ಶಿಡ್ಲಘಟ್ಟ, ಮೈಸೂರು ಆಯ್ತು ಶಿವಮೊಗ್ಗ ಸರದಿ: ಗ್ರಾಮಸ್ಥನಿಗೆ ಅವಾಚ್ಯವಾಗಿ ನಿಂದಿಸಿದ ಕಾಂಗ್ರೆಸ್ ಕಾರ್ಯಕರ್ತ

Edited By:

Updated on: Jan 22, 2026 | 1:41 PM

ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಪೌರಾಯುಕ್ತೆಗೆ ಅವಾಚ್ಯ ಪದಗಳಿಂದ ನಿಂದಿಸಿದ್ದು, ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರವಾದ ವರುಣಾದಲ್ಲಿ ಮಹಿಳಾ ಸರ್ಕಾರಿ ಅಧಿಕಾರಿಗೆ ಕಾಂಗ್ರೆಸ್ ನಾಯಕ ಅವಾಚ್ಯ ಪದಗಳಿಂದ ನಿಂದನೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಶಿವಮೊಗ್ಗದ ಹೊಸನಗರ ತಾಲ್ಲೂಕಿನ ಮೇಲಿನಬೇಸಿಗೆ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಗ್ರಾಮಸ್ಥರಿಗೆ ಅವಾಚ್ಯವಾಗಿ ನಿಂದಿಸಿದ ವಿಡಿಯೋ ವೈರಲ್ ಆಗಿದೆ.

ಶಿವಮೊಗ್ಗ, ಜನವರಿ 22: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮೇಲಿನಬೇಸಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಸವೆ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಗ್ರಾಮ ಪಂಚಾಯಿತಿ ಸದಸ್ಯನೊಬ್ಬ ಸಾರ್ವಜನಿಕವಾಗಿ ದಬ್ಬಾಳಿಕೆ ನಡೆಸಿದ ಆರೋಪ ಕೇಳಿಬಂದಿದೆ. ರಸ್ತೆ ಕಾಮಗಾರಿ ವಿಚಾರವಾಗಿ ಗ್ರಾಮಸ್ಥನೊಂದಿಗೆ ವಾಗ್ವಾದಕ್ಕಿಳಿದ ಸದಸ್ಯ ಧರ್ಮಪ್ಪ, ಅವಾಚ್ಯ ಶಬ್ದಗಳಿಂದ ನಿಂದನೆ ನಡೆಸಿದ್ದು, ಘಟನೆ ಗ್ರಾಮದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಸ್ಥಳೀಯ ನಿವಾಸಿ ರಮೇಶ್​ಗೆ ಧರ್ಮಪ್ಪ ಅಸಭ್ಯ ಹಾಗೂ ಅವಾಚ್ಯ ಪದಗಳನ್ನು ಬಳಸಿ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ, ಕೋಪದ ಅತಿರೇಕದಲ್ಲಿ ಪಾದರಕ್ಷೆಯಿಂದ ಹೊಡೆಯಲು ಮುಂದಾದ ಘಟನೆಯೂ ನಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಚಿಕ್ಕಬಳ್ಳಾಪುರದ ಶಿಡ್ಲಘಟ್ಟ ಹಾಗೂ ಮೈಸೂರಿನಲ್ಲಿ ನಡೆದ ಇಂತಹ ಘಟನೆಗಳ ಬಳಿಕ, ಇದೀಗ ಶಿವಮೊಗ್ಗದಲ್ಲೂ ಪುಡಿ ಕಾರ್ಯಕರ್ತನ ಪುಂಡಾಟ ಮರುಕಳಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ‘ಕಾನೂನಿನ ಭಯವೇ ಇಲ್ಲದಂತೆ ವರ್ತಿಸುವ ಇಂಥ ಕೆಲ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ