ಅನ್ನಭಾಗ್ಯ ಯೋಜನೆ: ಬಡವರಿಗೆ ಸೇರಬೇಕಾದ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ -ವೈರಲ್ ವಿಡಿಯೋ ಇಲ್ಲಿದೆ
ಮೂವರು ಅಪ್ರಾಪ್ತರು ಕೇರಳ ನೋಂದಣಿಯ ಆಟೋದಲ್ಲಿ ಮೈಸೂರಿನ ಹೆಬ್ಬಾಳ ಬಡಾವಣೆಯಲ್ಲಿ ಈ ಅಕ್ಕಿ ಖರೀದಿ ಮಾಡಿ ಉದಯಗಿರಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನು ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಆಟೋ ನಕಲಿ ಅನ್ನೋ ವಿಚಾರ ಗೊತ್ತಾಗಿದೆ.
ಅನ್ನಭಾಗ್ಯ ಬಡವರ ಪಾಲಿನ ಮಹತ್ವಾಕಾಂಕ್ಷೆಯ ಯೋಜನೆ. ಬಡವರಿಗೆ ಸೇರಬೇಕಾದ ಅಕ್ಕಿ ರಾಜ್ಯದಾದ್ಯಂತ ಕಾಳಸಂತೆಯಲ್ಲಿ ಮಾರಾಟ ಮಾಡುವ ಜಾಲ ಕೆಲಸ ಮಾಡುತ್ತಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ (Siddaramaiah) ತವರು ಜಿಲ್ಲೆ ಮೈಸೂರಿನಲ್ಲಿ (Mysore) ಮಕ್ಕಳ ಮೂಲಕ ಅನ್ನಭಾಗ್ಯಕ್ಕೆ (Anna bhagya) ಕನ್ನ ಹಾಕಲಾಗುತ್ತಿದೆ. ಎಸ್ ಇವರೆಲ್ಲಾ ಅಪ್ರಾಪ್ತರು (Children). ಶಾಲೆಗೆ ಹೋಗಬೇಕಾದ ಇವರೆಲ್ಲಾ ಮೈಸೂರಿನಲ್ಲಿ ಕಾಳಸಂತೆಯಲ್ಲಿ ಅಕ್ಕಿ ಖರೀದಿ ಮಾಡಿ ಮಾರಾಟ ಮಾಡುವ ದಂಧೆಯ (Black Market) ಭಾಗವಾಗಿದ್ದಾರೆ. ಹೌದು ಇದನ್ನು ಮೈಸೂರಿನ ಸಾಮಾಜಿಕ ಕಾರ್ಯಕರ್ತರೊಬ್ಬರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಮಾಡಿದ್ದಾರೆ. ಈ ಘಟನೆ ಮೈಸೂರಿನ ಗ್ರಾಮಾಂತರ ಬಸ್ ನಿಲ್ದಾಣದ ಬಳಿ ನಡೆದಿದೆ. ವಿಡಿಯೋದಲ್ಲಿ ಮಕ್ಕಳು ಕಾಳಸಂತೆಯಲ್ಲಿ ಅಕ್ಕಿ ಖರೀದಿ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಟಿವಿ9 ಪೊಲೀಸ್ ಕಮಿಷನರ್ ರಮೇಶ್ ಬಾನೋತ್, ಜಿಲ್ಲಾಧಿಕಾರಿ ಡಾ ಕೆ ವಿ ರಾಜೇಂದ್ರ ಪುಡ್ ಡಿಡಿ ಕುಮುದಾ ಅವರ ಗಮನಕ್ಕೆ ತಂದಿದೆ.
ಹೌದು ಮೂವರು ಅಪ್ರಾಪ್ತರು ಕೇರಳ ನೋಂದಣಿಯ ಆಟೋದಲ್ಲಿ ಮೈಸೂರಿನ ಹೆಬ್ಬಾಳ ಬಡಾವಣೆಯಲ್ಲಿ ಈ ಅಕ್ಕಿ ಖರೀದಿ ಮಾಡಿ ಉದಯಗಿರಿಗೆ ತೆಗೆದುಕೊಂಡು ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಇನ್ನು ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ ಆಟೋ ನಕಲಿ ಅನ್ನೋ ವಿಚಾರ ಗೊತ್ತಾಗಿದೆ. ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಒಟ್ಟಾರೆ ಅನ್ನಭಾಗ್ಯಕ್ಕೆ ಕನ್ನ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದ್ದು ಅದರಲ್ಲೂ ಸಿದ್ದು ತವರು ಜಿಲ್ಲೆಯಲ್ಲಿ ಮಕ್ಕಳನ್ನೇ ಈ ಕರಾಳ ದಂಧೆಗೆ ಬಳಸಿಕೊಳ್ಳುತ್ತಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.
ಮೈಸೂರು ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ