ಟಿ20 ಏಷ್ಯಾಕಪ್‌ನಲ್ಲಿ ಪಾಕ್ ವೇಗಿಯ ದಾಖಲೆ ಮುರಿದ ಸ್ಪಿನ್ನರ್ ಕುಲ್ದೀಪ್ ಯಾದವ್
Kuldeep Yadav's 4-Wicket Haul: ಭಾರತ ತಂಡವು ಯುಎಇ ವಿರುದ್ಧ ಏಷ್ಯಾಕಪ್ 2025ರ ಆರಂಭಿಕ ಪಂದ್ಯದಲ್ಲಿ 9 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಕುಲ್ದೀಪ್ ಯಾದವ್ ಅವರ ಅದ್ಭುತ ಬೌಲಿಂಗ್ ಪ್ರದರ್ಶನ ಇದರಲ್ಲಿ ಹೈಲೈಟ್ ಆಗಿದೆ. ಅವರು 2.1 ಓವರ್‌ಗಳಲ್ಲಿ 4 ವಿಕೆಟ್‌ಗಳನ್ನು ಪಡೆದು ಏಷ್ಯಾಕಪ್‌ನಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ. ಇದಲ್ಲದೆ, ಅವರು ಭಾರತದ ಪರ ತವರಿನ ಹೊರಗೆ ಅತಿ ಹೆಚ್ಚು ಟಿ20 ವಿಕೆಟ್‌ಗಳನ್ನು ಪಡೆದ 2ನೇ ಬೌಲರ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಭಾರತ ತಂಡವು ಯುಎಇಯನ್ನು 9 ವಿಕೆಟ್‌ಗಳಿಂದ ಸೋಲಿಸುವ ಮೂಲಕ 2025 ರ ಏಷ್ಯಾಕಪ್‌ನಲ್ಲಿ ಉತ್ತಮ ಆರಂಭವನ್ನು ಪಡೆದುಕೊಂಡಿದೆ. ಟೀಂ ಇಂಡಿಯಾ ಪರ ಅದ್ಭುತ ಪ್ರದರ್ಶನ ನೀಡಿದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ 2.1 ಓವರ್‌ಗಳಲ್ಲಿ ಏಳು ರನ್ ನೀಡಿ ನಾಲ್ಕು ವಿಕೆಟ್‌ಗಳನ್ನು ಪಡೆದರು. ಕುಲ್ದೀಪ್ ತಮ್ಮ ಒಂದು ಓವರ್‌ನಲ್ಲಿ ಮೂರು ವಿಕೆಟ್‌ಗಳನ್ನು ಪಡೆದಿದ್ದು ಪಂದ್ಯದ ಹೈಲೆಟ್ಸ್ ಆಗಿತ್ತು. ತಮ್ಮ ಈ ಅತ್ಯುತ್ತಮ ಪ್ರದರ್ಶನಕ್ಕಾಗಿ ಪಂದ್ಯಶ್ರೇಷ್ಠರಾಗಿಯೂ ಆಯ್ಕೆಯಾದ ಕುಲ್ದೀಪ್ ಇದರೊಂದಿಗೆ ದೊಡ್ಡ ಸಾಧನೆ ಮಾಡಿದರು.
ಕುಲ್ದೀಪ್ ಯಾದವ್ 13 ಎಸೆತಗಳಲ್ಲಿ ನಾಲ್ಕು ವಿಕೆಟ್‌ಗಳನ್ನು ಕಬಳಿಸಿದರು, ಇದು ಏಷ್ಯಾಕಪ್‌ನಲ್ಲಿ ಹೊಸ ದಾಖಲೆಯಾಗಿದೆ. ಟಿ20 ಏಷ್ಯಾಕಪ್ ಇತಿಹಾಸದಲ್ಲಿ ಎರಡನೇ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಕುಲ್ದೀಪ್ ಈ ಪಂದ್ಯಾವಳಿಯಲ್ಲಿ ನಾಲ್ಕು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಕುಲ್ದೀಪ್ ಯಾದವ್ ಪಾಕಿಸ್ತಾನದ ಶಾದಾಬ್ ಖಾನ್ ಅವರ ದಾಖಲೆಯನ್ನು ಮುರಿದರು. 2022 ರ ಏಷ್ಯಾಕಪ್‌ನಲ್ಲಿ ಹಾಂಗ್ ಕಾಂಗ್ ವಿರುದ್ಧದ ಪಂದ್ಯದಲ್ಲಿ ಶಾದಾಬ್ 17 ಎಸೆತಗಳಲ್ಲಿ 4 ವಿಕೆಟ್‌ಗಳನ್ನು ಕಬಳಿಸಿದ್ದರು.
ಅದು ಮಾತ್ರವಲ್ಲದೆ ಕುಲ್ದೀಪ್ ಈಗ ಭಾರತದ ಪರ ತವರಿನ ಹೊರಗೆ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಹಿಂದಿಕ್ಕಿದ್ದಾರೆ. ಕುಲ್ದೀಪ್ ಇದುವರೆಗೆ ತವರಿನ ಹೊರಗೆ 25 ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಅವರು 11.15 ರ ಸರಾಸರಿಯಲ್ಲಿ ಒಟ್ಟು 52 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಈ ಹಿಂದೆ ಎರಡನೇ ಸ್ಥಾನದಲ್ಲಿದ್ದ ಅಶ್ವಿನ್ 50 ವಿಕೆಟ್‌ಗಳನ್ನು ಕಬಳಿಸಿದ್ದರು. ಭಾರತದ ಹೊರಗೆ ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಇದುವರೆಗೆ ಒಟ್ಟು 71 ವಿಕೆಟ್‌ಗಳನ್ನು ಕಬಳಿಸುವಲ್ಲಿ ಯಶಸ್ವಿಯಾಗಿರುವ ಅರ್ಶ್ದೀಪ್ ಸಿಂಗ್ ಅವರ ಹೆಸರು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.

