ಬಳ್ಳಾರಿಯಲ್ಲಿ ಗವಿಸಿದ್ದೇಶ್ವರ ಸ್ವಾಮೀಜಿಗೆ ಮುಜುಗರ: ಪ್ರವಚನ ಮಧ್ಯದಲ್ಲೇ ನಿಲ್ಲಿಸಿ ವೇದಿಕೆಯಿಂದ ನಿರ್ಗಮಿಸಿದ ಶ್ರೀಗಳು

Edited By:

Updated on: Aug 11, 2026 | 7:55 PM

ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸಿದ್ಧ ಗವಿಮಠದ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳಿಗೆ ತೀವ್ರ ಮುಜುಗರ ಉಂಟಾಗಿದೆ. ಮೈಕ್ ತೊಂದರೆ ಮತ್ತು ವೇದಿಕೆಯಲ್ಲಿನ ಗದ್ದಲದಿಂದ ಶ್ರೀಗಳು ತಮ್ಮ ಆಶೀರ್ವಚನವನ್ನು ಅರ್ಧಕ್ಕೆ ನಿಲ್ಲಿಸಿ ನಿರ್ಗಮಿಸಿದರು. ರಾಜಕೀಯ ನಾಯಕರ ಆಗಮನದ ವೇಳೆ ಆದ ಹೆಚ್ಚುವರಿ ಗಲಾಟೆಯಿಂದ ಭಕ್ತರಲ್ಲಿ ಆಕ್ರೋಶ ಭುಗಿಲೆದ್ದಿದ್ದು, ವ್ಯವಸ್ಥಾಪಕರ ನಿರ್ಲಕ್ಷ್ಯದ ಬಗ್ಗೆ ಆಕ್ಷೇಪ ವ್ಯಕ್ತವಾಗಿದೆ.

ಬಳ್ಳಾರಿ, ಆ.11: ಕೊಪ್ಪಳದ ಪ್ರಸಿದ್ದ ಶ್ರೀ ಗವಿಮಠದ ಶ್ರೀ ಗವಿದ್ದೇಶ್ವರ ಮಹಾಸ್ವಾಮಿಗಳಿಗೆ ಬಳ್ಳಾರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತೀವ್ರ ಮುಜುಗರ ಉಂಟಾದ ಘಟನೆ ನಡೆದಿದೆ. ವೇದಿಕೆಯಲ್ಲಿ ಉಂಟಾದ ಗದ್ದಲ ಹಾಗೂ ಮೈಕ್ ಕಿರಿಕಿರಿ ಹಿನ್ನೆಲೆಯಲ್ಲಿ ಅಭಿನವ ಗವಿಸಿದ್ದೇಶ್ವರ ಶ್ರೀಗಳು ತಮ್ಮ ಆಶೀರ್ವಚನವನ್ನು ಅರ್ಧಕ್ಕೆ ಮೊಟಕುಗೊಳಿಸಿ ನಿರ್ಗಮಿಸಿರುವುದು ಭಕ್ತರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಬಳ್ಳಾರಿಯಲ್ಲಿ ವೀರಶೈವ ವಿದ್ಯಾವರ್ಧಕ ಸಂಘದ ‘ಹೀರೇದ ಸೂಗಮ್ಮ ಶಾಲೆ’ಯ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಅದ್ಧೂರಿ ಸಮಾರಂಭಕ್ಕೆ ಕೊಪ್ಪಳ ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಆರಂಭದಲ್ಲೇ ಮೈಕ್ ವ್ಯವಸ್ಥೆಯಲ್ಲಿ ತಾಂತ್ರಿಕ ದೋಷ ಹಾಗೂ ಗದ್ದಲ ಉಂಟಾಯಿತು. ಸ್ವಾಮೀಜಿ ಪ್ರವಚನ ನೀಡುತ್ತಿರುವಾಗಲೇ ವೇದಿಕೆಯಲ್ಲಿದ್ದವರು ಅತಿಥಿಗಳು ಹಾಗೂ ರಾಜಕೀಯ ನಾಯಕರ ಆಗಮನದ ಕುರಿತು ಪದೇಪದೇ ಮೈಕ್‌ನಲ್ಲಿ ಘೋಷಣೆ ಮಾಡುತ್ತಾ ಅಡ್ಡಿಪಡಿಸಿದರು. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ವಾದ್ಯಮೇಳಗಳ ಸದ್ದು, ಬೆಂಬಲಿತರ ಕೂಗಾಟ ಹಾಗೂ ಧ್ವನಿವರ್ಧಕದ ಮ್ಯೂಸಿಕ್ ಹೆಚ್ಚಾಯಿತು. ಪ್ರವಚನಕ್ಕೆ ಪದೇಪದೇ ಅಡ್ಡಿಯಾಗಿದ್ದರಿಂದ ತೀವ್ರ ಅಸಮಾಧಾನಗೊಂಡ ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿಗಳು ತಮ್ಮ ಮಾತುಗಳನ್ನು ಅರ್ಧಕ್ಕೆ ನಿಲ್ಲಿಸಿದರು. ಈ ವೇಳೆ ಸಚಿವ ಈಶ್ವರ ಖಂಡ್ರೆ ಅವರು ಶ್ರೀಗಳ ಆಶೀರ್ವಾದ ಪಡೆದು ಒಂದೆರಡು ಮಾತುಗಳನ್ನಾಡಿ ಕುಳಿತರು. ತಕ್ಷಣವೇ ಶ್ರೀಗಳು ಯಾರಿಗೂ ಕಾಯದೆ ನಿಧಾನವಾಗಿ ವೇದಿಕೆಯಿಂದ ನಿರ್ಗಮಿಸಿದರು. ಪೂಜ್ಯ ಸ್ವಾಮೀಜಿಗಳಿಗೆ ಸಾರ್ವಜನಿಕವಾಗಿ ಉಂಟಾದ ಈ ಮುಜುಗರದ ಘಟನೆ ಗವಿಮಠದ ಲಕ್ಷಾಂತರ ಭಕ್ತರಲ್ಲಿ ತೀವ್ರ ಬೇಸರ ತಂದಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us