ಟಿ20 ಯಲ್ಲಿ ಟೆಸ್ಟ್ ಆಡಿ ಅರ್ಧಶತಕ ಬಾರಿಸಿದ ಬಾಬರ್ ಆಝಂ

Updated on: Jan 01, 2026 | 7:31 PM

Babar Azam BBL: ಕಳೆದ ವರ್ಷ ಫಾರ್ಮ್‌ಗಾಗಿ ಹೆಣಗಾಡಿದ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಅಜಮ್, ಹೊಸ ವರ್ಷವನ್ನು ಬಿಬಿಎಲ್‌ನಲ್ಲಿ ಭರ್ಜರಿಯಾಗಿ ಆರಂಭಿಸಿದ್ದಾರೆ. ಸಿಡ್ನಿ ಸಿಕ್ಸರ್ಸ್‌ ಪರ ಮೆಲ್ಬೋರ್ನ್ ರೆನೆಗೇಡ್ಸ್ ವಿರುದ್ಧ ಅಜೇಯ 58 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟಿದ್ದಾರೆ. ಇದು ಪ್ರಸಕ್ತ ಬಿಬಿಎಲ್‌ನಲ್ಲಿ ಬಾಬರ್ ಅವರ ಎರಡನೇ ಅರ್ಧಶತಕವಾಗಿದೆ.

ಕಳೆದ ವರ್ಷವನ್ನು ಫಾರ್ಮ್​ ಕಂಡುಕೊಳ್ಳುವುದರಲ್ಲೇ ಕಳೆದ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಈ ಹೊಸ ವರ್ಷವನ್ನು ಭರ್ಜರಿಯಾಗಿ ಆರಂಭಿಸಿದ್ದಾರೆ. ಪ್ರಸ್ತುತ ಬಿಗ್ ಬ್ಯಾಷ್ ಲೀಗ್​ನಲ್ಲಿ ಆಡುತ್ತಿರುವ ಬಾಬರ್ ಆಝಂ ಅಜೇಯ ಅರ್ಧಶತಕ ಸಿಡಿಸುವುದರೊಂದಿಗೆ ತಂಡಕ್ಕೆ ಗೆಲುವು ಕೂಡ ತಂದುಕೊಟ್ಟಿದ್ದಾರೆ. ಈ ಲೀಗ್​ನಲ್ಲಿ ಸಿಡ್ನಿ ಸಿಕ್ಸರ್ಸ್‌ ತಂಡದ ಪರ ಆಡುತ್ತಿರುವ ಬಾಬರ್ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ವಿರುದ್ಧ ಅರ್ಧಶತಕದ ಇನ್ನಿಂಗ್ಸ್ ಆಡಿದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು 20 ಓವರ್‌ಗಳಲ್ಲಿ 165 ರನ್‌ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಸಿಡ್ನಿ ತಂಡ ಇನ್ನು ಐದು ಎಸೆತಗಳು ಬಾಕಿ ಇರುವಾಗಲೇ ಜಯದ ನಗೆ ಬೀರಿತು. ಸಿಡ್ನಿ ಸಿಕ್ಸರ್ಸ್ ಪರ ಈ ರನ್ ಚೇಸ್‌ನಲ್ಲಿ ಪ್ರಮುಖ ಪಾತ್ರ ವಹಿಸಿದ ಬಾಬರ್ ಆರಂಭದಿಂದ ಅಂತ್ಯದವರೆಗೆ ಒಂದು ತುದಿಯಲ್ಲಿ ನಿಂತು ತಂಡಕ್ಕೆ ಜಯ ತಂದುಕೊಡುವಲ್ಲಿ ಯಶಸ್ವಿಯಾದರು.

ಈ ಪಂದ್ಯದಲ್ಲಿ ಅಜೇಯರಾಗಿ ಉಳಿದ ಬಾಬರ್ ನಿಧಾನಗತಿಯ ಇನ್ನಿಂಗ್ಸ್ ಆಡಿದರಾದರೂ 46 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 58 ರನ್ ಗಳಿಸಿದರು. 41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಬಾಬರ್​ಗೆ ಇದು ಪ್ರಸ್ತುತ ಬಿಗ್ ಬ್ಯಾಷ್ ಲೀಗ್​ನಲ್ಲಿ ಎರಡನೇ ಅರ್ಧಶತಕವಾಗಿದೆ. 2025-26ರ ಬಿಗ್ ಬ್ಯಾಷ್ ಲೀಗ್‌ನಲ್ಲಿ ಇದುವರೆಗೆ 5 ಪಂದ್ಯಗಳನ್ನಾಡಿರುವ ಬಾಬರ್ 128 ರನ್ ಗಳಿಸಿದ್ದಾರೆ. ಎರಡು ಪಂದ್ಯಗಳಲ್ಲಿ ತಲಾ 58 ರನ್‌ಗಳ ಎರಡೂ ಇನ್ನಿಂಗ್ಸ್‌ಗಳನ್ನು ಹೊರತುಪಡಿಸಿದರೆ, ಬಾಬರ್ ಉಳಿದ 3 ಇನ್ನಿಂಗ್ಸ್‌ಗಳಲ್ಲಿ ಕೇವಲ 13 ರನ್ ಗಳಿಸಿದ್ದಾರೆ.