Karnataka Assembly session; ಎಲ್ಲ ಮುಖ್ಯಮಂತ್ರಿಗಳು ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದಾರೆ: ಯತ್ನಾಳ್

Updated on: Aug 20, 2025 | 6:52 PM

ಬಸನಗೌಡ ಯತ್ನಾಳ್ ಎದ್ದುನಿಂತಾಗ ಕಾಂಗ್ರೆಸ್ ಶಾಸಕರು ಉಚ್ಚಾಟಿತ ಶಾಸಕ ಎಂದು ಛೇಡಿಸಲಾರಂಭಿಸಿದರು. ಅವರ ಅಪಹಾಸ್ಯದ ನುಡಿಗಳಿಂದ ಧೃತಿಗೆಡದ ಯತ್ನಾಳ್, ಎಲ್ಲರೂ ಉಚ್ಚಾಟಿತರೇ, ಈ ದೇಶದಲ್ಲಿ ಪ್ರಧಾನ ಮಂತ್ರಿಯಾದವರೂ ಕೂಡ ಉಚ್ಚಾಟಿತರಾಗಿರುವ ಉದಾಹರಣೆ ಇದೆ. ಆದರೆ ಉಚ್ಚಾಟನೆಯಿಂದ ನೇರನುಡಿಯ, ವಾಲ್ಮೀಕಿ ಸಮುದಾಯದ ಹಿರಿಯ ಕಾಂಗ್ರೆಸ್ ನಾಯಕ ರಾಜಣ್ಣ ಅವರಿಗೆ ಆಗಿರುವಷ್ಟು ಅಪಮಾನ ತನಗೇನೂ ಆಗಿಲ್ಲ ಎಂದು ಯತ್ನಾಳ್ ಹೇಳಿದರು.

ಬೆಂಗಳೂರು, ಆಗಸ್ಟ್ 20: ವಿಧಾನ ಸಭೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತಾಡಲು ಎದ್ದುನಿಂತರೆ ಗಲಾಟೆ, ಗದ್ದಲ ಸಹಜವೇ. ಅನುದಾನ ಮತ್ತು ರಾಜ್ಯದ ಅಭಿವೃದ್ಧಿ ಬಗ್ಗೆ ಮಾತಾಡಲು ಎದ್ದುನಿಂತ ಅವರು, ಅನುದಾನ ಹಂಚಿಕೆಯ ವಿಷಯದಲ್ಲಿ ಎಲ್ಲ ಸರ್ಕಾರಗಳು ತಾರತಮ್ಯ ಧೋರಣೆಯನ್ನು ಅನುಸರಿಸಿವೆ, ಯಾವ ಮುಖ್ಯಮಂತ್ರಿಯೂ ಅನುದಾನವನ್ನು ಸಮಾನವಾಗಿ ಹಂಚಿದ ಉದಾಹರಣೆ ಇಲ್ಲ, ಎಂದು ಹೇಳಿದಾಗ ಕಾಂಗ್ರೆಸ್ ಶಾಸಕರು (Congress MLAs) ಅವರ ಮಾತನ್ನು ಮೇಜು ಕುಟ್ಟಿ ಸ್ವಾಗತಿಸಿದರು. ಆದರೆ, ಬಿಜೆಪಿಯವರು ಮಾಡಿದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್​ನವರೂ ಮಾಡಿದ್ದರೆ ಅವರ ನಿಲುವು ಸರಿಯಲ್ಲ ಎಂದು ಯತ್ನಾಳ್ ಹೇಳಿದರು. ಮುಂದುವರಿದು ಮಾತಾಡಿದ ಅವರು, ಉತ್ತರ ಕರ್ನಾಟಕ ಭಾಗಕ್ಕೆ ಕೃಷ್ಣಾ ನದಿ ನೀರಾವರಿ ಯೋಜನೆಗಳು ಬಹಳ ಮುಖ್ಯ, ಆ ಭಾಗದ ಜನ ದಕ್ಷಿಣ ಕರ್ನಾಟಕದ ಜನರ ಹಾಗೆ ನೆಮ್ಮದಿಯಿಂದ ಸ್ವಾವಲಂಬಿಗಳಾಗಿ ಬದುಕು ನಡೆಸಬೇಕಾದರೆ ನೀರಾವರಿ ಯೋಜನೆಗಳು ಅನುಷ್ಠಾನಗೊಳ್ಳಬೇಕಿರುವುದು ಬಹಳ ಮುಖ್ಯ ಎಂದು ಹೇಳಿದರು.

ಇದನ್ನೂ ಓದಿ:  Karnataka Assembly session; ಧಾರ್ಮಿಕ ಆಚರಣೆಗಳಲ್ಲಿ ಧ್ವನಿವರ್ಧಕಗಳ ಬಳಕೆ, ಸದನದಲ್ಲಿ ಜೋರು ಚರ್ಚೆ 

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ