ಎಷ್ಟು ದೊಡ್ಡ ಬಕೆಟ್ ಹಿಡಿತಾರಪ್ಪ! ಪಾಕ್ ಪ್ರಧಾನಿಯ ಟ್ರಂಪ್ ಗುಣಗಾನಕ್ಕೆ ದಂಗಾದ ಮೆಲೋನಿ

Updated on: Oct 14, 2025 | 6:33 PM

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಗುಣಗಾನ ಮಾಡಿದ ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ, ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷರನ್ನು ಹಾಡಿ ಹೊಗಳಿದ್ದಾರೆ. ಆದರೆ, ಪಾಕ್ ಪ್ರಧಾನಿಯ ಅತಿಯಾದ ವಿನಯ, ಅತಿ ಓಲೈಕೆಯೇ ಇದೀಗ ಟ್ರೋಲ್ ಆಗಿದೆ. ಈ ವೇಳೆ ಅಲ್ಲೇ ಹಿಂದೆ ನಿಂತಿದ್ದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯ ಮುಖಭಾವ ವೈರಲ್ ಆಗಿದೆ. ಪಾಕ್ ಪ್ರಧಾನಿಯ ಮಾತುಗಳನ್ನು ಬಾಯಿ ಮೇಲೆ ಬೆರಳಿಟ್ಟುಕೊಂಡು ಕೇಳುತ್ತಿದ್ದ ಮೆಲೋನಿ ಈ ವಿಡಿಯೋದ ಕೇಂದ್ರಬಿಂದುವಾಗಿದ್ದಾರೆ.

ನವದೆಹಲಿ, ಅಕ್ಟೋಬರ್ 14: ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಭಾರೀ ವೈರಲ್ ಆಗಿದ್ದಾರೆ. ಆದರೆ, ಈ ಬಾರಿ ಅವರು ವೈರಲ್ ಆಗಲು ಕಾರಣ ಅಮೆರಿಕ ಅಧ್ಯಕ್ಷ ಟ್ರಂಪ್ (Donald Trump) ಮತ್ತು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್. ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನವಿರಾಮದ ಬಳಿಕ ಶರ್ಮ್ ಎಲ್-ಶೇಖ್ ಶೃಂಗಸಭೆಯಲ್ಲಿ ಜಾಗತಿಕ ನಾಯಕರು ಸೇರಿದ್ದರು. ಈ ವೇಳೆ ಮಾತನಾಡಲು ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರಿಗೆ ಮೈಕ್ ನೀಡಿದರು. ಸಿಕ್ಕಿದ್ದೇ ಚಾನ್ಸ್ ಎಂಬಂತೆ ಪಾಕ್ ಪ್ರಧಾನಿ ಟ್ರಂಪ್ ಅವರನ್ನು ಹೊಗಳಿ ಹೊಗಳಿ ಅಟ್ಟಕ್ಕೇರಿಸಿದರು. ಶೆಹಬಾಜ್ ಅವರ ಹಿಂದೆಯೇ ನಿಂತಿದ್ದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಇದನ್ನೆಲ್ಲ ಬಿಟ್ಟ ಕಣ್ಣು ಮುಚ್ಚದಂತೆ, ಬಾಯಿ ಮೇಲೆ ಕೈ ಇಟ್ಟುಕೊಂಡು ಅಚ್ಚರಿಯಿಂದ ಕೇಳಿಸಿಕೊಳ್ಳುತ್ತಿದ್ದರು.

“ಬಕೆಟ್ ಹಿಡಿತಾರೆ ಅಂದ್ಕೊಂಡ್ರೆ ದೊಡ್ಡ ಟ್ಯಾಂಕನ್ನೇ ಹಿಡಿತಿದಾರಲ್ಲಪ್ಪ!” ಎಂದು ಮೆಲೋನಿ ಅಂದುಕೊಳ್ಳುತ್ತಿರಬಹುದು ಎಂದು ನೆಟ್ಟಿಗರು ಈ ವಿಡಿಯೋವನ್ನು ಟ್ರೋಲ್ ಮಾಡುತ್ತಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸುವಲ್ಲಿ ತಮ್ಮ ಅತ್ಯುತ್ತಮ ಕೊಡುಗೆಗಳನ್ನು ನೀಡಿದ ಅಮೆರಿಕ ಅಧ್ಯಕ್ಷ ಟ್ರಂಪ್ ಇದುವರೆಗೂ 8 ಯುದ್ಧಗಳನ್ನು ನಿಲ್ಲಿಸಿದ್ದಾರೆ. ವೀರ, ಧೀರ, ಶಾಂತಿಧೂತನಾದ ಟ್ರಂಪ್ ಅವರಿಗೆ ಮುಂದಿನ ವರ್ಷದ ನೊಬೆಲ್ ಶಾಂತಿ ಪ್ರಶಸ್ತಿ ಸಿಗಲೇಬೇಕು ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಟ್ರಂಪ್ ಗುಣಗಾನ ಮಾಡಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ