ಪನಾಮಾ ಪೇಪರ್ಸ್ ಪ್ರಕರಣ: ಜಾರಿ ನಿರ್ದೇಶನಾಲಯದ ಎದುರು ಹಾಜರಾಗಿ ಹೇಳಿಕೆಯನ್ನು ದಾಖಲಿಸಿದರು ಐಶ್ವರ್ಯ ರೈ ಬಚ್ಚನ್
ಮೂಲಗಳ ಪ್ರಕಾರ ಐಶರ್ಯ ರೈ ಬಚ್ಚನ್ ಅವರು ಕಳೆದ 15 ವರ್ಷಗಳಲ್ಲಿ ವಿದೇಶೀ ಮೂಲಗಳಿಂದ ತಮಗೆ ಸಂದಾಯವಾಗಿರುವ ಹಣದ ಬಗ್ಗೆ ವಿವರಗಳನ್ನು ಇಡಿ ಸಲ್ಲಿಸಿದ್ದಾರೆ.
ಪನಾಮಾ ಪೇಪರ್ಗಳಿಗೆ ಸಂಬಂಧಿಸಿದಂತೆ ವಿದೇಶಿ ವಿನಿಮಯ ಉಲ್ಲಂಘನೆ ಆರೋಪದಡಿ ಜಾರಿ ನಿರ್ದೇಶನಾಲಯವು ವಿಖ್ಯಾತ ಬಾಲಿವುಡ್ ನಟಿ ಮತ್ತು ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಅವರನ್ನು ಸೋಮವಾರದಂದು ನವದೆಹಲಿಯಲ್ಲಿ ವಿಚಾರಣೆ ನಡೆಸಿತು. ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ತನಿಖಾ ದಳವು ಐಶ್ವರ್ಯ ಅವರು ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ನೆಲೆಗೊಂಡಿರುವ ಕಂಪನಿಯೊಂದರಲ್ಲಿ ಹಣ ಹೂಡಿರುವ ಅರೋಪಗಳ ಹಿನ್ನೆಲೆಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿತು. ಭಾರತದ ಮೆಗಾಸ್ಟಾರ್ ಅಮಿತಾಭ್ ಬಚ್ಚನ್ ಅವರ ಸೊಸೆಯಾಗಿರುವ ಐಶ್ವರ್ಯ ಅವರಿಗೆ ಈ ಮೊದಲು ಸಹ ಎರಡು ಬಾರಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿಗೊಳಿಸಲಾಗಿತ್ತು. ಆದರೆ ಎರಡು ಬಾರಿಯೂ ಅವರು ಸಮಯಾವಕಾಶ ಕೇಳಿದ್ದರು.
ನಿಮಗೆ ಗೊತ್ತಿರುವ ಹಾಗೆ ಜಾರಿ ನಿರ್ದೇಶನಾಲಯವು 2017 ರಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳ ತನಿಖೆಯನ್ನು ಪ್ರಾರಂಭಿಸಿತು. ಭಾರತೀಯ ರಿಸರ್ವ್ ಬ್ಯಾಂಕ್‌ನ ಮುಕ್ತ ರವಾನೆ ಯೋಜನೆ (ಎಲ್‌ಆರ್‌ಎಸ್) ಅಡಿಯಲ್ಲಿ 2004 ರಿಂದ ಅವರ ವಿದೇಶಿ ವ್ಯವಹಾರಗಳ ಬಗ್ಗೆ ವಿವರಣೆ ನೀಡುವಂತೆ ಬಚ್ಚನ್ ಕುಟುಂಬಕ್ಕೆ ನೋಟಿಸ್ ಜಾರಿ ಮಾಡಿತ್ತು.
ಮೂಲಗಳ ಪ್ರಕಾರ ಐಶರ್ಯ ರೈ ಬಚ್ಚನ್ ಅವರು ಕಳೆದ 15 ವರ್ಷಗಳಲ್ಲಿ ವಿದೇಶೀ ಮೂಲಗಳಿಂದ ತಮಗೆ ಸಂದಾಯವಾಗಿರುವ ಹಣದ ಬಗ್ಗೆ ವಿವರಗಳನ್ನು ಇಡಿ ಸಲ್ಲಿಸಿದ್ದಾರೆ.
ಐಶ್ವರ್ಯ ಅವರು 2004ರಲ್ಲಿ ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ಸ್ಥಾಪಿತವಾಗಿದ್ದ ಅಮಿಕ್ ಪಾರ್ಟ್ನರ್ಸ್ ಹೆಸರಿನ ಸಂಸ್ಥೆ ನಿರ್ದೇಶಕರಾಗಿದ್ದರು ಅಂತ ಮಾಹಿತಿಯೊಂದು ತಿಳಿಸುತ್ತದೆ. ಹಾಗೆಯೇ, ಐಶ್ವರ್ಯ 2009ರಲ್ಲಿ ಕಂಪನಿಯಿಂದ ಹೊರಬಿದ್ದರು ಎಂದು ಮಾಹಿತಿ ತಿಳಿಸುತ್ತದೆ. ನಂತರದ ದಿನಗಳಲ್ಲಿ ಸದರಿ ಕಂಪನಿಯನ್ನು ದುಬೈ ಮೂಲದ ಬಿಕೆಆರ್ ಅದೋನಿಸ್ ಖರೀದಿಸಿತ್ತು.
ಪನಾಮ ಪೇಪರ್ಸ್ ಪ್ರಕರಣವು ಮೊಸಾಕ್ ಫೋನ್ಸೆಕಾದಿಂದ ಲಕ್ಷಾಂತರ ದಾಖಲೆಗಳನ್ನು ಕದ್ದು 2016 ರಲ್ಲಿ ಮಾಧ್ಯಮಗಳಿಗೆ ಸೋರಿಕೆಯಾದ ಒಂದು ವಿಸ್ತೃತವಾದ ತನಿಖೆಯಾಗಿದೆ. ಈ ಪ್ರಕರಣವು ತೆರಿಗೆ ವಂಚಿಸಲು ವಿಶ್ವದ ಶ್ರೀಮಂತರು ಮತ್ತು ಪ್ರಭಾವಿಗಳು ವಿದೇಶಗಳಲ್ಲಿ ಖಾತೆಗಳನ್ನು ಓಪನ್ ಮಾಡಿದ್ದಾರೆ ಇಲ್ಲವೇ ಶೆಲ್ ಕಂಪನಿಗಳನ್ನು ಸ್ಥಾಪಿಸಿದ್ದಾರೆ ಎಂಬ ಆರೋಪಗಳನ್ನು ಒಳಗೊಂಡಿದೆ.
ವಿಶ್ವಾದ್ಯಂತ ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಮತ್ತು ಸೆಲೆಬ್ರಿಟಿಗಳ ಸೋರಿಕೆಯಾದ ಹಣಕಾಸು ದಾಖಲೆಗಳನ್ನು ಇಂಟರ್ನ್ಯಾಷನಲ್ ಕನ್ಸೋರ್ಟಿಯಂ ಆಫ್ ಇನ್ವೆಸ್ಟಿಗೇಟಿವ್ ಜರ್ನಲಿಸ್ಟ್ಸ್ ಪರಿಶೀಲಿಸಿ ಪ್ರಕಟಿಸಿತ್ತು.
ಪನಾಮಾ ಪೇಪರ್ಸ್ನಲ್ಲಿ ಉಲ್ಲೇಖವಾಗಿರುವ ವ್ಯಕ್ತಿಗಳ ಪೈಕಿ 300 ಭಾರತೀಯರು.
ಇದನ್ನೂ ಓದಿ: ದೀಪಿಕಾ ಪಡುಕೋಣೆ ವಿಡಿಯೋ ಕಾಲ್ನಲ್ಲಿ ಕನ್ನಡದಲ್ಲಿ ಮಾತನಾಡಿದ್ದು ಯಾರ ಜತೆಗೆ?