ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳು, ಸಂಕ್ರಾಂತಿ ಹಬ್ಬದ ಸಂತೆ ಮಾಡಲೂ ಹೊರಬಾರದ ಧಾರವಾಡ ಜನತೆ!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 14, 2022 | 7:19 PM

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಒಂದೇ ಸಮನೆ ಹೆಚ್ಚುತ್ತಿವೆ. ಧಾರವಾಡದಲ್ಲಿ ಗುರುವಾರ ಸುಮಾರು 400 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ರಾಜ್ಯದ ಸ್ಥಿತಿಯನ್ನು ಗಮನಿಸುತ್ತಿರುವ ಧಾರವಾಡ ಜನ ಎಚ್ಚೆತ್ತುಕೊಂಡಿದ್ದಾರೆ. ಇದೇ ವಿವೇಚನೆ ರಾಜ್ಯದ ಬೇರೆ ಜಿಲ್ಲೆಗಳ ಜನರೂ ಬೆಳೆಸಿಕೊಳ್ಳಬೇಕಿದೆ.

ಮೊನ್ನೆಯಷ್ಟೇ ನಾವು ಧಾರವಾಡದ (Dharwad) ಎಪಿಎಮ್​ಸಿ ಮಾರ್ಕೆಟ್ (APMC Yard) ನಲ್ಲಿ ಜನ ಮಾಸ್ಕ್ ಧರಿಸದೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜಾತ್ರೆಯಂತೆ ನೆರೆದಿದ್ದ ವಿಡಿಯೋವನ್ನು ತೋರಿಸಿದೆವು. ಆದರೆ ಅದಕ್ಕೆ ತದ್ವಿರುದ್ಧವಾದ ವಿಡಿಯೋವೊಂದನ್ನು ಧಾರವಾಡದ ಟಿವಿ9 ವರದಿಗಾರ ನರಸಿಂಹಮೂರ್ತಿ ಪ್ಯಾಟಿ ಕಳಿಸಿದ್ದಾರೆ. ಇವತ್ತು (ಶುಕ್ರವಾರ) ಮಕರ ಸಂಕ್ರಾಂತಿ ಹಬ್ಬ, (Makara Sankranti) ರಾಜ್ಯದ ಕೆಲವು ಭಾಗಗಳಲ್ಲಿ ನಾಳೆ ಆಚರಿಸಲಾಗುತ್ತದೆ. ಓಕೆ ವಿಷಯ ಅದಲ್ಲ, ವಾರಾಂತ್ಯದ ಕರ್ಫ್ಯೂ ಶುಕ್ರವಾರ ರಾತ್ರಿಯಿಂದ ಆರಂಭವಾಗುತ್ತದೆ. ಆದರೆ, ಧಾರವಾಡದ ಜನ ಶುಕ್ರವಾರ ಬೆಳಗ್ಗೆಯಿಂದಲೇ ಮನೆ ಸೇರಿಕೊಂಡು ಬಿಟ್ಟಿದ್ದಾರೆ. ನಾವು ಹೇಳುತ್ತಿರೋದು ಈ ವಿಡಿಯೋ ನೋಡಿದರೆ ಗೊತ್ತಾಗುತ್ತದೆ. ನಿಮಗಿಲ್ಲಿ ಕಾಣುತ್ತಿರೋದು ಧಾರವಾಡ ನಗರದ ಅತ್ಯಂತ ಬ್ಯುಸಿ ಮಾರ್ಕೆಟ್ ಪ್ರದೇಶವೆನಿಸಿಕೊಂಡಿರುವ ನೆಹರೂ ಮಾರ್ಕೆಟ್. ಹಬ್ಬದ ಪ್ರಯುಕ್ತ ಜನ ಖರೀದಿಗೆ ಇಲ್ಲಿ ಬರಬೇಕಿತ್ತು. ಆದರೆ, ಸ್ಥಿತಿ ನೋಡಿ ಹೇಗಿದೆ…

ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ನಮಗೆ ಕಾಣುತ್ತಾರೆ. ಹಲವಾರು ಅಂಗಡಿ ಮುಂಗಟ್ಟುಗಳು ಅದಾಗಲೇ ಮುಚ್ಚಿಬಿಟ್ಟಿವೆ. ಕೇವಲ ಒಂದಿಬ್ಬರು ಹೂವು ಮಾರುವ ವ್ಯಾಪಾರಿಗಳು ನಿಮಗೆ ಕಾಣಿಸುತ್ತಾರೆ. ಅದರರ್ಥ ಶುಕ್ರವಾರ ಹೊರಗೆ ಬರೋದಿಕ್ಕೆ ಅವಕಾಶವಿದ್ದರೂ ಜನ ಮನೆಗಳಲ್ಲೇ ಉಳಿದು ಬಿಟ್ಟಿದ್ದಾರೆ. ಹಬ್ಬದ ಸಂತೆ ಮಾಡಲು ಸಹ ಅವರು ಹಿಂಜರಿಯುತ್ತಿದ್ದಾರೆ ಅನ್ನೋದು ವೇದ್ಯವಾಗುತ್ತದೆ.

ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಒಂದೇ ಸಮನೆ ಹೆಚ್ಚುತ್ತಿವೆ. ಧಾರವಾಡದಲ್ಲಿ ಗುರುವಾರ ಸುಮಾರು 400 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ರಾಜ್ಯದ ಸ್ಥಿತಿಯನ್ನು ಗಮನಿಸುತ್ತಿರುವ ಧಾರವಾಡ ಜನ ಎಚ್ಚೆತ್ತುಕೊಂಡಿದ್ದಾರೆ. ಇದೇ ವಿವೇಚನೆ ರಾಜ್ಯದ ಬೇರೆ ಜಿಲ್ಲೆಗಳ ಜನರೂ ಬೆಳೆಸಿಕೊಳ್ಳಬೇಕಿದೆ.

ಇದನ್ನೂ ಓದಿ:  ಆಸ್ಪತ್ರೆಯಿಂದ ಬಿಡುಗಡೆಯಾದ ಬಚ್​ ಪನ್​ ಕಾ ಪ್ಯಾರ್​ ಖ್ಯಾತಿಯ ಸಹದೇವ್​: ವಿಡಿಯೋ ನೋಡಿ ಪ್ರತಿಕ್ರಿಯಿಸಿದ ರಾಪರ್​ ಬಾದ್​​ ಷಾ