ಚೊಚ್ಚಲ ಪಂದ್ಯ… ಅರ್ಧದಲ್ಲೇ ಬ್ಯಾಟಿಂಗ್ ನಿಲ್ಲಿಸಿ ವಾಪಸ್ ಕರೆಸಿದ ಕೋಚ್..!
Ayushi Soni ‘retired out’: ಮೊದಲ 10 ಓವರ್ಗಳಲ್ಲಿ 99 ರನ್ಗಳಿಸಿದ್ದ ಗುಜರಾತ್ ಜೈಂಟ್ಸ್ ಆ ಬಳಿಕ 6 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 37 ರನ್ಗಳು. ಇದರಲ್ಲಿ ಆಯುಷಿಯ ಕೊಡುಗೆ ಕೇವಲ 11 ರನ್ಗಳು ಮಾತ್ರ. ಹೀಗಾಗಿಯೇ ಗುಜರಾತ್ ಜೈಂಟ್ಸ್ ತಂಡದ ಕೋಚ್ ಆಯುಷಿಯನ್ನು ವಾಪಸ್ ಕರೆಸಿದ್ದಾರೆ.
ವುಮೆನ್ಸ್ ಪ್ರೀಮಿಯರ್ ಲೀಗ್ನ 6ನೇ ಪಂದ್ಯವು ನಾಟಕೀಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್ನಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡಿದ್ದರು.
ಅದರಂತೆ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡವು 4 ವಿಕೆಟ್ ಕಳೆದುಕೊಂಡು 10 ಓವರ್ಗಳಲ್ಲಿ 99 ರನ್ ಕಲೆಹಾಕಿತ್ತು. ಅತ್ತ ಕನಿಕಾ ಅಹುಜಾ ಔಟಾಗುತ್ತಿದ್ದಂತೆ ಆಯುಷಿ ಸೋನಿ ಕ್ರೀಸ್ಗೆ ಆಗಮಿಸಿದರು. ವಿಶೇಷ ಎಂದರೆ ಇದು ಸೋನಿಗೆ ಚೊಚ್ಚಲ ವುಮೆನ್ಸ್ ಪ್ರೀಮಿಯರ್ ಲೀಗ್ ಪಂದ್ಯ.
ಮೊದಲ ಪಂದ್ಯದಲ್ಲೇ ರನ್ಗಳಿಸಲು ಪರದಾಡಿದ ಆಯುಷಿ ಸೋನಿ 14 ಎಸೆತಗಳಲ್ಲಿ ಕಲೆಹಾಕಿದ್ದು ಕೇವಲ 11 ರನ್ಗಳು. ಈ ಹನ್ನೊಂದು ರನ್ಗಳಲ್ಲಿ ಒಂದೇ ಒಂದು ಬೌಂಡರಿ ಇರಲಿಲ್ಲ. ಅಷ್ಟರಲ್ಲಾಗಲೇ 16 ಓವರ್ಗಳು ಮುಗಿದಿದ್ದವು.
ಮೊದಲ 10 ಓವರ್ಗಳಲ್ಲಿ 99 ರನ್ಗಳಿಸಿದ್ದ ಗುಜರಾತ್ ಜೈಂಟ್ಸ್ ಆ ಬಳಿಕ 6 ಓವರ್ಗಳಲ್ಲಿ ಕಲೆಹಾಕಿದ್ದು ಕೇವಲ 37 ರನ್ಗಳು. ಇದರಲ್ಲಿ ಆಯುಷಿಯ ಕೊಡುಗೆ ಕೇವಲ 11 ರನ್ಗಳು ಮಾತ್ರ. ಹೀಗಾಗಿಯೇ ಗುಜರಾತ್ ಜೈಂಟ್ಸ್ ತಂಡದ ಕೋಚ್ ಆಯುಷಿಯನ್ನು ವಾಪಸ್ ಕರೆಸಿದ್ದಾರೆ.
ಇದರೊಂದಿಗೆ ಆಯುಷಿ ಸೋನಿ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ರಿಟೈರ್ಡ್ ಔಟ್ ಆದ ಮೊದಲ ಆಟಗಾರ್ತಿ ಎನಿಸಿಕೊಂಡಿದ್ದಾರೆ.
ಇನ್ನು ಆಯುಷಿ ಸೋನಿ ಬದಲಿಗೆ ಕ್ರೀಸ್ಗೆ ಆಗಮಿಸಿದ ಭಾರ್ತಿ ಫಲ್ಮಾಲಿ 15 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 3 ಫೋರ್ಗಳೊಂದಿಗೆ ಅಜೇಯ 36 ರನ್ ಬಾರಿಸಿದರು. ಈ ಮೂಲಕ ಗುಜರಾತ್ ಜೈಂಟ್ಸ್ ತಂಡವು 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 192 ರನ್ ಕಲೆಹಾಕಿತು.
ಈ ಗುರಿಯನ್ನು ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡವು 19.2 ಓವರ್ಗಳಲ್ಲಿ 193 ರನ್ಗಳಿಸಿ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

