ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲೇ ಆರೋಗ್ಯಾಧಿಕಾರಿಗಳ ಡ್ಯಾನ್ಸ್: ತೆಲುಗು ಹಾಡಿಗೆ ಹೆಜ್ಜೆ ಹಾಕಿದ ವೈದ್ಯರ ವಿಡಿಯೋ ವೈರಲ್

Edited By:

Updated on: Sep 25, 2026 | 2:03 PM

ಬಳ್ಳಾರಿ ಚಳ್ಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಅಧಿಕಾರಿಗಳು ಆಸ್ಪತ್ರೆಯಲ್ಲೇ ತೆಲುಗು ಹಾಡಿಗೆ ಕುಣಿದ ವಿಡಿಯೋ ವೈರಲ್ ಆಗಿದೆ. ಆಗಸ್ಟ್ 15ರಂದು ಕರ್ತವ್ಯದ ವೇಳೆ ಹುಲಿಗೇಶ್ ಮತ್ತು ಬಿ. ಕವಿತಾ ಅವರು ಮೋಜು-ಮಸ್ತಿ ನಡೆಸಿದ್ದು, ರೋಗಿಗಳ ಆರೈಕೆಗೆ ಬದಲಾಗಿ ನೃತ್ಯದಲ್ಲಿ ತೊಡಗಿದ್ದರು. ಈ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಸ್ಥಳೀಯರು ಆಗ್ರಹಿಸಿದ್ದಾರೆ.

ಬಳ್ಳಾರಿ ಸೆ. 25: ರೋಗಿಗಳ ಆರೈಕೆ ಮತ್ತು ತುರ್ತು ವೈದ್ಯಕೀಯ ಸೇವೆ ನೀಡಬೇಕಾದ ಸರ್ಕಾರಿ ಆಸ್ಪತ್ರೆಯಲ್ಲೇ ಆರೋಗ್ಯಾಧಿಕಾರಿಗಳು ತೆಲುಗು ಸಿನಿಮಾ ಹಾಡಿಗೆ ಕುಣಿದು ಕುಪ್ಪಳಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಬಳ್ಳಾರಿ ತಾಲೂಕಿನ ಚಳ್ಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (PHC) ಈ ಘಟನೆ ನಡೆದಿದ್ದು, ಆಸ್ಪತ್ರೆಯ ಕರ್ತವ್ಯ ನಿರತ ಅಧಿಕಾರಿಗಳು ಮೋಜು-ಮಸ್ತಿ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಚಳ್ಳಗುರ್ಕಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಹುಲಿಗೇಶ್ ಹಾಗೂ ಆರೋಗ್ಯ ಸುರಕ್ಷಣಾಧಿಕಾರಿ ಬಿ. ಕವಿತಾ ಎಂಬುವವರೇ ಆಸ್ಪತ್ರೆಯಲ್ಲೇ ಡ್ಯಾನ್ಸ್ ಮಾಡಿದ ಅಧಿಕಾರಿಗಳು. ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆಸ್ಪತ್ರೆ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ, ಆಸ್ಪತ್ರೆಯ ಕೊಠಡಿಯಲ್ಲೇ ಸೌಂಡ್ ಸಿಸ್ಟಮ್ ಹಾಕಿ ಇಬ್ಬರೂ ಅಧಿಕಾರಿಗಳು ತೆಲುಗಿನ ಪ್ರಸಿದ್ಧ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅಧಿಕಾರಿಗಳು ಕುಣಿಯುತ್ತಿದ್ದಾಗ ಆಸ್ಪತ್ರೆಯ ಇತರ ಸಿಬ್ಬಂದಿ ವರ್ಗದವರು ಪ್ರೋತ್ಸಾಹಿಸಿ ಸಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. “ರೋಗಿಗಳು ಬಂದು ಚಿಕಿತ್ಸೆಗಾಗಿ ಕಾಯುವ ಸ್ಥಳದಲ್ಲಿ ವೈದ್ಯಾಧಿಕಾರಿಗಳು ಜವಾಬ್ದಾರಿ ಮರೆತು ಕುಣಿದು ಕುಪ್ಪಳಿಸಿರುವುದು ಖಂಡನೀಯ. ಸಂಬಂಧಪಟ್ಟ ಜಿಲ್ಲಾ ಆರೋಗ್ಯ ಅಧಿಕಾರಿಗಳು (DHO) ತಕ್ಷಣವೇ ಈ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು” ಎಂದು ಸ್ಥಳೀಯರು ಹಾಗೂ ನಾಗರಿಕ ಹಕ್ಕು ಹೋರಾಟಗಾರರು ಆಗ್ರಹಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ವಿನಾಯಕ ಬಡಿಗೇರ್​