ಯಾರೇ ಆಗಿದ್ದರೂ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಬಿಜೆಪಿ ಕಾರ್ಯಕರ್ತರೂ ಆಗಿದ್ದ ಸಂತೋಷ್ ಪಾಟೀಲ್ ಅವರು ಕೇವಲ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದರು ಮತ್ತು ಅವರಿಗೆ ಒಂದೂವರೆ ವರ್ಷದ ಮಗು ಇದೆ.

ಇದನ್ನೂ ಓದಿ:    Santosh Suicide: ಸಚಿವ ಈಶ್ವರಪ್ಪ ವಿರುದ್ಧ ಗುತ್ತಿಗೆದಾರ ಸಂತೋಷ್ ಲಂಚದ ಕುರಿತು ಮಾಡಿದ್ದ ಗಂಭೀರ ಆರೋಪಗಳ ವಿವರ ಇಲ್ಲಿದೆ

ಇದನ್ನೂ ಓದಿ:    Santosh Suicide: ಅದು ಡೆತ್ ನೋಟ್ ಅಲ್ಲ ಎನಿಸುತ್ತೆ, ಸಂತೋಷ್ ಸಾವಿಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ  

Published on: Apr 12, 2022 04:30 PM