VIDEO: ಫೈನಲ್ ಪಂದ್ಯದ ಚಿತ್ರಣ ಬದಲಿಸಿದ ಆ ಒಂದು ಕ್ಯಾಚ್..!

Updated on: Nov 03, 2025 | 6:55 AM

amanjot kaur catch: ಈ ಒಂದು ಕ್ಯಾಚ್​ನಿಂದ ಇಡೀ ಪಂದ್ಯದ ಚಿತ್ರಣ ಬದಲಾಯಿತು. ಏಕೆಂದರೆ ಲಾರಾ ವೋಲ್ವಾರ್ಡ್ (101) ವಿಕೆಟ್ ಪತನದೊಂದಿಗೆ ಒತ್ತಡಕ್ಕೆ ಸಿಲುಕಿದ ಸೌತ್ ಆಫ್ರಿಕಾ ತಂಡವು 45.3 ಓವರ್​ಗಳಲ್ಲಿ 246 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ 52 ರನ್​ಗಳ ಜಯದೊಂದಿಗೆ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತು.

ಮಹಿಳಾ ಏಕದಿನ ವಿಶ್ವಕಪ್​ನಲ್ಲಿ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಟಾಸ್ ಗೆದ್ದ ಸೌತ್ ಆಫ್ರಿಕಾ ಟೀಮ್ ಇಂಡಿಯಾವನ್ನು ಬ್ಯಾಟಿಂಗ್​​ಗೆ ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು 50 ಓವರ್​ಗಳಲ್ಲಿ 7 ವಿಕೆಟ್​ ಕಳೆದುಕೊಂಡು 298 ರನ್ ಕಲೆಹಾಕಿತು.

ಈ ಗುರಿಯನ್ನು ಬೆನ್ನತ್ತಿದ ಸೌತ್ ಆಫ್ರಿಕಾ ತಂಡಕ್ಕೆ ನಾಯಕಿ ಲಾರಾ ವೋಲ್ವಾರ್ಡ್ ಭರ್ಜರಿ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಲಾರಾ 98 ಎಸೆತಗಳಲ್ಲಿ ಶತಕ ಪೂರೈಸಿದರು. ಪರಿಣಾಮ 39 ಓವರ್​ಗಳ ಮುಕ್ತಾಯದ ವೇಳೆಗೆ ಸೌತ್ ಆಫ್ರಿಕಾ ತಂಡದ ಸ್ಕೋರ್ 200ರ ಗಡಿದಾಟಿತು.

ಅತ್ತ ಕ್ರೀಸ್​ನಲ್ಲಿ ಲಾರಾ ವೋಲ್ವಾರ್ಡ್ ಇದ್ದ ಕಾರಣ ಸೌತ್ ಆಫ್ರಿಕಾ ತಂಡ ಗೆಲುವು ಬಹುತೇಕ ಖಚಿತ ಎನ್ನಲಾಗಿತ್ತು. ಆದರೆ ದೀಪ್ತಿ ಶರ್ಮಾ ಎಸೆದ 42ನೇ ಓವರ್​ನ ಮೊದಲ ಎಸೆತದಲ್ಲಿ ಲಾರಾ ವೋಲ್ವಾರ್ಡ್ ಡೀಪ್ ಮಿಡ್ ವಿಕೆಟ್​ನತ್ತ ಭರ್ಜರಿಯಾಗಿ ಬಾರಿಸಿದರು. ಅತ್ತ ಕಡೆ ಬೌಂಡರಿ ಲೈನ್​​ನಲ್ಲಿ ಫೀಲ್ಡಿಂಗ್​ನಲ್ಲಿದ್ದ ಅಮನ್​ಜೋತ್ ಕೌರ್ ಓಡಿ ಬಂದು ಚೆಂಡನ್ನು ಹಿಡಿಯುವ ಪ್ರಯತ್ನ ಮಾಡಿದ್ದರು.

ಆದರೆ ಚೆಂಡು ಅಮನ್​ಜೋತ್ ಕೌರ್​ ಕೈಯಿಂದ ಜಾರಿತು. ತಕ್ಷಣವೇ ಎರಡನೇ ಬಾರಿ ಹಿಡಿಯುವ ಪ್ರಯತ್ನ ಮಾಡಿದರು. ಈ ವೇಳೆಯೂ ಚೆಂಡನ್ನು ಬಂಧಿಸಲು ಸಾಧ್ಯವಾಗಿರಲಿಲ್ಲ. ಇನ್ನೇನು ಬಾಲ್ ನೆಲಕ್ಕುರಳಲಿದೆ ಅನ್ನುವಷ್ಟರಲ್ಲಿ ಅಮನ್​ಜೋತ್ ಒಂದೇ ಕೈಯಲ್ಲಿ ಚೆಂಡನ್ನು ಹಿಡಿದರು.

ಈ ಒಂದು ಕ್ಯಾಚ್​ನಿಂದ ಇಡೀ ಪಂದ್ಯದ ಚಿತ್ರಣ ಬದಲಾಯಿತು. ಏಕೆಂದರೆ ಲಾರಾ ವೋಲ್ವಾರ್ಡ್ (101) ವಿಕೆಟ್ ಪತನದೊಂದಿಗೆ ಒತ್ತಡಕ್ಕೆ ಸಿಲುಕಿದ ಸೌತ್ ಆಫ್ರಿಕಾ ತಂಡವು 45.3 ಓವರ್​ಗಳಲ್ಲಿ 246 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ 52 ರನ್​ಗಳ ಜಯದೊಂದಿಗೆ ಟೀಮ್ ಇಂಡಿಯಾ ಚಾಂಪಿಯನ್ ಪಟ್ಟ ಅಲಂಕರಿಸಿತು.