ಈಗ ಹೇಗೆ ಕೈಬಿಡುತ್ತೀರಿ?.. ರೋಹಿತ್, ಕೊಹ್ಲಿ ಫ್ಯಾನ್ಸ್ ಪ್ರಶ್ನೆಗೆ ತಬ್ಬಿಬ್ಬಾದ ಅಜಿತ್ ಅಗರ್ಕರ್; ವಿಡಿಯೋ
Ajit Agarkar trolling: ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್-ವಿರಾಟ್ ಅಭಿಮಾನಿಗಳು ಅಜಿತ್ ಅಗರ್ಕರ್ ಅವರನ್ನು ಅಪಹಾಸ್ಯ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ. ಆಸ್ಟ್ರೇಲಿಯಾದಲ್ಲಿ ರೋಹಿತ್ ಉತ್ತಮ ಪ್ರದರ್ಶನದ ಬಳಿಕ, '2027 ವಿಶ್ವಕಪ್‌ಗೆ ಅವರನ್ನು ಹೇಗೆ ಕೈಬಿಡುತ್ತೀರಿ?' ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ರೋಹಿತ್ ನಾಯಕತ್ವ ತೆಗೆದ ನಿರ್ಧಾರ ಮತ್ತು 2027 ವಿಶ್ವಕಪ್ ಕುರಿತ ಅಗರ್ಕರ್ ಅವರ ಅಸ್ಪಷ್ಟ ಹೇಳಿಕೆಗಳು ಈ ಕೋಪಕ್ಕೆ ಕಾರಣ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 2027 ರ ಏಕದಿನ ವಿಶ್ವಕಪ್ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇತ್ತ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ಇವರಿಬ್ಬರು ವಿಶ್ವಕಪ್ ಆಡುವ ಬಗ್ಗೆ ಇನ್ನು ತೀರ್ಮಾನಿಸಲಾಗಿಲ್ಲ ಎಂದಿದ್ದರು. ಹೀಗಾಗಿ ರೋಹಿತ್ ಹಾಗೂ ಕೊಹ್ಲಿಗೆ ಆಸ್ಟ್ರೇಲಿಯಾ ಪ್ರವಾಸವೇ ಕೊನೆಯ ಸರಣಿ ಎನ್ನಲಾಗುತ್ತಿತ್ತು. ಆದರೆ ಈ ಪ್ರವಾಸದಲ್ಲಿ ಕೊಹ್ಲಿ ಮೊದಲೆರಡು ಪಂದ್ಯಗಳಲ್ಲಿ ವಿಫಲರಾದರೂ ಎಂಬುದನ್ನು ಹೊರತುಪಡಿಸಿ ಕೊನೆಯ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. ಇತ್ತ ರೋಹಿತ್ ಶರ್ಮಾ ಮೊದಲ ಪಂದ್ಯವನ್ನು ಬಿಟ್ಟರೆ ಉಳಿದೆರಡು ಪಂದ್ಯಗಳಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಹೀಗಾಗಿ ಅವರನ್ನು ತಂಡದಿಂದ ಹೊರಗಿಡಲು ನೋಡುತ್ತಿದ್ದ ಬಿಸಿಸಿಐ ಆಡಳಿತ ಮಂಡಳಿಗೆ ಹೊಸ ತಲೆನೋವು ಶುರುವಾಗಿದೆ.
ಅಪಹಾಸ್ಯಕ್ಕೀಡಾದ ಅಗರ್ಕರ್
ವಯಸ್ಸು ಹಾಗೂ ಫಾರ್ಮ್ ಅನ್ನು ಗಮನದಲ್ಲಿಟ್ಟುಕೊಂಡು ರೋಹಿತ್ ಮತ್ತು ಕೊಹ್ಲಿಯನ್ನು ಏಕದಿನ ತಂಡದಿಂದಲೂ ಕೈಬಿಡಲು ಬಿಸಿಸಿಐ ಚಿಂತಿಸುತ್ತಿದೆ ಎಂದು ಹೇಳಲಾಗುತ್ತಿದೆ. ಇದೆಲ್ಲದರ ನಡುವೆ ಇವರಿಬ್ಬರು ಅದ್ಭುತ ಫಾರ್ಮ್ನಲ್ಲಿರುವುದು ಬಿಸಿಸಿಐಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದಕ್ಕೆ ಪೂರಕವಾಗಿ ತಂಡದ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರನ್ನು ರೋಹಿತ್ ಹಾಗೂ ವಿರಾಟ್ ಅಭಿಮಾನಿಗಳು ಸಾರ್ವಜನಿಕವಾಗಿಯೇ ಹೀಯಾಳಿಸಿದ್ದು, ಆಸ್ಟ್ರೇಲಿಯಾದಲ್ಲಿ ರನ್ಗಳಿಸಿರುವ ಇವರಿಬ್ಬರನ್ನು ಈಗ ಹೇಗೆ ತಂಡದಿಂದ ಹೊರಗಿಡುತ್ತೀರಿ ಎಂಬ ಪ್ರಶ್ನೆ ಕೇಳಿದ್ದಾರೆ. ಅಭಿಮಾನಿಗಳ ಈ ಪ್ರಶ್ನೆಗೆ ಉತ್ತರಿಸಿಲಾಗದೆ ಅಜಿತ್ ಅಗರ್ಕರ್ ತಮ್ಮ ಕಾರು ಹತ್ತಿ ಪಲಾಯನ ಮಾಡಿದ್ದಾರೆ. ಇದೀಗ ಅದರ ವಿಡಿಯೋ ವೈರಲ್ ಆಗುತ್ತಿದೆ.
ನೀವು ಹೇಗೆ ತಡೆಯುತ್ತೀರಿ?
ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ಮತ್ತು ವಿರಾಟ್ ಅಭಿಮಾನಿಗಳು ಅಜಿತ್ ಅಗರ್ಕರ್ ಅವರನ್ನು ಗುರಿಯಾಗಿಸಿಕೊಂಡು ಅಪಹಾಸ್ಯ ಮಾಡುತ್ತಿರುವ ವಿಡಿಯೋವೊಂದು ವೇಗವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಅಭಿಮಾನಿಗಳು, ‘ಅಗರ್ಕರ್ ಭಾಯ್, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ರನ್ ಗಳಿಸಿದ್ದಾರೆ, ಈಗ ಅವರನ್ನು ಹೇಗೆ ತಂಡದಿಂದ ಹೊರಹಾಕುತ್ತೀರಿ? 2027 ರ ವಿಶ್ವಕಪ್‌ನಲ್ಲಿ ಅವರನ್ನು ಆಡದಂತೆ ನೀವು ಹೇಗೆ ತಡೆಯುತ್ತೀರಿ?’ ಎಂಬ ಪ್ರಶ್ನೆಗಳನ್ನು ಕೇಳುತ್ತಿರುವುದನ್ನು ಕಾಣಬಹುದು. ಆದಾಗ್ಯೂ ಅಗರ್ಕರ್, ಈ ಯಾವ ಪ್ರಶ್ನೆಗೂ ಉತ್ತರಿಸದೆ ಅಲ್ಲಿಂದ ಹೊರಟು ಹೋಗಿದ್ದಾರೆ.
ಅಜಿತ್ ಅಗರ್ಕರ್ ಅವರನ್ನು ಅಭಿಮಾನಿಗಳು ಈ ರೀತಿ ಅಪಹಾಸ್ಯ ಮಾಡಲು ಕಾರಣ ಆಸ್ಟ್ರೇಲಿಯಾದಲ್ಲಿ ರೋಹಿತ್ ಶರ್ಮಾ ಅವರ ಅದ್ಭುತ ಪ್ರದರ್ಶನ ಮಾತ್ರವಲ್ಲ, ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಅಗರ್ಕರ್ ಅವರ ನಿರ್ಧಾರಗಳು ಮತ್ತು ಹೇಳಿಕೆಗಳು. ರೋಹಿತ್ ಶರ್ಮಾ ಅವರನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕುವ ನಿರ್ಧಾರದಿಂದ ಅಭಿಮಾನಿಗಳು ಕೋಪಗೊಂಡಿದ್ದರು ಮಾತ್ರವಲ್ಲದೆ, 2027 ರ ವಿಶ್ವಕಪ್ ಬಗ್ಗೆ ಅಜಿತ್ ಅಗರ್ಕರ್ ಅವರ ಅಸ್ಪಷ್ಟ ಪ್ರತಿಕ್ರಿಯೆಯೂ ಸಹ ಆಗಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ